YouVersion Logo
Search Icon

ಯಾಜಕಕಾಂಡ 9

9
ಆರೋನನು ಮಾಡಿದ ಪ್ರಥಮ ಯಜ್ಞ
1ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಮತ್ತು ಇಸ್ರಾಯೇಲಿನ ಹಿರಿಯರನ್ನೂ ಕರೆದನು. 2ಅವನು ಆರೋನನಿಗೆ, “ನೀನು ಪಾಪ ಪರಿಹಾರದ ಬಲಿಗಾಗಿ ಒಂದು ಎಳೆಯ ಕರುವನ್ನೂ ಮತ್ತು ದಹನಬಲಿಗಾಗಿ ಕಳಂಕರಹಿತ ಟಗರನ್ನೂ ತೆಗೆದುಕೊಂಡು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸು. 3ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ: ‘ಪಾಪ ಪರಿಹಾರದ ಬಲಿಗಾಗಿ ಹೋತವನ್ನೂ ದಹನಬಲಿಗಾಗಿ ಕಳಂಕರಹಿತ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿಯನ್ನೂ ತೆಗೆದುಕೊಳ್ಳಬೇಕು. 4ಯೆಹೋವ ದೇವರ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಾಗಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆಹಾರದ ಬಲಿ ಎಣ್ಣೆಯೊಂದಿಗೆ ಬೆರೆತಿರಬೇಕು. ಏಕೆಂದರೆ ಈ ದಿನವೇ ಯೆಹೋವ ದೇವರು ನಿಮಗೆ ಕಾಣಿಸಿಕೊಳ್ಳುವರು,’ ” ಎಂದನು.
5ಅವರು ಮೋಶೆಯು ಆಜ್ಞಾಪಿಸಿದವುಗಳನ್ನು ದೇವದರ್ಶನದ ಗುಡಾರದ ಮುಂದೆ ತಂದರು. ಸಮೂಹವೆಲ್ಲವೂ ಹತ್ತಿರ ಬಂದು ಯೆಹೋವ ದೇವರ ಮುಂದೆ ನಿಂತಿತು. 6ಮೋಶೆ ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ ಸಂಗತಿಯು ಇದೇ. ಇದನ್ನು ನೀವು ಮಾಡಿರಿ. ಯೆಹೋವ ದೇವರ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವುದು,” ಎಂದನು.
7ಮೋಶೆಯು ಆರೋನನಿಗೆ, “ಬಲಿಪೀಠದ ಕಡೆಗೆ ಹೋಗಿ, ಯೆಹೋವ ದೇವರು ಆಜ್ಞಾಪಿಸಿದಂತೆಯೇ ನಿನ್ನ ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸು. ನಿನಗಾಗಿ ಪ್ರಾಯಶ್ಚಿತ್ತವನ್ನು ಮಾಡು, ಜನರ ಸಮರ್ಪಣೆಗಳನ್ನು ಸಮರ್ಪಿಸಿ, ಅವರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು,” ಎಂದನು.
8ಆದ್ದರಿಂದ ಆರೋನನು ಬಲಿಪೀಠದ ಕಡೆಗೆ ಹೋಗಿ, ತನಗಾಗಿ ಪಾಪ ಪರಿಹಾರದ ಬಲಿಯಾದ ಕರುವನ್ನು ವಧಿಸಿದನು. 9ಆಗ ಆರೋನನ ಪುತ್ರರು ಅವನ ಬಳಿಗೆ ರಕ್ತವನ್ನು ತಂದರು. ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಬಲಿಪೀಠದ ಅಡಿಯಲ್ಲಿ ಉಳಿದ ರಕ್ತವನ್ನು ಹೊಯ್ದನು. 10ಅದರ ಪಾಪ ಪರಿಹಾರದ ಬಲಿಯ ಕೊಬ್ಬು, ಮೂತ್ರಪಿಂಡಗಳು ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬು, ಇವುಗಳನ್ನು ಅವನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ, ಬಲಿಪೀಠದ ಮೇಲೆ ಸುಟ್ಟನು. 11ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
