ಮಕ್ಕಳಿಗಾಗಿ ಬೈಬಲ್Sample

ಒಂದು ಗುಡ್ಡದ ಬಳಿಯಲ್ಲಿ ಬಹಳಷ್ಟು ಜನರು ಸೇರಿದ್ದರು. ಗದ್ದಲ ವಿಪರೀತವಾಗಿತ್ತು. ಅಲ್ಲಿ ಮಹಿಳೆಯೊಬ್ಬಳು ನಿಂತಿದ್ದಳು. ಆಕೆಯ ದೃಷ್ಟಿ ಅಲ್ಲಿ ನಡೆಯುತ್ತಿದ್ದ ಕಾರ್ಯದ ಮೇಲಿತ್ತು. ಆಕೆಯ ಹೆಸರು ಮರಿಯಳು. ಆಕೆಯ ಮಗನನ್ನು ಶಿಲುಬೆಗೆ ಏರಿಸಲಾಗಿತ್ತು. ಆಕೆ ಶಿಲುಬೆಯ ಬಳಿಯಲ್ಲಿ ನಿಂತು ನೀರು ತುಂಬಿದ ಕಣ್ಣುಗಳಿಂದ ತನ್ನ ಮಗನನ್ನು ನೋಡುತ್ತಿದ್ದಳು.
ಯಾಕೆ ಹೀಗಾಯಿತು? ಯೇಸು ಕ್ರಿಸ್ತನು ಜನರಿಗೆ ಉಪಕಾರ ಮಾಡುತ್ತಾ ಪರಲೋಕ ರಾಜ್ಯದ ಕುರಿತು ತಿಳಿಸುತ್ತಾ ಇದ್ದನಲ್ಲವೆ? ಶಿಲುಬೆಯ ಮೇಲೆ ಸಾಯುವದಕ್ಕೆ ಆತನು ಯಾವ ತಪ್ಪನ್ನು ಮಾಡಿದನು? ದೇವರು ತನ್ನ ಮಗನನ್ನು ಶಿಲುಬೆಯ ಮೇಲೆ ಸಾಯುವದಕ್ಕೆ ಬಿಟ್ಟುಕೊಟ್ಟನೋ? ತಾನು ಯಾರು ಎಂದು ಹೇಳಿಕೊಳ್ಳುವದರಲ್ಲಿ ಯೇಸು ಕ್ರಿಸ್ತನು ತಪ್ಪು ಮಾಡಿದನೋ? ದೇವರು ತನ್ನ ಮಗನ ಕೈ ಬಿಟ್ಟನೋ?
ಎಂದಿಗೂ ಇಲ್ಲ. ದೇವರು ತನ್ನ ಮಗನ ಕೈ ಬಿಡಲಿಲ್ಲ. ಯೇಸು ಕ್ರಿಸ್ತನು ಯಾವ ತಪ್ಪನ್ನು ಮಾಡಲಿಲ್ಲ. ಕೆಟ್ಟ ಜನರು ತನ್ನನ್ನು ಶಿಲುಬೆಗೇರಿಸುವರು ಎಂಬ ಸಂಗತಿಯನ್ನು ಯೇಸು ಕ್ರಿಸ್ತನು ಮೊದಲೇ ಅರಿತವನಾಗಿದ್ದನು. ಯೇಸು ಹುಟ್ಟಿದಾಗಲೇ ದೇವಭಕ್ತನಾದ ಸಿಮೆಯೋನ ಎಂಬವನು ಆತನ ತಾಯಿಯಾದ ಮರಿಯಳಿಗೆ ಈ ದುಃಖದ ವಿಷಯವನ್ನು ತಿಳಿಸಿದ್ದನು.
