YouVersion Logo
Search Icon

ಅರಣ್ಯಕಾಂಡ 36

36
ಚಲ್ಪಹಾದನ ಪುತ್ರಿಯರ ಸೊತ್ತಿನ ಹಕ್ಕು
1ಆಗ ಯೋಸೇಫನ ಪುತ್ರರ ಕುಟುಂಬದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬಗಳ ಮುಖ್ಯಸ್ಥರು ಮೋಶೆ ಹಾಗೂ ಇಸ್ರಾಯೇಲರ ಕುಲನಾಯಕರ ಸಮೀಪಕ್ಕೆ ಬಂದು ಮಾತನಾಡಿ, 2“ಚೀಟುಹಾಕಿ ನಾಡನ್ನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವುದಕ್ಕೆ ಯೆಹೋವ ದೇವರು ನಮ್ಮ ಒಡೆಯನಾದ ನಿನಗೆ ಆಜ್ಞಾಪಿಸಿದರು. ನಮ್ಮ ಸಹೋದರನಾದ ಚಲ್ಪಹಾದನ ಸೊತ್ತನ್ನು ಅವನ ಪುತ್ರಿಯರಿಗೆ ಕೊಡಬೇಕೆಂದು ದೇವರಿಂದ ಅಪ್ಪಣೆಯಾಗಿತ್ತು. 3ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು. 4ಇಸ್ರಾಯೇಲರಿಗೆ ಜೂಬಿಲಿ#36:4 ಜೂಬಿಲಿ ಎಂದರೆ ಐವತ್ತನೇ ವರ್ಷ ವರ್ಷ ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಗೋತ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಗೋತ್ರದ ಸೊತ್ತಿನಿಂದ ತೆಗೆಯಲಾಗುವುದು.”
5ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಇಸ್ರಾಯೇಲರಿಗೆ ಆಜ್ಞಾಪಿಸಿ, “ಯೋಸೇಫನ ಪುತ್ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ. 6ಯೆಹೋವ ದೇವರು ಚಲ್ಪಹಾದನ ಪುತ್ರಿಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನೆಂದರೆ: ಅವರು ತಮ್ಮ ಮನಸ್ಸು ಬಂದವರೊಂದಿಗೆ ಮದುವೆಮಾಡಿಕೊಳ್ಳಲಿ, ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದವರಿಗೆ ಮಾತ್ರ ಮದುವೆ ಮಾಡಿಕೊಳ್ಳಬಹುದು. 7ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು. 8ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು. 9ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು.
10ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾದನ ಪುತ್ರಿಯರು ಮಾಡಿದರು. 11ಚಲ್ಪಹಾದನ ಪುತ್ರಿಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ, ತಮ್ಮ ಚಿಕ್ಕಪ್ಪಂದಿರ ಪುತ್ರರನ್ನು ಮದುವೆಯಾದರು. 12ಯೋಸೇಫನ ಮಗನಾದ ಮನಸ್ಸೆಯ ಪುತ್ರರ ಕುಟುಂಬದವರೊಡನೆ ಮದುವೆಯಾದರು. ಈ ಪ್ರಕಾರ ಅವರ ಸೊತ್ತು ತಮ್ಮ ಪಿತೃವಿನ ಗೋತ್ರದಲ್ಲಿಯೇ ಉಳಿಯಿತು.
13ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರಿಗೆ ಆಜ್ಞಾಪಿಸಿದ ಆಜ್ಞೆಗಳೂ, ನ್ಯಾಯಗಳೂ ಇವೇ.

Highlight

Share

Copy

None

Want to have your highlights saved across all your devices? Sign up or sign in

Video for ಅರಣ್ಯಕಾಂಡ 36