12ಅವನು ದಹನಬಲಿಯನ್ನು ವಧಿಸಿದಾಗ, ಆರೋನನ ಪುತ್ರರು ಅವನಿಗೆ ರಕ್ತವನ್ನು ತಂದು ಕೊಟ್ಟರು. ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು. 13ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದು ಕೊಡಲು, ಅವನು ಅವುಗಳನ್ನು ಬಲಿಪೀಠದ ಮೇಲೆ ಸುಟ್ಟನು. 14ಅವನು ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು, ಅವುಗಳನ್ನು ದಹನಬಲಿಯ ಜೊತೆ ಮೇಲಿನ ಬಲಿಪೀಠದ ಮೇಲೆ ಸುಟ್ಟನು.
15ಅದಾದ ಮೇಲೆ ಆರೋನನು ಜನರಿಗಾಗಿ ಅರ್ಪಿಸಿದ ಬಲಿಯನ್ನು ತಂದು, ಹೋತವನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಪರಿಹಾರದ ಬಲಿಯಾಗಿರುವುದನ್ನು ವಧಿಸಿ, ಮೊದಲನೆಯದರ ಹಾಗೆ ಅದನ್ನು ಸಮರ್ಪಿಸಿದನು.
16ಅವನು ದಹನಬಲಿಯನ್ನು ತಂದು, ಅದನ್ನು ವಿಧಿಬದ್ಧವಾಗಿ ಸಮರ್ಪಿಸಿದನು. 17ಅವನು ಧಾನ್ಯ ಸಮರ್ಪಣೆಯ ಬಲಿಯನ್ನು ತಂದು, ಅದರಲ್ಲಿ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಬೆಳಗಿನ ದಹನಬಲಿ ಯಜ್ಞದ ಬಳಿಯಲ್ಲಿ ಅದನ್ನು ಹೋಮ ಮಾಡಿದನು.
18ಅವನು ಜನರಿಗಾಗಿದ್ದ ಹೋರಿ ಮತ್ತು ಟಗರನ್ನು ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಅವನ ಬಳಿಗೆ ತರಲು, ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು. 19ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಹಿಂಭಾಗದ ಕೊಬ್ಬನ್ನೂ ಮತ್ತು ಕರುಳುಗಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳ ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬನ್ನೂ 20ಕೊಬ್ಬನ್ನು ಎದೆಯ ಭಾಗಗಳ ಮೇಲೆ ಇಡಲು, ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಟ್ಟನು. 21ಎದೆಯ ಭಾಗಗಳನ್ನು, ಬಲತೊಡೆಗಳನ್ನು ಆರೋನನು, ಮೋಶೆ ಆಜ್ಞಾಪಿಸಿದಂತೆ ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
22ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಮತ್ತು ಸಮಾಧಾನದ ಬಲಿಯನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
23ಮೋಶೆಯೂ ಆರೋನನೂ ದೇವದರ್ಶನದ ಗುಡಾರದ ಒಳಗೆ ಹೋಗಿ, ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವ ದೇವರ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು. 24ಆಗ ಅಲ್ಲಿ ಬೆಂಕಿಯು ಯೆಹೋವ ದೇವರ ಸನ್ನಿಧಿಯಿಂದ ಬಂದು, ಬಲಿಪೀಠದ ಮೇಲಿದ್ದ ದಹನಬಲಿಯನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಇದನ್ನು ಜನರೆಲ್ಲರೂ ಕಂಡಾಗ, ಅವರು ಆನಂದದಿಂದ ಜಯಘೋಷ ಮಾಡಿ ಅಡ್ಡಬಿದ್ದರು.

Highlight

Share

Copy

None

Want to have your highlights saved across all your devices? Sign up or sign in

Videos for ಯಾಜಕಕಾಂಡ 9