ಆಮೋಸ 1
1
1ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗ ಯಾರೊಬ್ಬಾಮನ ದಿವಸಗಳಲ್ಲಿಯೂ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ಕಂಡ ದರ್ಶನಗಳು.
2ಆಮೋಸನು ಹೇಳಿದ್ದೇನೆಂದರೆ:
“ಯೆಹೋವ ದೇವರು ಚೀಯೋನಿನಿಂದ ಗರ್ಜಿಸಿ,
ಯೆರೂಸಲೇಮಿನಿಂದ ತಮ್ಮ ಧ್ವನಿ ಗೈಯುವರು.
ಕುರುಬರ ಹುಲ್ಲುಗಾವಲುಗಳು ಬಾಡಿ ಹೋಗುತ್ತಿವೆ,
ಕರ್ಮೆಲಿನ ತುದಿಯ ಗಿಡಗಳು ಒಣಗಿ ಹೋಗುತ್ತವೆ.”
ಇಸ್ರಾಯೇಲಿನ ನೆರೆಯವರಿಗೆ ನ್ಯಾಯತೀರ್ಪು
3ಯೆಹೋವ ದೇವರು ಹೀಗೆ ಹೇಳುತ್ತಾರೆ:
ದಮಸ್ಕದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ,
ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ,
ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.
4ಆದರೆ ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಕಳುಹಿಸುವೆನು.
ಅದು ಬೆನ್ಹದದನ ಕೋಟೆಗಳನ್ನು ದಹಿಸಿಬಿಡುವುದು.
5ನಾನು ದಮಸ್ಕದ ಹೆಬ್ಬಾಗಿಲನ್ನು ಸಹ ಮುರಿಯುವೆನು.
ಆವೆನಿನ ಕಣಿವೆಯಿಂದ ನಿವಾಸಿಯನ್ನು
ಮತ್ತು ಬೇತ್ ಏದೆನಿನ ಮನೆಯಿಂದ ರಾಜದಂಡ ಹಿಡಿಯುವವನನ್ನೂ ಕಡಿದುಬಿಡುವೆನು.
ಅರಾಮ್ ಜನರು ಸೆರೆಯಾಗಿ ಕೀರಿಗೆ ಹೋಗುವರು,
ಇದು ಯೆಹೋವ ದೇವರ ನುಡಿ.
6ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಗಾಜದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ,
ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವರು ಎಲ್ಲಾ ಸಮುದಾಯಗಳನ್ನು ಸೆರೆಹಿಡಿದು
ಎದೋಮಿಗೆ ಮಾರಿಬಿಟ್ಟರು.
7ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು.
ಅದು ಅವರ ಕೋಟೆಗಳನ್ನು ದಹಿಸಿಬಿಡುವುದು.
8ಅಷ್ಡೋದಿನಿಂದ ನಿವಾಸಿಯನ್ನು
ಮತ್ತು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು.
ಫಿಲಿಷ್ಟಿಯರಲ್ಲಿ ಕೊನೆಯವರು ಸಾಯುವವರೆಗೂ
ನಾನು ಎಕ್ರೋನಿನ ವಿರುದ್ಧ ನನ್ನ ಕೈಯನ್ನು ತಿರುಗಿಸುವೆನು,”
ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
9ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಟೈರ್ ಪಟ್ಟಣದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ,
ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವರು ಸಹೋದರರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೆ
ಸೆರೆಯಾಳುಗಳ ಸಂಪೂರ್ಣ ಸಮುದಾಯಗಳನ್ನು ಎದೋಮಿಗೆ ಮಾರಿಬಿಟ್ಟರು.
10ಆದರೆ ನಾನು ಟೈರ್ ಪಟ್ಟಣದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು.
ಅದು ಅಲ್ಲಿಯ ಕೋಟೆಗಳನ್ನು ದಹಿಸಿಬಿಡುವುದು.”
11ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಎದೋಮಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ,
ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವನು ತನ್ನ ಸಹೋದರನನ್ನು ಖಡ್ಗವನ್ನು ಹಿಂಬಾಲಿಸಿದನು.
ಮತ್ತು ದೇಶದ ಸ್ತ್ರೀಯರನ್ನು ಕೊಂದುಹಾಕಿದನು.
ಏಕೆಂದರೆ ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು.
ಆತನು ರೌದ್ರವನ್ನು ನಿತ್ಯವಾಗಿ ಇಟ್ಟುಕೊಂಡನು.
12ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು.
ಅದು ಬೊಚ್ರದ ಕೋಟೆಗಳನ್ನು ದಹಿಸಿಬಿಡುವುದು.”
13ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಅಮ್ಮೋನಿನ ಮಕ್ಕಳು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ,
ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ತಮ್ಮ ಮೇರೆಯನ್ನು ವಿಸ್ತಾರ ಮಾಡುವುದಕ್ಕಾಗಿ,
ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿಬಿಟ್ಟಿದ್ದಾರೆ.
14ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು.
ಅದು ಅದರ ಕೋಟೆಗಳನ್ನು ದಹಿಸಿಬಿಡುವುದು.
ಆಗ ಯುದ್ಧಾರ್ಭಟವೂ, ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು.
15ಅವರ ಅರಸನು ತನ್ನ ರಾಜ್ಯಾಧಿಕಾರರ ಸಂಗಡ ಸೆರೆಗೆ ಹೋಗುವನು”
ಎಂದು ಯೆಹೋವ ದೇವರು ಹೇಳುತ್ತಾರೆ.
ទើបបានជ្រើសរើសហើយ៖
ಆಮೋಸ 1: KSB
គំនូសចំណាំ
ចែករំលែក
ចម្លង

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.