ಚೆಫನ್ಯ 2
2
ಅನ್ಯಜನರೊಂದಿಗೆ ಯೆಹೂದ ಮತ್ತು ಯೆರೂಸಲೇಮಿನ ತೀರ್ಪು
ಪಶ್ಚಾತ್ತಾಪಪಡಲು ಯೆಹೂದಕ್ಕೆ ಆದೇಶ
1ನಾಚಿಕೆ ಇಲ್ಲದ ಜನಾಂಗದವರೇ,
ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ,
2ತೀರ್ಪು ಕಾರ್ಯಗತಗೊಳ್ಳುವ ಮುಂಚೆ
ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ
ಯೆಹೋವ ದೇವರ ಉಗ್ರಕೋಪವು
ನಿಮ್ಮ ಮೇಲೆ ಬರುವ ಮುಂಚೆ,
ಯೆಹೋವ ದೇವರ ಕೋಪದ ದಿನವು
ನಿಮ್ಮ ಮೇಲೆ ಬರುವ ಮುಂಚೆ,
3ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ
ಯೆಹೋವ ದೇವರನ್ನು ಹುಡುಕಿರಿ.
ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ.
ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.
ಫಿಲಿಷ್ಟಿಯದ ವಿರೋಧವಾಗಿ
4ಗಾಜವು ಕೈಬಿಡಲಾಗುವುದು;
ಅಷ್ಕೆಲೋನ್ ಹಾಳಾಗುವುದು;
ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು,
ಎಕ್ರೋನ್ ಕಿತ್ತೆಸೆಯಲಾಗುವುದು.
5ಅಯ್ಯೋ, ಕರಾವಳಿಯಲ್ಲಿ ವಾಸಿಸುವ
ಕೆರೇತ್ಯ ಜನಾಂಗವೇ,
ನಿನ್ನ ಗತಿಯನ್ನು ಏನು ಹೇಳಲಿ!
ಕಾನಾನೇ, ಫಿಲಿಷ್ಟಿಯ ದೇಶವೇ,
ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ,
“ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,”
ಎಂದು ಅವರು ಹೇಳುತ್ತಾರೆ.
6ಸಮುದ್ರದ ತೀರವು
ಕುರುಬರು ಮೇಯಿಸುವ ಸ್ಥಳಗಳಾಗಿಯೂ
ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.
7ಅದು ಯೆಹೂದದ ಮನೆತನದಲ್ಲಿ
ಉಳಿದವರ ವಶವಾಗುವುದು.
ಅದರ ಮೇಲೆ ಮೇಯಿಸುವರು.
ಅಷ್ಕೆಲೋನಿನ ಮನೆತನಗಳಲ್ಲಿ
ಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು.
ಏಕೆಂದರೆ ಅವರ ದೇವರಾದ ಯೆಹೋವ ದೇವರು,
ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು.
ಅಮ್ಮೋನು ಮತ್ತು ಮೋವಾಬುಗಳ ವಿರೋಧವಾಗಿ
8“ಮೋವಾಬಿನ ನಿಂದೆಯನ್ನೂ
ಅಮ್ಮೋನ್ಯರ ಬೈಗಳವನ್ನೂ
ಅವರು ನನ್ನ ಜನರನ್ನೂ ನಿಂದಿಸಿ,
ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.
9ಆದ್ದರಿಂದ ಇಸ್ರಾಯೇಲಿನ ದೇವರಾದ
ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ:
ನನ್ನ ಜೀವದಾಣೆ,”
“ನಿಶ್ಚಯವಾಗಿ ಮೋವಾಬು ಸೊದೋಮಿನ
ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು.
ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ
ನಿತ್ಯವಾಗಿ ಹಾಳಾದ ಸ್ಥಳವಾಗುವರು.
ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು.
ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”
10ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನು
ಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇ
ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು.
11ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ,
ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು.
ಇತರ ಜನಾಂಗಗಳ ದ್ವೀಪಗಳವರೆಲ್ಲರು
ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.
ಕೂಷ್ಯರ ವಿರೋಧವಾಗಿ
12ಕೂಷ್ ದೇಶದವರೇ, ನೀವೂ ಸಹ
ನನ್ನ ಖಡ್ಗದಿಂದ ಹತರಾಗುವಿರಿ.
ಅಸ್ಸೀರಿಯ
13ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ,
ಅಸ್ಸೀರಿಯರನ್ನು ನಾಶಮಾಡಿ
ನಿನೆವೆಯನ್ನು ಹಾಳಾಗಿಯೂ
ಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು.
14ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ
ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು,
ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ
ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು.
ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು,
ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು,
ದೇವದಾರು ಮರದ ತೊಲೆಗಳು ಕಳಚಿಬೀಳುವುವು.
15“ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,”
ಎಂದು ತನ್ನೊಳಗೆ ಎಂದುಕೊಂಡಂಥ
ಸುಭದ್ರ ನಿನೆವೆ ಪಟ್ಟಣವು ಇದೇ.
ಅದು ಎಷ್ಟೋ ಹಾಳಾಯಿತು;
ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು.
ಅದರಲ್ಲಿ ಹಾದುಹೋಗುವವರೆಲ್ಲರೂ
ನಿಂದಿಸಿ ಅಪಹಾಸ್ಯ ಮಾಡುವರು.
ទើបបានជ្រើសរើសហើយ៖
ಚೆಫನ್ಯ 2: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.