YouVersion Logo
Search Icon

ಮಕ್ಕಳಿಗಾಗಿ ಬೈಬಲ್Sample

ಮಕ್ಕಳಿಗಾಗಿ ಬೈಬಲ್

DAY 1 OF 8

ನಮ್ಮನ್ನು ಯಾರು ಉಂಟುಮಾಡಿದರು? ದೇವರ ವಾಕ್ಯವಾದ ಬೈಬಲ್ ಮನುಷ್ಯರು ಈ ಭೂಮಿಯ ಮೇಲೆ ಹೇಗೆ ಬಂದರು ಎಂದು ತಿಳಿಸುತ್ತದೆ. ಅನೇಕ ವರ್ಷಗಳ ಹಿಂದೆ ದೇವರು ಮೊದಲ ಮನುಷ್ಯನನ್ನು ಉಂಟು ಮಾಡಿದನು. ದೇವರು ಭೂಮಿಯ ಮೇಲಿರುವ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನೊಳಗೆ ತನ್ನ ಜೀವಶಾಸ್ವವನ್ನು ಊದಿದನು. ಆಗ ಅವನು ಜೀವಿಸುವವನಾದನು. ದೇವರು ಅವನಿಗೆ ಆದಾಮನೆಂದು ಕರೆದನು, ಮತ್ತು ಅವನನ್ನು ಏದೇನ್ ಎಂಬ ಸುಂದರವಾದ ತೋಟದೊಳಗೆ ಇರಿಸಿದನು.

ದೇವರು ಆದಾಮನನ್ನು ಉಂಟುಮಾಡುವದಕ್ಕಿಂತ ಮುಂಚೆ ಲೋಕವನ್ನು ಸುಂದರವಾದ ವಸ್ತುಗಳನ್ನು, ಜೀವಿಗಳನ್ನು, ಉಂಟುಮಾಡಿದನು. ಬೆಟ್ಟಗುಡ್ಡಗಳನ್ನು, ಹುಲ್ಲುಗಾವಲುಗಳನ್ನು, ಸುವಾಸನೆಯ ಹೂವುಗಳನ್ನು, ಎತ್ತರವಾದ ಮರಗಳನ್ನು, ಸುಂದರವಾದ ಪಕ್ಷಿಗಳನ್ನು, ಜೇನು ನೊಣಗಳನ್ನು, ಮಿÁನುಗಳನ್ನು ಹರಿದಾಡುವ ಕ್ರಿಮಿ ಕೀಟ ಇವೆಲ್ಲವನ್ನು ಹಂತ ಹಂತವಾಗಿ ಉಂಟು ಮಾಡಿದನು. ಹೌದು, ದೇವರು ಆಕಾಶ-ಭೂಮಿಗಳನ್ನು ಅವುಗಳಲ್ಲಿರುವ ಸಮಸ್ತವನ್ನು ಉಂಟು ಮಾಡಿದನು.

ಆದಿಯಲ್ಲಿ ಅಂದರೆ ದೇವರು ಯಾವದನ್ನೂ ಉಂಟು ಮಾಡುವದಕ್ಕಿಂತ ಮುಂಚೆ ದೇವರ ಹೊರತು ಯಾವದೂ ಅಸ್ಥಿತ್ವದಲ್ಲಿರಲಿಲ್ಲ. ಮನುಷ್ಯರು, ದೇಶಗಳು, ಸ್ಥಳಗಳು ಅಥವಾ ವಸ್ತುಗಳು, ಯಾವದೂ ಇರಲಿಲ್ಲ. ಬೆಳಕು ಇರಲಿಲ್ಲ. ಕತ್ತಲು ಮಾತ್ರ ಇತ್ತು. ಸಮಯ ಕೂಡ ಇರದರಿಂದ ಈ ಹೊತ್ತು ನಾಳೆ ಎಂಬವು ಇರಲಿಲ್ಲ. ದೇವರಿಗೆ ಆರಂಭವಿಲ್ಲದಿರುವದರಿಂದ ಆತನೊಬ್ಬನೇ ಇದ್ದನು. ನಂತರ ದೇವರು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದನು!

