ಹೋಶೇಯ 12
12
1ಎಫ್ರಾಯೀಮು ಗಾಳಿಯನ್ನು ತಿನ್ನುತ್ತದೆ.
ಪೂರ್ವದ ಗಾಳಿಯ ಹಿಂದೆ ಹಿಂಬಾಲಿಸಿಕೊಂಡು ಹೋಗುತ್ತದೆ.
ಅವನು ದಿನವೆಲ್ಲಾ ಸುಳ್ಳನ್ನೂ, ಹಿಂಸೆಯನ್ನೂ ಹೆಚ್ಚಿಸಿ,
ಅಸ್ಸೀರಿಯರೊಂದಿಗೆ ಒಡಂಬಡಿಕೆ ಮಾಡಿಕೊಂಡು,
ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಹೊತ್ತುಕೊಂಡು ಹೋಗುತ್ತಾನೆ.
2ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ,
ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ,
ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.
3ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು,
ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.
4ಯಾಕೋಬನು ದೇವದೂತನ ಸಂಗಡ ಹೋರಾಡಿ ಜಯಿಸಿದನು.
ಅವನು ಅತ್ತು ಆತನ ಅನುಗ್ರಹಕ್ಕಾಗಿ ವಿಜ್ಞಾಪನೆಯನ್ನು ಸಲ್ಲಿಸಿದನು.
ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು.
ಅಲ್ಲಿ ಅವನು ಆತನೊಂದಿಗೆ ಮಾತನಾಡಿದನು.
5ಅವರೇ ಸರ್ವಶಕ್ತರಾದ ಯೆಹೋವ ದೇವರು;
ಅವರ ಪ್ರಸಿದ್ಧ ಹೆಸರು ಯೆಹೋವ ದೇವರು ಎಂಬುದೇ.
6ಆದರೆ ನೀನು ನಿನ್ನ ದೇವರ ಕಡೆಗೆ ತಿರುಗಿಕೋ.
ಪ್ರೀತಿಯನ್ನೂ, ನ್ಯಾಯವನ್ನೂ ಪಾಲಿಸು
ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.
7ಅವನು ವ್ಯಾಪಾರಿಯಾಗಿದ್ದು, ಅವನ ಕೈಯಲ್ಲಿ ಮೋಸದ ತಕ್ಕಡಿ ಇದೆ.
ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅವನ ದುರಾಶೆ.
8ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ,
“ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು.
ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ
ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”
9ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ,
ನಿನ್ನ ದೇವರಾಗಿರುವ ಯೆಹೋವ ದೇವರಾದ ನಾನು,
ಜಾತ್ರೆಯ ದಿನಗಳಲ್ಲಿ ನೀವು ವನವಾಸ ಮಾಡಿದಂತೆ,
ನಿಮ್ಮನ್ನು ಪುನಃ ಗುಡಾರದ ವಾಸಕ್ಕೆ ಗುರಿಪಡಿಸುವೆನು.
10ನಾನು ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ.
ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ.
ಅವರ ಮುಖಾಂತರ ಸಾಮ್ಯಗಳನ್ನು ಜನರಿಗೆ ಹೇಳಿದ್ದೇನೆ.
11ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ?
ಅಲ್ಲಿನ ಜನರು ಅಯೋಗ್ಯರೇ?
ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ?
ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ
ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.
12ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು.
ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ,
ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
13ಪ್ರವಾದಿಯಿಂದ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಬರಮಾಡಿ,
ಆ ಪ್ರವಾದಿಯಿಂದಲೇ ಆತನು ಅವರನ್ನು ಕಾಪಾಡಿದರು.
14ಆದರೂ ಎಫ್ರಾಯೀಮು ಬಹು ಕಠೋರವಾಗಿ ಆತನನ್ನು ರೇಗಿಸಿತು.
ಆದ್ದರಿಂದ ಯೆಹೋವ ದೇವರು ಅದರ ರಕ್ತಾಪರಾಧವನ್ನು ಅದರ ಮೇಲೆ ಬರಮಾಡುವರು.
ಅವನ ನಿಂದೆಯನ್ನು ಯೆಹೋವ ದೇವರು ಅವನ ಮೇಲೆ ಬರಮಾಡುವರು.
Currently Selected:
ಹೋಶೇಯ 12: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.