ಯಾಜಕಕಾಂಡ 8
8
ಆರೋನನ ಮಕ್ಕಳ ಯಾಜಕಾಭಿಷೇಕ
1ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, 2“ಆರೋನನನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಉಡುಪುಗಳನ್ನೂ, ಅಭಿಷೇಕ ತೈಲವನ್ನೂ, ಪಾಪ ಪರಿಹಾರದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೋ. 3ಎಲ್ಲಾ ಸಭೆಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸು,” ಎಂದರು. 4ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆಯೇ ಮಾಡಿದನು. ಸಭೆಯು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು.
5ಮೋಶೆಯು ಸಭೆಗೆ, “ಯೆಹೋವ ದೇವರು ಮಾಡುವುದಕ್ಕೆ ಆಜ್ಞಾಪಿಸಿರುವುದು ಇದೇ.” 6ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಬಂದು, ಸ್ನಾನಮಾಡಿಸಿ, 7ಆರೋನನಿಗೆ ನಿಲುವಂಗಿಯನ್ನು ಹೊದಿಸಿ, ನಡುಕಟ್ಟಿನಿಂದ ಅವನ ನಡುವನ್ನು ಕಟ್ಟಿ, ಅವನಿಗೆ ಮೇಲಂಗಿಯನ್ನು ತೊಡಿಸಿ, ಅವನ ಮೇಲೆ ಏಫೋದನ್ನು ಹಾಕಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ, ಅದರಿಂದ ಅವನನ್ನು ಬಿಗಿದನು. 8ಅವನ ಮೇಲೆ ಎದೆಪದಕವನ್ನು ಹಾಕಿ, ಆ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್ ಇವುಗಳನ್ನೂ ಸಹ ಹಾಕಿದನು. 9ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು, ಆ ಮುಂಡಾಸದ ಮೇಲೆ ಅಂದರೆ ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ, ಪವಿತ್ರವಾದ ಕಿರೀಟವನ್ನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಟ್ಟನು.
10ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರೊಳಗಿರುವುದೆಲ್ಲವನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು. 11ಅವನು ಅದರಿಂದ ಬಲಿಪೀಠದ ಮೇಲೆ ಏಳು ಸಾರಿ ಚಿಮುಕಿಸಿ, ಬಲಿಪೀಠವನ್ನೂ, ಅದರ ಎಲ್ಲಾ ಪಾತ್ರೆಗಳನ್ನೂ, ಗಂಗಾಳವನ್ನೂ, ಅದರ ಕಾಲನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು. 12ಅವನು ಅಭಿಷೇಕ ತೈಲದಿಂದ ಆರೋನನ ತಲೆಯ ಮೇಲೆ ಸುರಿದು, ಅವನನ್ನು ಪವಿತ್ರ ಮಾಡುವುದಕ್ಕಾಗಿ ಅವನನ್ನು ಅಭಿಷೇಕಿಸಿದನು. 13ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ, ಅವರ ನಡುಗಳನ್ನು ನಡುಕಟ್ಟುಗಳಿಂದ ಕಟ್ಟಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಹಾಕಿದನು.
14ಪಾಪ ಪರಿಹಾರದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಪುತ್ರರೂ ಪಾಪ ಪರಿಹಾರದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. 15ಆಗ ಅವನು ಅದನ್ನು ವಧಿಸಿದನು. ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಸುತ್ತಲೂ ಇರುವ ಕೊಂಬುಗಳ ಮೇಲೆ ತನ್ನ ಬೆರಳಿನಿಂದ ಹಚ್ಚಿ, ಬಲಿಪೀಠವನ್ನು ಶುದ್ಧೀಕರಿಸಿ, ಉಳಿದ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಅದನ್ನು ಪವಿತ್ರ ಮಾಡಿದನು. 16ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಮೋಶೆಯು ತೆಗೆದುಕೊಂಡು ಬಲಿಪೀಠದ ಮೇಲೆ ಸುಟ್ಟನು. 17ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಹೋರಿಯ ಮಾಂಸವನ್ನೂ, ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
18ದಹನಬಲಿಗಾಗಿ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. 19ಅವನು ಅದನ್ನು ವಧಿಸಿದನು. ತರುವಾಯ ಮೋಶೆಯು ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು. 20ಅವನು ಆ ಟಗರನ್ನು ತುಂಡುತುಂಡಾಗಿ ಮಾಡಿದನು. ಮೋಶೆಯು ತಲೆಯನ್ನು, ಆ ತುಂಡುಗಳನ್ನು, ಆ ಕೊಬ್ಬನ್ನು ಸುಟ್ಟನು. 21ಅವನು ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣವಾಗಿ ಬಲಿಪೀಠದ ಮೇಲೆ ಸುಟ್ಟನು. ಇದು ದಹನಬಲಿಯಾಗಿ ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯ ಸಮರ್ಪಣೆಯಾಗಿತ್ತು.