ಆತನು ಸಾಯುವದಕ್ಕಿಂತ ಕೆಲವು ದಿವಸಗಳ ಮುಂಚೆ ಒಬ್ಬ ಹೆಣ್ಣು ಮಗಳು ತುಂಬಾ ಬೆಲೆಯುಳ್ಳ ಸುಗಂಧ ತೈಲ (ಎಣ್ಣೆ) ಆತನ ಪಾದಗಳ ಮೇಲೆ ಹೊಯ್ದಳು. “ಈಕೆ ಹಣವನ್ನು ನಷ್ಟ ಮಾಡಿದಳು” ಎಂದು ಆತನ ಶಿಷ್ಯರು ಗುಣುಗುಟ್ಟಿದರು. ಆದರೆ ಯೇಸು ಕ್ರಿಸ್ತನು, “ಈಕೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ; ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯ್ದದ್ದು ನನ್ನ ಉತ್ತರ ಕ್ರಿಯೆಗಾಗಿಯೇ” ಎಂದು ಹೇಳಿದನು. ಎಂಥಾ ಆಶ್ಚರ್ಯಕರವಾದ ಮಾತುಗಳು!
ಇದಾದನಂತರ ಯೇಸುಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದ ಎಂಬವನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಯೇಸುವನ್ನು ಹಿಡುಕೊಡುವೆನೆಂದು ಮಹಾಯಾಕರಿಗೆ ಹೇಳಿದನು.
ಯೆಹೂದ್ಯರ ಪಸ್ಕ ಹಬ್ಬದ ದಿನದಂದು ಯೇಸು ಕ್ರಿಸ್ತನು ತನ್ನ ಶಿಷ್ಯರ ಸಂಗಡ ಕಡೇ ರಾತ್ರಿ ಭೋಜನವನ್ನು ಮಾಡಿದನು. ಆ ರಾತ್ರಿ ಆತನು ತನ್ನ ಶಿಷ್ಯರಿಗೆ ದೇವರ ಕುರಿತು ಅನೇಕ ಸಂಗತಿಗಳನ್ನು ತಿಳಿಸಿದನು. ಮತ್ತು ಆತನನ್ನು ಪ್ರೀತಿಸುವವರಿಗಾಗಿ ಮಾಡಿದ ವಾಗ್ದಾನಗಳ ಕುರಿತು ತಿಳಿಸಿದನು. ನಂತರ ಆತನು ರೊಟ್ಟಿಯನ್ನು ತೆಗೆದುಕೊಂಡು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ” ಎಂದು ಮತ್ತು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತ, ನನ್ನನ್ನು ನೆನಸಿಕೊಳ್ಳುವದಕೋಸ್ಕರ ರೊಟ್ಟಿಯನ್ನು ತಿಂದು ಪಾನಮಾನಮಾಡಿರಿ” ಎಂದು ಹೇಳಿದನು.
ಆ ಮೇಲೆ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಜನರು ತನ್ನನ್ನು ಹಿಡಿದುಕೊಂಡು ಹೋಗುವರು ಮತ್ತು ಶಿಷ್ಯರೆಲ್ಲರೂ ತನ್ನನ್ನು ಬಿಟ್ಟು ಓಡಿಹೋಗುವರು ಎಂದು ತಿಳಿಸಿದನು. ಆದರೆÀ ಪೇತ್ರನು, “ಎಲ್ಲರು ಓಡಿಹೋದರೂ ನಾನು ಹೋಗುವದಿಲ್ಲ, ನಿನ್ನೊಂದಿಗೆ ಸಾಯುವದಕ್ಕೂ ನಾನು ಸಿದ್ಧನಿದ್ದೇನೆ” ಎಂದು ಹೇಳಿದನು. “ಇಲ್ಲ ಪೇತ್ರ, ನೀನು ಹಾಗೆ ಮಾಡುವದಿಲ್ಲ, ಮುಂಜಾನೆ ಕೋಳಿ ಕೊಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನನ್ನು ಅಲ್ಲಗಳೆಯುವಿ” ಎಂದು ಕರ್ತನು ಹೇಳಿದನು.
ಊಟವಾದ ನಂತರ ಯೇಸುಕ್ರಿಸ್ತನು ತನ್ನ ಶಿಷ್ಯರೊಂದಿಗೆ ಗೆತ್ಸೇಮನೆ ತೋಟಕ್ಕೆ ಹೋದನು. “ನಾನು ಮುಂದೆ ಹೋಗಿ ಪ್ರಾರ್ಥಿಸುವೆನು, ನೀವು ಇಲ್ಲೇ ಇದ್ದು ಕಾದುಕೊಂಡಿರಿ” ಎಂದು ತನ್ನ ಶಿಷ್ಯರಿಗೆ ಹೇಳಿದನು. ಆದರೆ ಶಿಷ್ಯರು ನಿದ್ರಿಸ ತೊಡಗಿದರು. ಯೇಸು ಪ್ರಾರ್ಥನೆ ಮಾಡುತ್ತಾ, “ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ, ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ಪ್ರಾರ್ಥಿಸಿದನು.
