ನಹೂಮ 2
2
ನಿನೆವೆಯು ಬೀಳುವುದು
1ನಿನೆವೆಯೇ, ಮುತ್ತಿಗೆ ಹಾಕುವವನು ನಿನಗೆ ವಿರೋಧವಾಗಿ ಹೊರಟಿದ್ದಾನೆ,
ಕೋಟೆಯನ್ನು ಭದ್ರಪಡಿಸು;
ದಾರಿಯನ್ನು ಕಾಯಿ;
ನಡುವನ್ನು ಬಲಪಡಿಸಿಕೋ;
ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿಮಾಡಿಕೋ.
2ಯೆಹೋವ ದೇವರು ಯಾಕೋಬಿನ ಹೆಚ್ಚಳವನ್ನು
ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ಪುನಃ ಸ್ಥಾಪಿಸುತ್ತಾರೆ.
ನಾಶಕರು ಅವುಗಳನ್ನು ನಾಶಮಾಡಿದರೂ
ಅವರ ದ್ರಾಕ್ಷಿಬಳ್ಳಿಗಳನ್ನು ಕೆಡಿಸಿದ್ದಾರೆ.
3ಸೈನಿಕರ ಗುರಾಣಿಗಳು ಕೆಂಪಾಗಿವೆ;
ಯುದ್ಧವೀರರು ರಕ್ತವರ್ಣದ ಬಟ್ಟೆ ಧರಿಸಿದ್ದಾರೆ;
ಆತನು ಸಿದ್ಧಮಾಡುವ ದಿವಸದಲ್ಲಿ,
ರಥಗಳ ಉಕ್ಕು ಥಳಥಳಿಸುವುದು,
ತುರಾಯಿ ಮರದಿಂದ ಮಾಡಿದ ಈಟಿಗಳು ಝಳಪಿಸುವುವು;
4ರಥಗಳು ಬೀದಿಗಳಲ್ಲಿ ಬಿರುಗಾಳಿಯಂತೆ ಓಡಾಡುತ್ತವೆ,
ಅವು ಚೌಕಗಳಲ್ಲಿ ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನುಗ್ಗುತ್ತವೆ.
ಅವು ಉರಿಯುವ ಪಂಜುಗಳಂತೆ ಕಾಣುತ್ತವೆ;
ಅವರು ಮಿಂಚಿನಂತೆ ಸುತ್ತಾಡುತ್ತಾರೆ.
5ನಿನೆವೆಯು ತನ್ನ ಸೇನಾಪತಿಗಳನ್ನು ಕರೆಕಳುಹಿಸಿದ್ದಾನೆ.
ಅವರು ತಮ್ಮ ನಡೆಯಲ್ಲಿ ಎಡವುವರು.
ಅವರು ಸುಣ್ಣದ ಗೋಡೆಯ ಬಳಿಗೆ ತ್ವರೆಯಾಗಿ ಬರುವರು.
ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧ ಮಾಡಲಾಗಿದೆ.
6ನದಿಗಳ ಬಾಗಿಲುಗಳು ತೆರೆಯಲಾಗಿವೆ;
ಅರಮನೆ ಬಿದ್ದುಹೋಗುವುದು.
7ನಿನೆವೆಯು ಸೆರೆಯಾಗಿ
ಹೋಗಬೇಕೆಂಬ ಆಜ್ಞೆಯಾಗಿದೆ.
ಅವಳ ದಾಸಿಯರು ಪಾರಿವಾಳಗಳಂತೆ ರೋದಿಸುವರು,
ತಮ್ಮ ಎದೆಗಳನ್ನು ಬಡಿದುಕೊಳ್ಳುವರು.
8ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು.
ಅದರ ನೀರು ಹರಿದು ಖಾಲಿಯಾಗುತ್ತಲಿದೆ.
“ನಿಲ್ಲಿರಿ! ನಿಲ್ಲಿರಿ!” ಎಂದು ಅವರು ಕೂಗಿದರೂ,
ಒಬ್ಬನೂ ಹಿಂದಕ್ಕೆ ನೋಡುವುದಿಲ್ಲ.
9ಬೆಳ್ಳಿಯನ್ನು ಸುಲಿದುಕೊಳ್ಳಿರಿ;
ಬಂಗಾರವನ್ನು ಸುಲಿದುಕೊಳ್ಳಿರಿ.
ಕೂಡಿಸಿಟ್ಟ ಧನಕ್ಕೂ,
ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
10ನಿನೆವೆ ಬರಿದಾಗಿದೆ, ಸುಲಿಗೆಯಾಗಿದೆ, ಹಾಳುಬಿದ್ದಿದೆ,
ಹೃದಯಗಳು ಕರಗುತ್ತವೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ.
ಎಲ್ಲರ ಸೊಂಟಗಳಲ್ಲಿ ಸಂಕಟವಿದೆ; ಎಲ್ಲಾ ಮುಖಗಳು ಕಳೆಗುಂದುತ್ತವೆ.
11ಸಿಂಹದ ಗವಿಯೂ,
ಎಳೆಯ ಸಿಂಹಗಳು ಮೇಯುವ ಸ್ಥಳವೂ ಎಲ್ಲಿ?
ಸಿಂಹವೂ, ಸಿಂಹಿಣಿಯೂ,
ಸಿಂಹದ ಮರಿಗಳೂ ಭಯವಿಲ್ಲದೆ ನಡೆದಾಡುವ ಸ್ಥಳಗಳೆಲ್ಲಿ?
12ಸಿಂಹವು, ತನ್ನ ಮರಿಗಳಿಗೆ,
ಸಿಂಹಿಣಿಗಳಿಗೆ, ಕೊರಳು ಹಿಸುಕಿ ಕೊಂದ ಪ್ರಾಣಿಗಳಿಂದ
ತನ್ನ ಗುಹೆಯನ್ನು ತುಂಬಿಸುತ್ತಿತ್ತು.
13ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ.
ನಿನ್ನ ರಥಗಳನ್ನು ಹೊಗೆಯಾಗಲು ಸುಡುತ್ತೇನೆ.
ಖಡ್ಗವು ನಿನ್ನ ಎಳೆಯ ಸಿಂಹಗಳನ್ನು ನುಂಗಿಬಿಡುವುದು.
ನಿನಗೆ ಸಿಕ್ಕಿದ ಬೇಟೆಯನ್ನು ಭೂಮಿಯ ಮೇಲಿನಿಂದ ತೆಗೆದುಬಿಡುತ್ತೇನೆ.
ನಿನ್ನ ರಾಯಭಾರಿಗಳ ಧ್ವನಿಯು
ಇನ್ನು ಕೇಳಿಸದು.”
ទើបបានជ្រើសរើសហើយ៖
ನಹೂಮ 2: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.