22ಅವನು ಪ್ರತಿಷ್ಠೆಯ ಟಗರಾದ ಇನ್ನೊಂದು ಟಗರನ್ನು ತಂದನು. ಆಗ ಆರೋನನೂ, ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. 23ಮೋಶೆಯು ಅದನ್ನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಅದನ್ನು ಆರೋನನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು. 24ಮೋಶೆಯು ಆರೋನನ ಪುತ್ರರನ್ನು ಕರೆತಂದು ಅವರ ಬಲಗಿವಿಯ ತುದಿಯ ಮೇಲೆಯೂ, ಅವರವರ ಬಲಗೈಯ ಹೆಬ್ಬೆರಳಿಗೂ, ಅವರವರ ಬಲಗಾಲಿನ ಹೆಬ್ಬೆಟ್ಟಿಗೂ ಆ ರಕ್ತವನ್ನು ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು. 25ಅವನು ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಂಡನು. 26ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ ತೆಗೆದುಕೊಂಡು, ಅವುಗಳನ್ನು ಕೊಬ್ಬಿನ ಮೇಲೆಯೂ, ಬಲಭುಜದ ಮೇಲೆಯೂ ಇಟ್ಟನು. 27ಅದೆಲ್ಲವನ್ನೂ ಆರೋನನ ಕೈಗಳಿಗೆ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಯೆಹೋವ ದೇವರ ಮುಂದೆ ಸಮರ್ಪಣೆಗಾಗಿ ಅವುಗಳನ್ನು ನೈವೇದ್ಯ ಮಾಡಿಸಿದನು. 28ಆಮೇಲೆ ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಅವುಗಳನ್ನು ಸುಟ್ಟನು. ಅವು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಸುಗಂಧಕರ ಪ್ರತಿಷ್ಠೆಯ ಬಲಿಯಾಗಿದ್ದವು. 29ಮೋಶೆಯು ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಿದನು. ಏಕೆಂದರೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಷ್ಠಿತ ಟಗರು ಮೋಶೆಯ ಪಾಲಾಗಿತ್ತು.
30ಮೋಶೆಯು ಅಭಿಷೇಕ ತೈಲವನ್ನೂ, ಬಲಿಪೀಠದ ಮೇಲಿರುವ ರಕ್ತವನ್ನೂ ತೆಗೆದುಕೊಂಡು, ಆರೋನನ ಮೇಲೆಯೂ, ಅವನ ಉಡುಪುಗಳ ಮೇಲೆಯೂ ಅವನೊಂದಿಗೆ ಅವನ ಪುತ್ರರ ಮೇಲೆಯೂ, ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು. ಆರೋನನನ್ನೂ, ಅವನ ಉಡುಪುಗಳನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಅವನ ಪುತ್ರರ ಉಡುಪುಗಳನ್ನೂ ಪವಿತ್ರ ಮಾಡಿದನು.
31ಮೋಶೆಯು ಆರೋನನಿಗೂ, ಅವನ ಪುತ್ರರಿಗೂ, “ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ. ಅದನ್ನು ಪ್ರತಿಷ್ಠಿತ ಬುಟ್ಟಿಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು. ನಾನು ಆಜ್ಞಾಪಿಸಿ ಹೇಳಿದಂತೆ, ‘ಆರೋನನು ಮತ್ತು ಅವನ ಪುತ್ರರು ಅದನ್ನು ತಿನ್ನಬೇಕು.’ 32ಮಾಂಸದಲ್ಲಿಯೂ, ರೊಟ್ಟಿಯಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದ ಸುಡಬೇಕು. 33ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಗೊಳ್ಳುವುದಕ್ಕೆ ಏಳು ದಿವಸ ಹಿಡಿಯುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು. 34ನಿಮ್ಮ ದೋಷಪರಿಹಾರಕ್ಕಾಗಿ ಈ ಹೊತ್ತು ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ. 35ಆದ್ದರಿಂದ ಏಳು ದಿನಗಳವರೆಗೆ ನೀವು ಸಾಯದಂತೆ ಹಗಲೂ ರಾತ್ರಿ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಆಜ್ಞೆಯನ್ನು ಕೈಗೊಳ್ಳಬೇಕು. ಏಕೆಂದರೆ ಹಾಗೆಯೇ ನನಗೆ ಅಪ್ಪಣೆಯಾಗಿದೆ,” ಎಂದನು.
36ಹೀಗೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ, ಆರೋನನೂ, ಅವನ ಪುತ್ರರೂ ಮಾಡಿದರು.
Currently Selected:
ಯಾಜಕಕಾಂಡ 8: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.