ಹಬಕ್ಕೂಕ 1
1
1ಪ್ರವಾದಿಯಾದ ಹಬಕ್ಕೂಕನು ಹೊಂದಿದ ಪ್ರವಾದನೆಯು:
ಹಬಕ್ಕೂಕನ ದೂರು
2ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು.
ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ.
“ಹಿಂಸೆಯಾಗುತ್ತಿದೆ,” ಎಂದು ಕೂಗುತ್ತಿದ್ದೇನೆ,
ಆದರೂ ನೀವು ರಕ್ಷಿಸುವುದಿಲ್ಲ.
3ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀರಿ?
ತಪ್ಪನ್ನು ಏಕೆ ಸಹಿಸುತ್ತೀರಿ?
ನಾಶವೂ ಹಿಂಸೆಯೂ ನನ್ನ ಮುಂದೆ ಇವೆ.
ಹೋರಾಟವೂ ಒಡುಕೂ ಹೆಚ್ಚುತ್ತಲಿವೆ.
4ಆದ್ದರಿಂದ ದೈವನಿಯಮವು ಪಕ್ಕಕ್ಕೆ ಇಡಲಾಗಿದೆ.
ನ್ಯಾಯವು ಎಂದಿಗೂ ಸ್ಥಾಪಿತವಾಗುವುದಿಲ್ಲ.
ಏಕೆಂದರೆ ದುಷ್ಟರು ನೀತಿವಂತರನ್ನು ಸುತ್ತಿಕೊಂಡಿದ್ದಾರೆ.
ಆದ್ದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
ಯೆಹೋವ ದೇವರ ಉತ್ತರ
5“ಜನಾಂಗಗಳ ಕಡೆಗೆ ನೋಡಿ ಲಕ್ಷ್ಯಗೊಟ್ಟು
ಬಹಳವಾಗಿ ಆಶ್ಚರ್ಯಪಡಿರಿ.
ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ
ಆ ಕಾರ್ಯವನ್ನು ವಿವರಿಸಿ ಹೇಳಿದರೂ
ನೀವದನ್ನು ನಂಬುವುದಿಲ್ಲ.
6ನಾನು ಬಾಬಿಲೋನಿಯರನ್ನು ಎಬ್ಬಿಸುತ್ತೇನೆ.
ಅವರು ಉಗ್ರ ಮತ್ತು ಸಾಹಸಿ ಜನರು.
ತಮ್ಮದಲ್ಲದ ನಿವಾಸಗಳನ್ನು ವಶಮಾಡಿಕೊಳ್ಳುವುದಕ್ಕೆ
ವಿಶಾಲವಾದ ದೇಶದಲ್ಲಿ ಹಾದುಹೋಗುವರು.
7ಅವರು ಭಯಂಕರವಾದವರು ಮತ್ತು ಕ್ರೂರವಾದವರು.
ಅವರು ತಮಗೆ ತಾವೇ ಕಾನೂನಾಗಿದ್ದಾರೆ.
ತಮ್ಮನ್ನು ತಾವೇ ಗೌರವಿಸಿಕೊಳ್ಳುವವರೂ ಆಗಿದ್ದಾರೆ.
8ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿಯೂ,
ಸಂಜೆಯ ತೋಳಗಳಿಗಿಂತ ಚುರುಕಾಗಿಯೂ ಇವೆ.
ಅವರ ಅಶ್ವಸೈನ್ಯ ಎರಗುವುದು.
ಅವರ ಕುದುರೆ ಸವಾರರು ದೂರದಿಂದ ಬರುವರು;
ನುಂಗುವುದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿ ಬರುವರು.
9ಅವರೆಲ್ಲರು ಹಿಂಸಿಸುವುದಕ್ಕೆ ಬರುವರು;
ಅವರ ಸಮೂಹ, ಮರುಭೂಮಿಯ ಗಾಳಿಯಂತೆಯೇ ಮುಂದೆ ಬರುವುದು;
ಸೆರೆಯವರನ್ನು ಮರಳಿನ ಹಾಗೆ ಕೂಡಿಸುವರು.
