ಆಮೋಸ 4
4
ಇಸ್ರಾಯೇಲರು ದೇವರ ಕಡೆಗೆ ತಿರುಗಲಿಲ್ಲ
1ಸಮಾರ್ಯ ಬೆಟ್ಟದಲ್ಲಿರುವ ಬಾಷಾನಿನ ಹಸುಗಳಂತಿರುವ ಮಹಿಳೆಯರೇ,
ನೀವು ಬಡವರನ್ನು ಹಿಂಸಾಚಾರ ಮಾಡಿ, ದರಿದ್ರರನ್ನು ಜಜ್ಜಿ,
ನಿಮ್ಮ ಪತಿಗಳಿಗೆ, “ಪಾನವನ್ನು ತರಿಸಿರಿ, ಕುಡಿಯೋಣ,”
ಎಂದು ಹೇಳುವವರೇ, ಈ ವಾಕ್ಯವನ್ನು ಕೇಳಿರಿ.
2“ದಿನಗಳು ಬರುವುವು.
ಆಗ ನಿಮ್ಮನ್ನು ಕೊಂಡಿಗಳಿಂದ ಎಳೆದುಕೊಂಡು ಹೋಗುವರು.
ನಿಮ್ಮಲ್ಲಿ ಅಳಿದುಳಿದವರನ್ನು ಗಾಳಕ್ಕೆ ಸಿಕ್ಕಿದ ಮೀನಿನಂತೆ ಸೆಳೆದೊಯ್ಯುವರು.
ಎಂದು ಸಾರ್ವಭೌಮ ಯೆಹೋವ ದೇವರು ಇದನ್ನು ಆಣೆಯಿಟ್ಟು ನುಡಿದಿದ್ದಾರೆ.
3ಗೋಡೆಯಲ್ಲಿಯ ಬಿರುಕುಗಳ ಮೂಲಕ
ನೀವು ಹೊರಟು ಹೋಗುವಿರಿ.
ನಿಮ್ಮನ್ನು ಹರ್ಮೋನಿನ ಕಡೆಗೆ ಎಸೆಯಲಾಗುತ್ತದೆ,”
ಎಂದು ಯೆಹೋವ ದೇವರು ಹೇಳುತ್ತಾರೆ.
4“ಪಾಪ ಮಾಡಬೇಕಾದರೆ, ಬೇತೇಲಿಗೆ ಹೋಗಿ ಪಾಪ ಮಾಡಿರಿ.
ಗಿಲ್ಗಾಲಿಗೆ ಹೋಗಿ ಯಥೇಚ್ಛವಾಗಿ ಪಾಪ ಮಾಡಿರಿ.
ಪ್ರತಿದಿನವೂ ಪ್ರಾತಃಕಾಲದ ಬಲಿಗಳನ್ನು ಅರ್ಪಿಸಿರಿ.
ಮೂರು ದಿನಗಳಿಗೊಮ್ಮೆ#4:4 ದಿನಗಳಿಗೊಮ್ಮೆ ಅಥವಾ ವರ್ಷಗಳು ದಶಮಾಂಶವನ್ನು ಸಲ್ಲಿಸಿರಿ.”
5“ಹುಳಿಹಿಟ್ಟಿನ ರೊಟ್ಟಿಯನ್ನು ಹೋಮ ಮಾಡಿ,
ಸ್ತೋತ್ರದ ಯಜ್ಞವನ್ನೂ ಅರ್ಪಿಸಿರಿ.
ಕಾಣಿಕೆ ಕೊಟ್ಟದ್ದನ್ನು ಹೇಳಿಕೊಳ್ಳಿರಿ.
ಇಸ್ರಾಯೇಲರೇ, ಹೀಗೆ ಮಾಡುವುದು ಇಷ್ಟವಾಗಿದೆ,”
ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
6“ಪ್ರತಿಯೊಂದು ಪಟ್ಟಣದಲ್ಲಿ ಬರಿದಾದ ಹೊಟ್ಟೆಗಳನ್ನು ನಿಮಗೆ ಕೊಟ್ಟಿದ್ದೇನೆ.
ಪ್ರತಿಯೊಂದು ಪಟ್ಟಣದಲ್ಲಿ ಆಹಾರದ ಕೊರತೆಯಿದೆ.
ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.