ಆದಿಯಲ್ಲಿ ಅಂದರೆ ಅನೇಕಾನೇಕ ವರ್ಷಗಳ ಹಿಂದೆ ದೇವರು ಆಕಾಶವನ್ನು ಭೂಮಿಯನ್ನು ಉಂಟುಮಾಡಿದನು.

ಭೂಮಿಯು ಕ್ರಮವಿಲ್ಲದ್ದು ಮತ್ತು ಬರಿದಾಗಿಯು ಇತ್ತು. ಆದಿಸಾಗರದ ಮೇಲೆ ಕತ್ತಲು ಮುಚ್ಚಿಕೊಂಡಿತ್ತು. ಆಗ ದೇವರು “ಬೆಳಕಾಗಲಿ” ಎಂದು ಹೇಳಿದನು.

ತಕ್ಷಣವೇ ಬೆಳಕು ಕಾಣಿಸಿಕೊಂಡಿತು. ದೇವರು ಬೆಳಕನ್ನು ಕತ್ತಲೆಯನ್ನು ಬೇರೆ ಬೇರೆ ಮಾಡಿ, ಬೆಳಕಿಗೆ ಹಗಲು ಎಂದು ಮತ್ತು ಕತ್ತಲೆಗೆ ರಾತ್ರಿ ಎಂದು ಕರೆದನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೊದಲನೆಯ ದಿನವಾಯಿತು.

ಎರಡನೆಯ ದಿನ ದೇವರು ಆಕಾಶದ ಕೆಳಗೆ ಅಂದರೆ ಭೂಮಿಯ ಮೇಲೆ ನೀರುಗಳುಳ್ಳ ಸಾಗರಗಳು, ಸಮುದ್ರಗಳು ಮತ್ತು ಕೆರೆಗಳು ರೂಪಗೊಳ್ಳವಂತೆ ಮಾಡಿದನು. ಹಾಗೆಯೇ ಒಣನೆಲವು ಕಾಣುವಂತೆ ಮಾಡಿದನು. ಸಾಯಂಕಾಲವೂ ಮುಂಜಾನೆಯೂ ಆಗಿ ಎರಡನೆಯ ದಿನವಾಯಿತು.

ನಂತರ ದೇವರು ಒಣನೆಲದಲ್ಲಿ ಹುಲ್ಲು, ಗಿಡ, ಮರ, ಪೊದೆಗಳು ಹುಟ್ಟುಕೊಳ್ಳಲಿ ಎಂದು ಹೇಳಿದನು. ದೇವರು ಹೇಳಿದಂತೆಯೇ ಎಲ್ಲವೂ ಕಾಣಿಸಿಕೊಂಡವು. ಸಾಯಂಕಾಲವೂ ಮುಂಜಾನೆಯೂ ಆಗಿ ಮೂರನೆಯ ದಿನವಾಯಿತು.

ನಂತರ ದೇವರು ಸೂರ್ಯನನ್ನು, ಚಂದ್ರನನ್ನು ಮತ್ತು ಲೆಕ್ಕವಿಲ್ಲದಷ್ಟು ನಕ್ಷತ್ರಗಳನ್ನು ಉಂಟು ಮಾಡಿದನು. ಸಾಯಂಕಾಲವೂ ಮುಂಜಾನೆಯೂ ಆಗಿ ನಾಲ್ಕನೆಯ ದಿನವಾಯಿತು.

