ಆಮೋಸ 3

3
ಇಸ್ರಾಯೇಲಿಗೆ ವಿರುದ್ಧ ಸಾಕ್ಷಿಗಳನ್ನು ಕರೆಯಲಾದದ್ದು
1ಇಸ್ರಾಯೇಲರೇ, ಯೆಹೋವ ದೇವರು ನಿಮಗೆ ವಿರೋಧವಾಗಿ ಹೇಳುವ ವಾಕ್ಯವನ್ನು ಕೇಳಿರಿ. ನಾನು ಈಜಿಪ್ಟ್ ದೇಶದೊಳಗಿಂದ ಕರೆದುತಂದ ಸಮಸ್ತ ಕುಟುಂಬಕ್ಕೆ ಹೇಳುವುದೇನೆಂದರೆ:
2“ಭೂಮಿಯ ಎಲ್ಲಾ ಕುಟುಂಬಗಳಲ್ಲಿ
ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ.
ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.”
3ಒಪ್ಪಂದ ಮಾಡಿಕೊಳ್ಳದ ಹೊರತು,
ಇಬ್ಬರು ಜೊತೆಯಾಗಿ ನಡೆಯಲು ಸಾಧ್ಯವೋ?
4ಬೇಟೆ ಇಲ್ಲದಿದ್ದರೆ,
ಅಡವಿಯಲ್ಲಿ ಸಿಂಹವು ಗರ್ಜಿಸುವುದೋ?
ಏನಾದರೂ ಹಿಡಿಯದಿದ್ದರೆ,
ಗುಹೆಯಲ್ಲಿರುವ ಎಳೆಯ ಸಿಂಹವು ಅರಚುವುದೋ?
5ಬೋನು ಇಲ್ಲದಿದ್ದರೆ
ಪಕ್ಷಿಯು ಭೂಮಿಯ ಮೇಲೆ ಉರುಲಿನಲ್ಲಿ ಬೀಳುವುದೇ?
ಏನೂ ಸಿಕ್ಕಿಕೊಳ್ಳದಿದ್ದರೆ,
ಅದನ್ನು ಭೂಮಿಯಿಂದ ಯಾರಾದರೂ ತೆಗೆಯುವರೇ?
6ಪಟ್ಟಣದಲ್ಲಿ ಕಹಳೆಯನ್ನು ಊದಿದರೆ,
ಜನರು ಹೆದರುವುದಿಲ್ಲವೇ?
ಯೆಹೋವ ದೇವರಿಂದಲ್ಲದೆ
ಪಟ್ಟಣಕ್ಕೆ ಕೇಡು ತಟ್ಟುವುದುಂಟೇ?
7ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ
ತನ್ನ ಯೋಜನೆಗಳನ್ನು ತಿಳಿಸದೆ,
ಸಾರ್ವಭೌಮ ಯೆಹೋವ ದೇವರು ಏನನ್ನೂ ಮಾಡುವುದಿಲ್ಲ.
8ಸಿಂಹವು ಗರ್ಜಿಸಿದರೆ
ಭಯಪಡದೆ ಇರುವವರು ಯಾರು?
ಸಾರ್ವಭೌಮ ಯೆಹೋವ ದೇವರು ನುಡಿದಿದ್ದಾರೆ,
ಅವರ ನುಡಿಯನ್ನು ಪ್ರವಾದಿಸದವರು ಯಾರು?
9ಅಷ್ಡೋದಿನ ಕೋಟೆಗಳಲ್ಲಿ
ಮತ್ತು ಈಜಿಪ್ಟ್ ದೇಶದ ಕೋಟೆಗಳಲ್ಲಿ ಹೀಗೆ ಸಾರಿ ಹೇಳಿರಿ:
“ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು,
ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ
ಅದರೊಳಗಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.”
10“ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ
ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ,
ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.
11ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ವಿರೋಧಿಯು ದೇಶದ ಸುತ್ತಲೂ ಇರುವನು.
ನಿನ್ನ ಬಲವನ್ನು ತಗ್ಗಿಸುವನು.
ನಿನ್ನ ಅರಮನೆಗಳು ಸೂರೆಯಾಗುವುವು.”
12ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಹೇಗೆ ಕುರುಬನು ಸಿಂಹದ ಬಾಯಿಯಿಂದ
ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ
ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು
ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ
ಸಂರಕ್ಷಣೆ ಹೊಂದುತ್ತಾರೆ.”
13ಸರ್ವಶಕ್ತ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: “ನೀವು ಕೇಳಿ, ಯಾಕೋಬಿನ ಮನೆತನದವರಿಗೆ ವಿರುದ್ಧವಾಗಿ ಸಾಕ್ಷಿ ಕೊಡಿರಿ.”
14“ನಾನು ಇಸ್ರಾಯೇಲಿನ ಪಾಪಗಳನ್ನು ವಿಚಾರಿಸುವ ದಿವಸದಲ್ಲಿ,
ಬೇತೇಲಿನ ಬಲಿಪೀಠಗಳನ್ನು ನಾಶಮಾಡುವೆನು.
ಬಲಿಪೀಠದ ಕೊಂಬುಗಳು ಕಡಿಯಲಾಗಿ,
ನೆಲಕ್ಕೆ ಉರುಳುವುವು.
15ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ
ಹೊಡೆದು ಹಾಕುವೆನು.
ಆಗ ದಂತ ಮಂದಿರಗಳು ನಾಶವಾಗುವುವು.
ದೊಡ್ಡ ಮನೆಗಳು ಕೊನೆಗಾಣುವುವು,”
ಎಂದು ಯೆಹೋವ ದೇವರು ಹೇಳುತ್ತಾರೆ.

ទើបបានជ្រើសរើសហើយ៖

ಆಮೋಸ 3: KSB

គំនូស​ចំណាំ

ចែក​រំលែក

ចម្លង

None

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល