YouVersion Logo
Search Icon

ಮೀಕ 1

1
1ಯೆಹೂದದ ಅರಸರಾದ ಯೋತಾಮನ ಆಹಾಜನ, ಹಿಜ್ಕೀಯನ, ದಿವಸಗಳಲ್ಲಿ ಮೊರೇಷೆತಿನವನಾದ ಮೀಕನಿಗೆ ಬಂದ ಯೆಹೋವ ದೇವರ ವಾಕ್ಯವು. ಅವನು ಸಮಾರ್ಯ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡ ದರ್ಶನ.
2ಎಲ್ಲಾ ಜನಗಳೇ ಕೇಳಿರಿ,
ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ.
ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ
ವಿರೋಧವಾಗಿ ಸಾಕ್ಷಿ ಹೇಳುವರು.
ಸಮಾರ್ಯಕ್ಕೂ ಯೆರೂಸಲೇಮಿಗೂ ದಂಡನೆ
3ಯೆಹೋವ ದೇವರು ತಮ್ಮ ವಾಸಸ್ಥಾನದಿಂದ ಇಳಿದು ಬರುತ್ತಾರೆ.
ಅವರು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ಸಂಚರಿಸುತ್ತಾರೆ.
4ಬೆಂಕಿಯ ಮುಂದೆ ಮೇಣದ ಹಾಗೆಯೂ
ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ
ಬೆಟ್ಟಗಳು ಆತನ ಕೆಳಗೆ ಕರಗುವುವು;
ತಗ್ಗುಗಳು ಸೀಳುವುವು.
5ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೇ
ಇಸ್ರಾಯೇಲಿನ ಮನೆತನದವರ ಪಾಪದಿಂದಲೇ,
ಯಾಕೋಬನ ಅಪರಾಧವೇನು? ಅದು ಸಮಾರ್ಯವಲ್ಲವೇ?
ಯೆಹೂದದ ಉನ್ನತ ಪೂಜಾಸ್ಥಳ ಯಾವುದು?
ಅದು ಯೆರೂಸಲೇಮು ಅಲ್ಲವೋ?
6ಹೀಗಿರುವುದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬವನ್ನಾಗಿಯೂ
ದ್ರಾಕ್ಷಿಬಳ್ಳಿ ನೆಡುವ ಸ್ಥಳವನ್ನಾಗಿಯೂ ಮಾಡುವೆನು.
ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು,
ಅದರ ಅಸ್ತಿವಾರಗಳನ್ನು ಹೊರಗೆಡಹುವೆನು.
7ಅದರ ವಿಗ್ರಹಗಳೆಲ್ಲಾ ತುಂಡುಗಳಾಗುವಂತೆ ಮಾಡುವೆನು.
ಅದರ ಆಲಯದ ಕಾಣಿಕೆಗಳೆಲ್ಲಾ ಬೆಂಕಿಯಿಂದ ಸುಟ್ಟುಹೋಗುವುದು.
ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು.
ಅದು ವೇಶ್ಯಾವೃತ್ತಿಯ ಕೂಲಿಯಿಂದ ಕೂಡಿಸಿಕೊಂಡವು.
ವೇಶ್ಯಾವೃತ್ತಿಯ ಕೂಲಿಯನ್ನಾಗಿಯೇ ಅವುಗಳನ್ನು ಉಪಯೋಗಿಸಬೇಕಾಗುತ್ತದೆ.
ಗೋಳಾಟ ಮತ್ತು ಕೂಗಾಟ
8ಆದ್ದರಿಂದ ನಾನು ಗೋಳಾಡಿ ಅರಚುವೆನು.
ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು.
ನರಿಗಳ ಹಾಗೆ ಕೂಗುವೆನು,
ಉಷ್ಟ್ರಪಕ್ಷಿಯಂತೆ ನರಳುವೆನು.
9ಸಮಾರ್ಯದ ಗಾಯವು ಗುಣವಾಗದಂಥದ್ದು,
ಅದು ಯೆಹೂದಕ್ಕೆ ಬಂತು;
ನನ್ನ ಜನರ ಬಾಗಿಲಿಗೂ
ಯೆರೂಸಲೇಮಿನವರೆಗೂ ಅದು ತಲುಪಿತು.
10ಗತ್ ಊರಿನಲ್ಲಿ ಅದನ್ನು ತಿಳಿಸಬೇಡ;
ಸ್ವಲ್ಪವಾದರೂ ಅಳಬೇಡ;
ಬೇತ್ ಒಫ್‌ರಾಹದಲ್ಲಿ#1:10 ಬೇತ್ ಒಫ್ ಅಂದರೆ ಧೂಳಿನ ಮನೆ
ಧೂಳಿನಲ್ಲಿ ಹೊರಳಾಡು.
11ಶಾಫೀರಿನ ನಿವಾಸಿಯೇ,
ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ,
ಚಾನಾನಿನಲ್ಲಿ ವಾಸಿಸುವವರು
ಹೊರಗೆ ಬರುವುದಿಲ್ಲ,
ಬೇತ್ ಎಚೆಲು ನರಳುತ್ತಿದೆ.
ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ.
12ಕೇಡು ಯೆಹೋವ ದೇವರಿಂದ ಇಳಿದು
ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ
ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು
ವೇದನೆ ಪಡುತ್ತಾರೆ.
13ಲಾಕೀಷಿನ ನಿವಾಸಿಗಳೇ,
ಕುದುರೆಗಳನ್ನು ರಥಕ್ಕೆ ಕಟ್ಟಿರಿ,
ಚೀಯೋನ್ ಮಗಳ ಪಾಪವು ನಿನ್ನಿಂದ ಪ್ರಾರಂಭವಾಯಿತು
ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿ ಬಂದವು.
14ಹೀಗಿರುವುದರಿಂದ ಮೋರೆಶತ್ ಗತ್
ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ.
ಅಕ್ಜೀಬಿನ ಮನೆತನಗಳು
ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು.
15ಮಾರೇಷದ ನಿವಾಸಿಯೇ,
ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು.
ಇಸ್ರಾಯೇಲಿನ ಮಹಿಮೆಯಾದಾತನು
ಅದುಲ್ಲಾಮಿನ ಮಟ್ಟಿಗೂ ಬರುವನು.
16ನಿನ್ನ ಮುದ್ದುಮಕ್ಕಳಿಗೋಸ್ಕರ
ತಲೆ ಬೋಳಿಸಿಕೊಂಡು ಕ್ಷೌರಮಾಡಿಸಿಕೋ.
ನಿನ್ನ ಬೋಳುತನವನ್ನು ಹದ್ದಿನಂತೆ ಮಾಡಿಕೋ.
ಏಕೆಂದರೆ ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗುವರು.

Currently Selected:

ಮೀಕ 1: KSB

Highlight

Share

Copy

None

Want to have your highlights saved across all your devices? Sign up or sign in