ನೀರಿನಲ್ಲಿ ಚಲಿಸುವ ಜೀವಿಗಳನ್ನು ಮತ್ತು ಹಾರಾಡುವ ಪಕ್ಷಿಗಳನ್ನು ದೇವರು ಉಂಟು ಮಾಡಿದನು. ನೀರಿನಲ್ಲಿ, ಜೀವಿಸುವ ಎಲ್ಲಾ ಜೀವಿಗಳು ಉಂಟಾಗಲಿ ಎಂದು ದೇವರು ಹೇಳಿದ ಕೂಡಲೆ ದೊಡ್ಡ ಸಣ್ಣ ಮಿÁನುಗಳು, ಎಲ್ಲಾ ತರದ ಸಮುದ್ರ ಜೀವಿಗಳು ಉಂಟಾದವು. ನಂತರ ದೇವರು ಆಕಾಶದಲ್ಲಿ ಹಾರಾಡುವ ಎಲ್ಲಾ ತರದ ಪಕ್ಷಿಗಳನ್ನು, ಭೂಮಿಯ ಮೇಲೆ ಇರುವ ಪಕ್ಷಿಗಳನ್ನು ಉಂಟು ಮಾಡಿದನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಐದನೆಯ ದಿನವಾಯಿತು.

ಸಮುದ್ರ ಜೀವಿಗಳು, ಹಾರಾಡುವ ಪಕ್ಷಿಗಳಷ್ಟೇ ಅಲ್ಲ, ದೇವರು ಆರನೆಯ ದಿನದಲ್ಲಿ ನೆಲದ ಮೇಲೆ ಚಲಿಸುವ ಎಲ್ಲಾ ತರವಾದ ಪ್ರಾಣಿಗಳನ್ನು ಉಂಟುಮಾಡಿದನು. ದೊಡ್ಡ ಗಾತ್ರದ ಆನೆಗಳು, ನೀರ್ಗುದುರೆಗಳು, ಸಣ್ಣಗಾತ್ರದ ಮೊಲಗಳು, ನರಿಗಳು, ನೋಡಲು ಅಂದವಾದ ಜಿಂಕೆಗಳು, ವಿಕಾರವೆನಿಸುವ ಮೊಸಳೆಗಳು, ಭೂಮಿಯ ಮೇಲೆ ಹರಿದಾಡುವ ಕ್ರಿಮಿ, ಕೀಟಗಳು, ಜಿರಾಫೆ, ನಾಯಿ, ಬೆಕ್ಕು ಈ ಎಲ್ಲಾ ಪ್ರಾಣಿಗಳನ್ನು ದೇವರು ಉಂಟುಮಾಡಿದನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಆರನೆಯ ದಿನವಾಯಿತು.

ಆರನೆಯ ದಿನದಂದು ದೇವರು ಮತ್ತೊಂದು ಕಾರ್ಯವನ್ನು ಕೂಡ ಮಾಡಿದನು. ಅದು ವಿಶೇಷವಾದ ಕಾರ್ಯವಾಗಿತ್ತು. ಮನುಷ್ಯರಿಗಾಗಿ ಎಲ್ಲವೂ ಸಿದ್ಧವಾಗಿತ್ತು. ಕಾಯಿ, ಸೊಪ್ಪು, ಆಹಾರ ಧಾನ್ಯಗಳು, ಹಣ್ಣುಗಳು ಇದ್ದವು ಮತ್ತು ಪ್ರಾಣಿಗಳು ಅವನ ಸೇವೆಗಾಗಿ ಇದ್ದವು. ಆಗ ದೇವರು, “ಮನುಷ್ಯನನ್ನು ನಮ್ಮ ಹೋಲಿಕೆಗೆ ಸರಿಯಾಗಿ ಉಂಟು ಮಾಡೋಣ. ಅವನು ಎಲ್ಲಾದರ ಮೇಲೆ ದೊರೆತನ ಮಾಡಲಿ” ಎಂದು ಹೇಳಿದನು. ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೊಲಿಕೆಗೆ ಸರಿಯಾಗಿ ಉಂಟು ಮಾಡಿದನು.

ದೇವರು ಆದಾಮನೊಂದಿಗೆ ಮಾತಾಡಿ ಅವನಿಗೆ ಈ ಅಪ್ಪಣೆಯನ್ನು ಕೊಟ್ಟನು. “ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ಮಾತ್ರ ತಿನ್ನಲೇ ಬಾರದು, ತಿಂದ ದಿನವೇ ಸತ್ತು ಹೋಗುವಿ” ಎಂದು ದೇವರು ಆದಾಮನಿಗೆ ಹೇಳಿದನು.

ಮತ್ತು ಯೆಹೋವ ದೇವರು, “ಮನುಷ್ಯನು ಒಂಟಿಯಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಹೋಗುವ ಒಬ್ಬ ಸಹಕಾರಿಯನ್ನು ಉಂಟುಮಾಡುವೆನು” ಅಂದನು. ದೇವರು ಮನುಷ್ಯನ ಬಳಿಗೆ ಎಲ್ಲಾ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಬರಮಾಡಿದನು. ಆದಾಮನು ಅವೆಲ್ಲವುಗಳಿಗೂ ಹೆಸರುಗಳನ್ನು ಕೊಟ್ಟನು. ಹೀಗೆ ಮಾಡಲು ಮನುಷ್ಯನಿಗೆ ಬುದ್ಧಿಜ್ಞಾನವು ಬೇಕೆಲ್ಲವೇ. ಆದಾಮನು ಬುದ್ಧಿವಂತನೇ ಆಗಿದ್ದನು ಎಂದು ತಿಳಿದು ಬರುತ್ತದೆ. ಪ್ರಾಣಿ-ಪಕ್ಷಿಗಳಲ್ಲಿ ಆದಾಮನಿಗೆ ಸರಿಹೋಗುವ ಸಹಕಾರಿ ಕಾಣಿಸಲಿಲ್ಲ.

ದೇವರು ಆದಾಮನಿಗೆ ಗಾಢ ನಿದ್ರೆಯನ್ನು ಬರುವಂತೆ ಮಾಡಿದನು. ದೇವರು ಆದಾಮನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದು ಅದರಿಂದ ಸ್ತ್ರೀಯನ್ನು ಅಥವಾ ಹೆಣ್ಣು ಮಗಳನ್ನು ರೂಪಿಸಿದನು. ದೇವರು ಉಂಟು ಮಾಡಿದ ಆ ಹೆಣ್ಣು ಮಗಳು ಆದಾಮನಿಗೆ ಸರಿಹೋಗುವ ಸಹಕಾರಿಯಾದಳು. ಅವನು ಆಕೆಗೆ ಹವ್ವ ಎಂದು ಕರೆದನು.

ದೇವರು ಆರು ದಿನಗಳಲ್ಲಿ ಸೃಷ್ಟಿಸುವ ಕೆಲಸವನ್ನೆಲ್ಲಾ ಮುಗಿಸಿಬಿಟ್ಟನು. ಏಳನೆಯ ದಿನದಲ್ಲಿ ದೇವರು ವಿಶ್ರಾಂತಿ ಪಡೆದನು. ಏಳನೆಯ ದಿನದಲ್ಲಿ ದೇವರು ವಿಶ್ರಾಂತಿ ತೆಗೆದುಕೊಂಡದ್ದರಿಂದ ಅದನ್ನು ಆಶೀರ್ವದಿಸಿ ಅದು ವಿಶ್ರಾಂತಿಯ ದಿನವಾಗಿರಲಿ ಎಂದು ಹೇಳಿದನು. ಆದಾಮ-ಹವ್ವ ಇಬ್ಬರೂ ದೇವರಿಗೆ ವಿಧೇಯರಾಗಿ ಏದೇನ್ ತೋಟದಲ್ಲಿ ಸಂತೋಷವಾಗಿದ್ದರು. ದೇವರು ಅವರ ಕರ್ತನು, ಅವರಿಗೆ ಬೇಕಾದದ್ದನ್ನು ಒದಗಿಸುವವನು ಮತ್ತು ಅವರ ಆಪ್ತ ಸ್ನೇಹಿತನು ಆಗಿದ್ದನು.

ಮುಕ್ತಾಯ

About this Plan

ಮಕ್ಕಳಿಗಾಗಿ ಬೈಬಲ್

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.

More