ಆಮೋಸ 7
7
ಮಿಡತೆಗಳು, ಬೆಂಕಿ ಮತ್ತು ಒಂದು ನೂಲುಗುಂಡು
1ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಹಿಂಗಾರು ಮಳೆ ಬಿದ್ದು, ಪೈರು ಸೊಂಪಾಗುವುದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ, ಬೆಳೆಯು ವೃದ್ಧಿಯಾಗುತ್ತಿದ್ದಾಗ, ಇಗೋ ಯೆಹೋವ ದೇವರು, ಮಿಡತೆಗಳನ್ನು ಉಂಟುಮಾಡಿದರು. 2ಅವು ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು, “ಸಾರ್ವಭೌಮ ಯೆಹೋವ ದೇವರೇ, ಲಾಲಿಸು, ನನ್ನನ್ನು ಮನ್ನಿಸು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ,” ಎಂದು ವಿಜ್ಞಾಪಿಸಿಕೊಂಡೆನು.
3ಯೆಹೋವ ದೇವರು ಇದನ್ನು ಕುರಿತು ಮನಮರುಗಿ,
“ಈ ದರ್ಶನ ನೆರವೇರುವುದಿಲ್ಲ,” ಎಂದರು.
4ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಸಾರ್ವಭೌಮ ಯೆಹೋವ ದೇವರು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಕ್ಕೆ ಕರೆದರು. ಅದು ದೊಡ್ಡ ಅಗಾಧವನ್ನು ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು. 5ಆಗ ನಾನು, “ಸಾರ್ವಭೌಮ ಯೆಹೋವ ದೇವರೇ, ನಿಲ್ಲಿಸಿಬಿಡಿರಿ,” ಎಂದು ಬೇಡಿಕೊಳ್ಳುತ್ತೇನೆ. “ಯಾಕೋಬನು ಹೇಗೆ ಬದುಕುಳಿಯುತ್ತಾನೆ? ಅವನು ತುಂಬಾ ಚಿಕ್ಕವನು,” ಎಂದು ಮೊರೆಯಿಟ್ಟೆನು.
6ಆಗ ಸಾರ್ವಭೌಮ ಯೆಹೋವ ದೇವರು ಇದನ್ನು ಕುರಿತು ಮನಮರುಗಿ,
“ಈ ದರ್ಶನ ನೆರವೇರುವುದಿಲ್ಲ,” ಎಂದರು.
7ಆತನು ನನಗೆ ಹೀಗೆ ತೋರಿಸಿದನು. ಯೆಹೋವ ದೇವರು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದರು. ಆತನ ಕೈಯಲ್ಲಿ ನೂಲುಗುಂಡು ಇತ್ತು. 8ಯೆಹೋವ ದೇವರು ನನಗೆ, “ಆಮೋಸನೇ, ಏನನ್ನು ನೋಡುತ್ತಿರುವೆ?” ಎಂದು ಕೇಳಿದರು.
ಆಗ ನಾನು, “ನೂಲುಗುಂಡು,” ಎಂದೆನು.
ನಂತರ ಯೆಹೋವ ದೇವರು ಹೇಳಿದ್ದೇನೆಂದರೆ, “ನೋಡು, ನಾನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಮೇಲೆ ಅವರನ್ನು ದಾಟಿ ಹೋಗುವುದಿಲ್ಲ.
9“ಇಸಾಕನ ಉನ್ನತ ಪೂಜಾಸ್ಥಳಗಳು ನಾಶವಾಗುವುವು.
ಇಸ್ರಾಯೇಲಿನ ಪರಿಶುದ್ಧ ಸ್ಥಳಗಳು ಹಾಳಾಗುವುವು.
ನಾನು ಖಡ್ಗದೊಂದಿಗೆ ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.”
ಆಮೋಸನು ಮತ್ತು ಅಮಚ್ಯನು
10ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ ಕಳುಹಿಸಿ ಹೇಳಿದ್ದೇನೆಂದರೆ: “ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು. 11ಆಮೋಸನು ಹೇಳಿದ್ದೇನೆಂದರೆ:
“ಯಾರೊಬ್ಬಾಮನು ಖಡ್ಗದಿಂದ ಸಾಯುವನೆಂದೂ
ಇಸ್ರಾಯೇಲರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಕರೆದೊಯ್ಯುವರು.”
12ಅನಂತರ ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ: “ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿ ದುಡಿದು ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು. 13ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ. ಏಕೆಂದರೆ ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ, ರಾಜ್ಯದ ಆಲಯವಾಗಿಯೂ ಇದೆ,” ಎಂದನು.
14ಆಗ ಆಮೋಸನು ಅಮಚ್ಯನಿಗೆ ಉತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನೂ ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೆನು,” ಎಂದನು. 15ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆಯಲ್ಲಿ, ಯೆಹೋವ ದೇವರು ನನ್ನನ್ನು ಕರೆದು ಹೇಳಿದ್ದೇನೆಂದರೆ: “ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದಿಸು.” 16ಹೀಗಿರುವುದರಿಂದ ನೀನು ಈಗ ಯೆಹೋವ ದೇವರ ವಾಕ್ಯವನ್ನು ಕೇಳು:
ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ,
ಇಸಾಕನ ಮನೆತನಕ್ಕೆ ವಿರೋಧವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವೆಯಲ್ಲಾ.
17ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ:
“ ‘ನಿನ್ನ ಹೆಂಡತಿ ಪಟ್ಟಣದಲ್ಲಿ ವ್ಯಭಿಚಾರಿಣಿಯಾಗುವಳು.
ನಿನ್ನ ಪುತ್ರ ಪುತ್ರಿಯರೂ ಖಡ್ಗದಿಂದ ಬೀಳುವರು.
ನಿನ್ನ ದೇಶವನ್ನು ಅಳೆಯಲಾಗುತ್ತದೆ ಮತ್ತು ವಿಭಾಗಿಸಲಾಗುತ್ತದೆ.
ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ.
ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಕರೆದೊಯ್ಯಲಾಗುವುದು.’ ”
ទើបបានជ្រើសរើសហើយ៖
ಆಮೋಸ 7: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.