10ಅವರ ಅರಸನನ್ನು ಧಿಕ್ಕರಿಸುವರು;
ಪ್ರಧಾನರು ಅವರನ್ನು ಪರಿಹಾಸ್ಯ ಮಾಡುವರು;
ಕೋಟೆಗಳಿಗೆಲ್ಲಾ ಕುಚೋದ್ಯ ಮಾಡುವರು;
ಮಣ್ಣಿನ ದಿನ್ನೆಗಳನ್ನು ಮಾಡಿ, ಅವುಗಳನ್ನು ಹಿಡಿಯುವರು.
11ಬಿರುಗಾಳಿಯಂತೆ ಕೊಚ್ಚಿಕೊಳ್ಳುತ್ತಾ ಮುಂದೆ ಸಾಗುವರು.
ಅಪರಾಧಿ ಜನರವರು. ಅವರ ಸ್ವಂತ ಬಲ, ಅವರ ದೇವರು.”
ಹಬಕ್ಕೂಕನ ಎರಡನೆಯ ದೂರು
12ಯೆಹೋವ ದೇವರೇ, ನೀವು ಅನಾದಿಕಾಲದಿಂದ ಬಂದವರಲ್ಲವೇ?
ನನ್ನ ದೇವರೇ, ನನ್ನ ಪರಿಶುದ್ಧರೇ, ನೀನು ಎಂದಿಗೂ ಸಾಯುವುದಿಲ್ಲ.
ಯೆಹೋವ ದೇವರೇ, ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ನೇಮಿಸಿದ್ದೀರಿ.
ನನ್ನ ಬಂಡೆಯೇ, ನೀವು ಶಿಕ್ಷಿಸಲು ಅವರನ್ನು ನೇಮಕ ಮಾಡಿದ್ದೀರಿ.
13ನೀನು ಕೆಟ್ಟದ್ದನ್ನು ನೋಡದ ಹಾಗೆ ಶುದ್ಧ ಕಣ್ಣುಗಳುಳ್ಳವರು.
ನೀವು ಅನ್ಯಾಯವನ್ನು ದೃಷ್ಟಿಸಲಾರಿರಿ,
ವಂಚಿಸುವವರನ್ನು ಏಕೆ ಸಹಿಸಿಕೊಳ್ಳುತ್ತೀರಿ?
ದುಷ್ಟನು ತನಗಿಂತ ನೀತಿವಂತನನ್ನು
ನುಂಗಿ ಬಿಡುವ ವೇಳೆಯಲ್ಲಿ ಏಕೆ ಸುಮ್ಮನಿರುತ್ತೀರಿ?
14ಮನುಷ್ಯರನ್ನು ಸಮುದ್ರದ ಮೀನುಗಳಂತೆಯೂ,
ಆಳುವವನಿಲ್ಲದ ಕ್ರಿಮಿಗಳಂತೆಯೂ ಮಾಡಿರುತ್ತೀರಿ.
15ದುಷ್ಟ ವೈರಿಯು ಅವುಗಳನ್ನು ಗಾಳದಿಂದ ಎತ್ತಿ,
ತನ್ನ ಬಲೆಯಿಂದ ಅವುಗಳನ್ನು ಹಿಡಿದು,
ತನ್ನ ಜಾಲದಿಂದ ಅವುಗಳನ್ನು ಕೂಡಿಸಿಡುತ್ತಾನೆ.
ಅವನು ಹಿಗ್ಗುತ್ತಾನೆ, ಸಂತೋಷಪಡುತ್ತಾನೆ.
16ಆದ್ದರಿಂದ ತಮ್ಮ ಬಲೆಗೆ ಬಲಿ ಅರ್ಪಿಸಿ,
ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ.
ಏಕೆಂದರೆ ಇವುಗಳಿಂದ ಅವರ ಭೋಜನ ಪುಷ್ಟಿಯಾಗಿಯೂ,
ಅವರ ಆಹಾರ ರುಚಿಯುಳ್ಳದ್ದಾಗಿಯೂ ಇದೆ.
17ಹೀಗಿರುವುದರಿಂದ ನಿರಂತರವಾಗಿ ಅವರು ತಮ್ಮ ಬಲೆಯನ್ನು ಬರಿದುಮಾಡಿ,
ಕರುಣೆ ಇಲ್ಲದೆ ಜನಾಂಗಗಳನ್ನು ನಾಶ ಮಾಡುತ್ತಾ ಅವನು ಹೋಗಬೇಕೇ?
ទើបបានជ្រើសរើសហើយ៖
ಹಬಕ್ಕೂಕ 1: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.