ಅರಣ್ಯಕಾಂಡ 25
25
ಮೋವಾಬ್ ಮಹಿಳೆಯರು ಇಸ್ರಾಯೇಲರನ್ನು ಪ್ರಚೋದಿಸಿದ್ದು
1ಆಗ ಇಸ್ರಾಯೇಲರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ, ಅವರು ಮೋವಾಬಿನ ಪುತ್ರಿಯರ ಸಂಗಡ ಜಾರತ್ವ ಮಾಡಲಾರಂಭಿಸಿದರು. 2ಆ ಮಹಿಳೆಯರು ಇಸ್ರಾಯೇಲರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು. ಇವರು ತಿಂದು ಅವರ ದೇವರುಗಳಿಗೆ ಅಡ್ಡಬಿದ್ದರು. 3ಹೀಗೆ ಇಸ್ರಾಯೇಲರು ಬಾಳ್ ಪೆಯೋರಿನೊಂದಿಗೆ ತಾವೇ ಕೂಡಿ ಪೂಜಿಸಿದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡರು.
4ಆಗ ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೋಪಾಗ್ನಿಯು ಇಸ್ರಾಯೇಲಿನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥರೆಲ್ಲರನ್ನು ತೆಗೆದುಕೊಂಡು, ಅವರನ್ನು ಹಗಲು ಹೊತ್ತಿನಲ್ಲಿ ಯೆಹೋವ ದೇವರ ಮುಂದೆ ಕೊಂದುಹಾಕು.”
5ಆದ್ದರಿಂದ ಮೋಶೆ ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ಬಾಳ್ ಪೆಯೋರಿನೊಂದಿಗೆ ಕೂಡಿ ಪೂಜಿಸಿರುವ ನಿನ್ನ ಜನರನ್ನು ಕೊಲ್ಲಬೇಕು,” ಎಂದನು.
6ಆಗ ಇಸ್ರಾಯೇಲರಲ್ಲಿ ಒಬ್ಬನು ಮೋಶೆಗೆ ಹಾಗೂ ದೇವದರ್ಶನ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲರ ಸಮಸ್ತ ಸಮೂಹಕ್ಕೂ ಕಾಣುವ ಹಾಗೆ ಒಬ್ಬ ಮಿದ್ಯಾನ್ ಮಹಿಳೆಯನ್ನು ಕರೆತಂದನು. 7ಕೂಡಲೆ ಮಾಹಾಯಾಜಕ ಆರೋನನ ಮಗನಾಗಿದ್ದ ಎಲಿಯಾಜರನ ಮಗ ಫೀನೆಹಾಸನು ಅದನ್ನು ನೋಡಿ, ಜನರ ಮಧ್ಯದಿಂದ ಎದ್ದು, ತನ್ನ ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು, 8ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ, ಇಸ್ರಾಯೇಲಿನವನನ್ನೂ ಆ ಮಹಿಳೆಯನ್ನೂ ಒಂದೇ ಬಾರಿಗೆ ಇಬ್ಬರ ಹೊಟ್ಟೆಯನ್ನು ತಿವಿದನು. ಹೀಗೆ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು. 9ಆದರೂ, ವ್ಯಾಧಿಯಿಂದ ಸತ್ತವರು 24,000 ಮಂದಿಯಾಗಿದ್ದರು.
10ಯೆಹೋವ ದೇವರು ಮೋಶೆಗೆ, 11“ಯಾಜಕನಾದ ಆರೋನನ ಮೊಮ್ಮಗನೂ, ಎಲಿಯಾಜರನ ಮಗ ಫೀನೆಹಾಸನು ಇಸ್ರಾಯೇಲರಲ್ಲಿ ನನಗೋಸ್ಕರ ಆಸಕ್ತನಾಗಿದ್ದು, ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ, ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿಬಿಟ್ಟಿದ್ದಾನೆ. 12ಆದಕಾರಣ, ನಾನು ಅವನೊಂದಿಗೆ ನನ್ನ ಸಮಾಧಾನದ ಒಡಂಬಡಿಕೆಯನ್ನು ಮಾಡುತ್ತೇನೆ ಎಂದು ಹೇಳು. 13ಅವನು ತನ್ನ ದೇವರ ಗೌರವವನ್ನು ಕಾಪಾಡಲು ಆಸಕ್ತನಾಗಿದ್ದು, ಇಸ್ರಾಯೇಲರಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ, ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆ ಮಾಡಿದ್ದೇನೆ,” ಎಂದರು.
14ಮಿದ್ಯಾನ್ ಸ್ತ್ರೀಯ ಸಂಗಡ ಹತನಾದ ಆ ಇಸ್ರಾಯೇಲಿನವನ ಹೆಸರು ಜಿಮ್ರಿ, ಅವನು ಸಿಮೆಯೋನ್ ಕುಲದವರಲ್ಲಿ ಗೋತ್ರದ ಮುಖ್ಯಸ್ಥನಾಗಿದ್ದ ಸಾಲೂ ಎಂಬುವನ ಮಗನು. 15ಹತಳಾದ ಆ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ, ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಗೆ ಯಜಮಾನನೂ ಆಗಿರುವ ಚೂರ್ ಎಂಬವನ ಮಗಳಾಗಿದ್ದಳು.
16ಯೆಹೋವ ದೇವರು ಮೋಶೆಗೆ, 17“ಮಿದ್ಯಾನ್ಯರನ್ನು ವೈರಿ ಎಂದು ತಿಳಿದು ಹೊಡೆಯಬೇಕು. 18ಅವರು ಪೆಯೋರಿನ ವಿಷಯದಲ್ಲಿಯೂ, ಪೆಯೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಹತಳಾದ ತಮ್ಮ ಸಹೋದರಿಯಾಗಿಯೂ, ಮಿದ್ಯಾನ್ಯರ ಪ್ರಧಾನನ ಮಗಳಾಗಿಯೂ, ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರವ ಕೊಡುತ್ತಾರೆ,” ಎಂದರು.
Currently Selected:
ಅರಣ್ಯಕಾಂಡ 25: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.