ಪಕ್ಕನೆ ಜನರ ದೊಡ್ಡ ಗುಂಪೊಂದು ಆ ತೋಟದೊಳಗೆ ಬಂತು. ಆ ಗುಂಪಿನ ಮುಂದುಗಡೆಯಲ್ಲಿ ಯೂದನು ಬಂದನು. ಜನರು ಆತನನ್ನು ಹಿಡಿದುಕೊಂಡರು. ಯೇಸು ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಪೇತ್ರನು ತನ್ನಲ್ಲಿರುವ ಕತ್ತಿಯಿಂದ ಒಬ್ಬ ಮನುಷ್ಯನ ಕಿವಿಯನ್ನು ಕತ್ತರಿಸಿದನು. ಯೇಸು ಕ್ರಿಸ್ತನು ಆ ಮನುಷ್ಯನ ಕಿವಿಯನ್ನು ಮುಟ್ಟಿ ಸ್ವಸ್ಥಪಡಿಸಿದನು. ತನ್ನನ್ನು ಹಿಡುಕೊಂಡು ಹೋಗುವದು ದೇವರ ಯೋಜನೆಯಾಗಿದೆ ಎಂಬದನ್ನು ಯೇಸು ತಿಳಿದಿದ್ದನು.
ಜನರು ಯೇಸು ಕ್ರಿಸ್ತನನ್ನು ತೆಗೆದುಕೊಂಡು ಮಹಾಯಾಜಕನ ಬಳಿಗೆ ಒಯ್ದರು. ಯೆಹೂದ್ಯ ಜನರ ಹಿರಿಯರು ಯೇಸು ಮರಣ ಹೊಂದಬೇಕೆಂದು ತೀರ್ಮಾನಿಸಿದರು. ಸ್ವಲ್ಪ ದೂರದಲ್ಲಿ ಪೇತ್ರನು ಚಳಿಕಾಯಿಸಿಕೊಳ್ಳುತ್ತಿದ್ದನು ಮತ್ತು ಏನಾಗುತ್ತಿದೆ ಎಂದು ನೋಡುತ್ತಿದ್ದನು. ಮೂರು ಸಲ ಜನರು ಪೇತ್ರನನ್ನು, “ನೀನು ಯೇಸುವಿನ ಸಂಗಡ ಇದ್ದವನು” ಎಂದು ಹೇಳಿದರು. ಯೇಸು ಕ್ರಿಸ್ತನು ಮೊದಲೇ ಹೇಳಿದಂತೆ ಅವನು ಮೂರು ಸಲವೂ ಕ್ರಿಸ್ತನನ್ನು ಅರಿಯೆನು ಎಂದು ಹೇಳಿದನು. ಅವನು ಶಪಿಸಿಕೊಂಡನು ಮತ್ತು ಆಣೆ ಇಟ್ಟುಕೊಂಡನು.
ಆಗಲೇ ಕೋಳಿ ಕೂಗಿತು. ಅದು ಪೇತ್ರನಿಗೆ ದೇವರ ಸ್ವರದಂತಿತ್ತು. ಅವನು ಯೇಸು ತನಗೆ ಹೇಳಿದ ಮಾತುಗಳನ್ನು ನೆನಸಿಕೊಂಡು ಬಹಳವಾಗಿ ಅತ್ತನು.
