ಮೀಕ 7
7
ಇಸ್ರಾಯೇಲಿನ ಕೊರಗುವಿಕೆ
1ಎಂತಹ ಸಂಕಟ ನನ್ನದು!
ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ
ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ.
ತಿನ್ನುವುದಕ್ಕೆ ಗೊಂಚಲೇ ಇಲ್ಲ.
ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.
2ನಿಷ್ಠಾವಂತರು ಭೂಮಿಯೊಳಗಿಂದ ನಾಶವಾಗಿದ್ದಾರೆ.
ಮನುಷ್ಯರಲ್ಲಿ ಯಥಾರ್ಥನು ಒಬ್ಬನು ಉಳಿದಿಲ್ಲ;
ಎಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾ,
ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
3ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವಂತೆ
ಆಡಳಿತಗಾರರು ಉಡುಗೊರೆಗಳನ್ನು ಕೇಳುತ್ತಾರೆ.
ನ್ಯಾಯಾಧಿಪತಿಗಳು ಲಂಚವನ್ನು ತೆಗೆದುಕೊಳ್ಳುತ್ತಾರೆ.
ಶಕ್ತಿಶಾಲಿ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ;
ಅವರೆಲ್ಲರೂ ಒಟ್ಟಾಗಿ ಒಳಸಂಚುಮಾಡುತ್ತಾರೆ.
4ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ
ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ.
ದೇವರು ನಿನ್ನನ್ನು ಭೇಟಿಮಾಡುವ ದಿನ ಬಂದಿದೆ,
ನಿನ್ನ ಕಾವಲುಗಾರರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ.
ಈಗ ನೀವು ಭಯಭೀತರಾಗುವ ಸಮಯ.
5ನೆರೆಯವನಲ್ಲಿ ನಂಬಿಕೆ ಇಡಬೇಡಿರಿ;
ಆಪ್ತಸ್ನೇಹಿತನಲ್ಲಿ ಭರವಸೆ ಇಡಬೇಡಿರಿ;
ನಿನ್ನ ಎದೆಯಲ್ಲಿ ಮಲಗುವವಳಿಗೆ
ನಿನ್ನ ಬಾಯಿಯ ಬಾಗಿಲುಗಳನ್ನು ಕಾಯಿ.
6ಏಕೆಂದರೆ ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ.
ಮಗಳು ತನ್ನ ತಾಯಿಗೂ,
ಸೊಸೆಗೂ ಆಕೆಯ ಅತ್ತೆಗೂ ವಿರೋಧವಾಗಿ ಏಳುತ್ತಾರೆ.
ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.
7ಆದರೆ ನಾನು ಯೆಹೋವ ದೇವರನ್ನು ಎದುರು ನೋಡುವೆನು.
ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು.
ನನ್ನ ದೇವರು ನನ್ನ ಕಡೆಗೆ ಕಿವಿಗೊಡುವರು.
ಇಸ್ರಾಯೇಲು ಎದ್ದೇಳುವುದು
8ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ,
ನಾನು ಬಿದ್ದಿದ್ದರೂ ತಿರುಗಿ ಏಳುವೆನು.
ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ
ಯೆಹೋವ ದೇವರೇ ನನಗೆ ಬೆಳಕಾಗಿರುವರು.
9ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ
ಅವರು ನನ್ನ ವ್ಯಾಜ್ಯವಾಡಿ
ನನ್ನ ನ್ಯಾಯವನ್ನು ನಡೆಸುವ ತನಕ
ಅವರ ಕೋಪವನ್ನು ತಾಳುವೆನು.
ಆತನು ನನ್ನನ್ನು ಬೆಳಕಿಗೆ ತರುವನು.
ಆತನ ನೀತಿಯನ್ನು ನೋಡುವೆನು.
10ಆಗ ನನ್ನ ಶತ್ರು ಇದನ್ನು ನೋಡುವನು.
ಅವನ ಮುಖವನ್ನು ಅವಮಾನದಿಂದ ಮುಚ್ಚಿಕೊಳ್ಳುವನು,
“ನಿನ್ನ ಯೆಹೋವ ದೇವರು ಎಲ್ಲಿ?”
ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು.
ಇದನ್ನು ನಾನು ಕಣ್ಣಾರೆ ಕಾಣುವೆನು.
ಆ ಶತ್ರುಗಳಾದರೋ ಬೀದಿಯ ಕಸದಂತೆ
ದಾರಿಹೋಕರ ತುಳಿತಕ್ಕೆ ಈಡಾಗುವರು.
11ನಿನ್ನ ಗೋಡೆಗಳು ಪುನಃ ಕಟ್ಟುವ
ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.
12ಆ ದಿವಸದಲ್ಲಿ
ಅಸ್ಸೀರಿಯರಿಂದಲೂ ಈಜಿಪ್ಟ್ ಪಟ್ಟಣಗಳಿಂದಲೂ
ಯೂಫ್ರೇಟೀಸ್ ನದಿಯವರೆಗೂ
ಸಮುದ್ರದಿಂದ ಸಮುದ್ರದವರೆಗೂ
ಬೆಟ್ಟದಿಂದ ಬೆಟ್ಟದವರೆಗೂ ಜನರೆಲ್ಲರು ನಿನ್ನ ಬಳಿಗೆ ಬರುವರು.
13ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ
ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವುದು.
ಸ್ತೋತ್ರ ಮತ್ತು ಪ್ರಾರ್ಥನೆ
14ನಿನ್ನ ಜನರನ್ನೂ ಏಕಾಂತವಾಗಿ
ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ
ನಿನ್ನ ಬಾಧ್ಯತೆಯ ಮಂದೆಯನ್ನೂ
ನಿನ್ನ ಕೋಲಿನಿಂದ ಮೇಯಿಸು.
ಅವರು ಪೂರ್ವದ ದಿವಸಗಳಲ್ಲಾದ ಹಾಗೆ
ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.
15ನೀನು ಈಜಿಪ್ಟ್ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ
ಅವರಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.
16ಜನಾಂಗಗಳು ನೋಡಿ ನಾಚಿಕೊಳ್ಳುವರು
ತಮ್ಮ ತಮ್ಮ ಶಕ್ತಿಗೆ ವಂಚಿತರಾಗಿ ನಾಚಿಕೆಪಡುವರು.
ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು;
ಅವರ ಕಿವಿಗಳು ಕಿವುಡಾಗಿ ಹೋಗುವುವು.
17ಅವರು ಹಾವಿನಂತೆ,
ನೆಲದ ಮೇಲೆ ತೆವಳುವ ಜೀವಿಗಳಂತೆ ಧೂಳನ್ನು ನೆಕ್ಕುತ್ತಾರೆ.
ಅವರು ರಂಧ್ರಗಳಿಂದ ಹೊರಗೆ ಬರುವರು.
ನಮ್ಮ ದೇವರಾದ ಯೆಹೋವ ದೇವರಿಗೆ ಅವರು ಹೆದರುವರು.
ನಿನಗೆ ಭಯಪಡುವರು.
18ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ,
ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ,
ನಿನ್ನ ಹಾಗೆ ಇರುವ ದೇವರು ಯಾರು?
ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ.
ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.
19ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು;
ನಮ್ಮ ಅಕ್ರಮಗಳನ್ನು ತುಳಿದುಬಿಡುವನು;
ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.
20ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ
ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ,
ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.
ទើបបានជ្រើសរើសហើយ៖
ಮೀಕ 7: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.