7“ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ,
ಮಳೆಯನ್ನು ನಾನು ನಿಮ್ಮಿಂದ ಹಿಂದೆಗೆದಿದ್ದೇನೆ.
ಒಂದು ಪಟ್ಟಣದ ಮೇಲೆ ಮಳೆ ಸುರಿಸಿ,
ಇನ್ನೊಂದು ಪಟ್ಟಣದ ಮೇಲೆ ಮಳೆ ಸುರಿಸಲಿಲ್ಲ.
ಒಂದು ಹೊಲದ ಮೇಲೆ ಮಳೆ ಸುರಿಸಿ,
ಇನ್ನೊಂದು ಹೊಲದ ಮೇಲೆ ಮಳೆ ಸುರಿಸಲಿಲ್ಲ ಮತ್ತು ಅದು ಒಣಗಿ ಹೋಯಿತು.
8ಎರಡು ಅಥವಾ ಮೂರು ಪಟ್ಟಣದವರು ಕುಡಿಯುವ ನೀರಿಗಾಗಿ ಒಂದು ಪಟ್ಟಣದಿಂದ
ಇನ್ನೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ,
ಅವರ ಬಾಯಾರಿಕೆ ತೀರಲಿಲ್ಲ.
ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.
9“ಬಿಸಿಗಾಳಿಯನ್ನು ಕಳುಹಿಸಿ ನಿಮ್ಮ ಉದ್ಯಾನವನಗಳನ್ನು
ಮತ್ತು ದ್ರಾಕ್ಷಿತೋಟಗಳನ್ನು ಒಣಗುವಂತೆ ಮಾಡಿದೆ.
ನಿಮ್ಮ ಬೆಳೆ ರೋಗ ಮತ್ತು ಶಿಲೀಂಧ್ರವುಗಳಿಂದ ನಾಶವಾಯಿತು.
ನಿಮ್ಮ ಅಂಜೂರದ ಗಿಡ ಮತ್ತು ಎಣ್ಣೆಮರಗಳನ್ನೂ ಮಿಡತೆಗಳು ತಿಂದು ಬಿಡುವಂತೆ ಮಾಡಿದೆ.
ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,
ಎಂದು ಯೆಹೋವ ದೇವರು ಹೇಳುತ್ತಾರೆ.
10“ಹಿಂದೊಮ್ಮೆ ಈಜಿಪ್ಟಿಗೆ ನಾನು ಮಾಡಿದಂತೆ
ನಿಮ್ಮನ್ನು ವ್ಯಾಧಿಯಿಂದ ಬಾಧಿಸಿದೆ.
ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ,
ನಿಮ್ಮ ಯೌವನಸ್ಥರನ್ನೂ ಖಡ್ಗದಿಂದ ಕೊಂದು ಹಾಕಿದ್ದೇನೆ.
ನಿಮ್ಮ ಪಾಳೆಯಗಳ ದುರ್ವಾಸನೆಯು ನಿಮ್ಮ ಮೂಗು ಸಹಿಸದ ಹಾಗೆ ಮಾಡಿದ್ದೇನೆ.
ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.
11“ಸೊದೋಮನ್ನೂ, ಗೊಮೋರವನ್ನೂ ಕೆಡವಿದ ಹಾಗೆ,
ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ.
ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ.
ಆದರೂ ನೀವೂ ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.
12ಇಸ್ರಾಯೇಲೇ, ನಾನು ನಿನಗೆ ಹೀಗೆ ಮಾಡುತ್ತೇನೆ.
ನಾನು ನಿನಗೆ ಹೀಗೆ ಮಾಡುವುದರಿಂದ,
ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೋ.
13ಬೆಟ್ಟಗಳನ್ನು ರೂಪಿಸಿ,
ಗಾಳಿಯನ್ನು ನಿರ್ಮಿಸಿ,
ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ,
ಉದಯವನ್ನು ಅಂಧಕಾರವನ್ನಾಗಿ ಮಾಡಿ,
ಭೂಮಿಯ ಉನ್ನತ ಸ್ಥಳಗಳನ್ನು ತುಳಿದುಬಿಡುವಾತನು,
ಸರ್ವಶಕ್ತರಾದ ಯೆಹೋವ ದೇವರು ಇದೇ ಅವರ ಹೆಸರು.
ទើបបានជ្រើសរើសហើយ៖
ಆಮೋಸ 4: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.