ಯೇಸುವನ್ನು ಮೂವತ್ತು ಬೆಳ್ಳಿ ನಾಣ್ಯಗಳಿಗಾಗಿ ಹಿಡುಕೊಟ್ಟ ಯೂದನು ಕೂಡ ತಾನು ಮಾಡಿದ ಕಾರ್ಯಕ್ಕಾಗಿ ದುಃಖಪಟ್ಟನು. ಯೇಸು ಕ್ರಿಸ್ತನು ಯಾವ ಪಾಪ ಅಥವಾ ಅಪರಾಧವನ್ನು ಮಾಡಿಲ್ಲವೆಂಬದು ಅವನಿಗೆ ತಿಳಿದಿತ್ತು. ಯೂದನು ಆ ಹಣವನ್ನು ಹಿಂದಕ್ಕೆ ಕೊಡಲು ಮಹಾ ಯಾಜಕರ ಬಳಿಗೆ ಹೋದನು, ಆದರೆ ಅವರು ತೆಗೆದುಕೊಳ್ಳಲಿಲ್ಲ.
ಯೂದನು ಆ ಹಣವನ್ನು ಬಿಸಾಡಿದನು ಮತ್ತು ಹೋಗಿ ನೇಣುಹಾಕಿಕೊಂಡು ಸತ್ತನು.
ಮಹಾ ಯಾಜಕರು ಯೇಸುವನ್ನು ದೇಶಾಧಿಪತಿಯಾದ ಪಿಲಾತನ ಬಳಿಗೆ ತಂದರು. “ನನಗೆ ಈ ಮನುಷ್ಯನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ,” ಎಂದು ಪಿಲಾತನು ಹೇಳಿದನು. “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು,” ಎಂದು ಜನರು ಕೂಗುತ್ತಾ ಇದ್ದರು.
ಕೊನೆಗೆ ಪಿಲಾತನು ಅವರ ಮಾತಿಗೆ ಒಪ್ಪಿ ಯೇಸುವಿಗೆ ಶಿಲುಬೆಗೆ ಹಾಕಲು ಅಪ್ಪಣೆ ಕೊಟ್ಟನು. ಸಿಪಾಯಿಗಳು ಆತನ ಮುಖದ ಮೇಲೆ ಉಗುಳಿದರು, ಗುದ್ದಿದರು, ಮತ್ತು ಕೊರಡೆಗಳಿಂದ ಹೊಡೆದರು. ಮುಳ್ಳುಗಳನ್ನು ಕಿರೀಟದಂತೆ ಮಾಡಿ ಆತನ ತಲೆಯ ಮೇಲಿಟ್ಟು ಕೋಲಿನಿಂದ ಹೊಡೆದರು. ಆತನು ಸಾಯುವಂತೆ ಕಟ್ಟಿಗೆಯ ಶಿಲುಬೆಗೆ ಮೊಳೆಗಳಿಂದ ಜಡಿದರು.
ತಾನು ಇಂಥ ರೀತಿಯಲ್ಲಿ ಸಾಯುವೆನೆಂಬದು ಯೇಸುವಿಗೆ ತಿಳಿದಿತ್ತು. ಆತನಲ್ಲಿ ನಂಬಿಕೆಯಿಡುವವರಿಗೆ ಆತನ ಮರಣದ ಮೂಲಕ ಪಾಪಕ್ಷಮಾಪಣೆ ಉಂಟಾಗುತ್ತದೆ ಎಂಬ ಸಂಗತಿ ಕೂಡ ಆತನಿಗೆ ತಿಳಿದಿತ್ತು. ಇಬ್ಬರು ಕಳ್ಳರು ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟರು. ಅವರಲ್ಲಿ ಒಬ್ಬನು ಯೇಸುವಿನ ಮೇಲೆ ನಂಬಿಕೆಯಿಟ್ಟು ಪರದೈಸಿಗೆ ಹೋದನು. ಇನ್ನೊಬ್ಬನು ಹಾಗೆ ಮಾಡಲಿಲ್ಲ.
ಅನೇಕ ಗಂಟೆಗಳವರೆಗೆ ಕಷ್ಟ ಪಟ್ಟನಂತರ ಯೇಸು, “ತೀರಿತು” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳಿ ಪ್ರಾಣ ಬಿಟ್ಟನು. ಆತನು ಮಾಡಬೇಕಾದ ಕಾರ್ಯವು ಪೂರ್ಣಗೊಂಡಿತು. ಆತನ ಸ್ನೇಹಿತರು ಆತನ ದೇಹವನ್ನು ಪ್ರತ್ಯೇಕವಾದ ಒಂದು ಸಮಾಧಿಯಲ್ಲಿ ಇಟ್ಟರು.
ರೋಮನ್ ಸಿಪಾಯಿಗಳು ಸಮಾಧಿಯ ಕಲ್ಲಿಗೆ ಮುದ್ರೆಹಾಕಿ ಕಾವಲು ಇಟ್ಟರು. ಯಾರು ಆ ಸಮಾಧಿಯ ಒಳಗೆ ಹೋಗುವಂತಿರಲಿಲ್ಲ.
ಈ ಕಥೆಯು ಇಲ್ಲಿಗೇ ಕೊನೆಗೊಂಡಿದ್ದರೆ, ಇದೊಂದು ದುಃಖದ ಕಥೆಯಾಗುತ್ತಿತ್ತು. ಆದರೆ ದೇವರು ಒಂದು ಅದ್ಭುತ ಕಾರ್ಯವನ್ನೇ ಮಾಡಿದನು! ಯೇಸು ಸತ್ತವನಾಗಿಯೇ ಉಳಿಯಲಿಲ್ಲ.
ವಾರದ ಮೊದಲನೆಯ ದಿನ ಮುಂಜಾನೆ ಅಂದರೆ ಇನ್ನು ಕತ್ತಲೆ ಇರುವಾಗಲೇ ಆತನ ಶಿಷ್ಯರಲ್ಲಿ ಕೆಲವರು ಸಮಾಧಿಗೆ ಬಂದಾಗ ಅದನ್ನು ಮುಚ್ಚಲು ಇಟ್ಟ ಕಲ್ಲು ಉರುಳಿಸಲಾಗಿತ್ತು. ಅವರು ಸಮಾಧಿಯ ಒಳಗೆ ಹೋಗಿ ನೋಡಿದರು. ಯೇಸು ಅಲ್ಲಿ ಇರಲಿಲ್ಲ.
ಸಮಾಧಿಯ ಬಳಿಯಲ್ಲಿ ಒಬ್ಬ ಹೆಣ್ಣು ಮಗಳು ಅಳುತ್ತಾ ನಿಂತಿದ್ದಳು. ಯೇಸು ಆಕೆಗೆ ಕಾಣಿಸಿಕೊಂಡನು. ಆಕೆ ಶಿಷ್ಯರ ಬಳಿಗೆ ಓಡಿ ಹೋಗಿ, “ಯೇಸು ಜೀವಂತವಾಗಿದ್ದಾನೆ! ಆತನು ಸತ್ತವರೊಳಗಿಂದ ಎದ್ದಿದಾನೆ!” ಎಂದು ತಿಳಿಸಿದಳು.
ಸ್ವಲ್ಪ ಸಮಯದ ನಂತರ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಆತನು ಅವರಿಗೆ ತನ್ನ ಕೈಗಳಲ್ಲಿರುವ ಗಾಯಗಳನ್ನು ತೋರಿಸಿದನು. ಯೇಸು ಕ್ರಿಸ್ತನು ಜೀವಂತವಾಗಿರುವದು, ಸತ್ತವರೊಳಗಿಂದ ಎದ್ದು ಬಂದದ್ದು ಸತ್ಯವಾಗಿತ್ತು! ತನ್ನನ್ನು ಅರಿಯೆನು ಎಂದು ಹೇಳಿದ ಪೇತ್ರನನ್ನು ಆತನು ಕ್ಷಮಿಸಿದನು. ತನ್ನ ಕುರಿತು ಲೋಕದ ಎಲ್ಲಾ ಜನರಿಗೆ ತಿಳಿಸಿ ಹೇಳಬೇಕೆಂದು ತನ್ನ ಶಿಷ್ಯರಿಗೆ ಅಪ್ಪಣೆಕೊಟ್ಟನು. ಆತನು ಮನುಷ್ಯನಾಗಿ ಹುಟ್ಟಿ ಬರುವದಕ್ಕಿಂತ ಮುಂಚೆ ಎಲ್ಲಿದ್ದನೋ ಅದೇ ಸ್ಥಳಕ್ಕೆ ಅಂದರೆ ಪರಲೋಕಕ್ಕೆ ಏರಿಹೋದನು.
ಮುಕ್ತಾಯ
Scripture
About this Plan

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.
More