YouVersion Logo
Search Icon

ಆಮೋಸ 3

3
ಇಸ್ರೇಲಿಗೆ ಎಚ್ಚರಿಕೆಯ ಮಾತು
1ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ. 2“ಈ ಭೂಮುಖದಲ್ಲಿ ಅನೇಕ ಕುಟುಂಬಗಳಿವೆ. ಅವರೆಲ್ಲರಲ್ಲಿ ನಿಮ್ಮನ್ನು ಮಾತ್ರವೇ ನಾನು ವಿಶೇಷ ರೀತಿಯಲ್ಲಿ ಬಲ್ಲೆನು. ಆದರೆ ನೀವು ನನಗೆ ವಿರುದ್ಧವಾದಿರಿ. ಆದ್ದರಿಂದ ನಾನು ನೀವು ಮಾಡಿದ ಪಾಪಗಳಿಗೆ ನಿಮ್ಮೆಲ್ಲರನ್ನು ಶಿಕ್ಷಿಸುವೆನು.”
ಇಸ್ರೇಲಿನ ಶಿಕ್ಷೆಯ ಕಾರಣ
3ಇಬ್ಬರು ಒಟ್ಟಾಗಿ ನಡೆಯಬೇಕಾದರೆ
ಅದಕ್ಕೆ ಅವರಿಬ್ಬರೂ ಒಪ್ಪಿಕೊಂಡಿರಲೇಬೇಕು.
4ಅಡವಿಯಲ್ಲಿರುವ ಸಿಂಹವು
ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು.
ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ
ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
5ಬಲೆಯಲ್ಲಿ ಆಹಾರ ಹಾಕದಿದ್ದರೆ
ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಏನೂ ಸಿಕ್ಕಿಕೊಳ್ಳದೆ
ಬೋನು ಮುಚ್ಚಿಕೊಳ್ಳುವುದೇ?
6ತುತ್ತೂರಿಯ ಎಚ್ಚರಿಕೆಯ ಶಬ್ಧವನ್ನು ಕೇಳಿದ ಜನರು
ಖಂಡಿತವಾಗಿ ಹೆದರಿ ನಡುಗುವರು.
ಒಂದು ಗಂಡಾಂತರವು ಪಟ್ಟಣಕ್ಕೆ ಬಂದಿರುವುದಾದರೆ
ಅದನ್ನು ಬರಮಾಡಿದಾತನು ಯೆಹೋವನೇ.
7ನನ್ನ ಒಡೆಯನಾದ ಯೆಹೋವನು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಬಹುದು. ಆದರೆ ಆತನು ಹಾಗೆ ಮಾಡುವ ಮುಂಚಿತವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ಮುಂತಿಳಿಸುವನು. 8ಸಿಂಹವು ಗರ್ಜಿಸಿದಾಗ ಜನರಿಗೆ ಭಯವಾಗುವುದು. ಯೆಹೋವನು ಮಾತನಾಡಿದಾಗ ಪ್ರವಾದಿಗಳು ಪ್ರವಾದಿಸುವರು.
9-10ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”
11ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”
12ಯೆಹೋವನು ಹೇಳುವುದೇನೆಂದರೆ,
“ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ
ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು.
ಆದರೆ ಕುರುಬನು ಆ ಕುರಿಮರಿಯ
ಒಂದು ಭಾಗವನ್ನು ಮಾತ್ರ ಕಾಪಾಡಿಯಾನು.
ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ
ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು.
ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ.
ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ
ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”
13ಸರ್ವಶಕ್ತನೂ ನನ್ನ ಒಡೆಯನೂ ಆಗಿರುವ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, “ಯಾಕೋಬನ ಕುಟುಂಬದವರಿಗೆ ಈ ವಿಷಯವನ್ನು ತಿಳಿಸು. 14ಇಸ್ರೇಲು ಪಾಪಮಾಡಿದೆ. ಅದಕ್ಕಾಗಿ ನಾನು ಅದನ್ನು ಶಿಕ್ಷಿಸುವೆನು. ಬೇತೇಲಿನಲ್ಲಿರುವ ವೇದಿಕೆಗಳನ್ನು ನಾನು ನಾಶಮಾಡುವೆನು. ವೇದಿಕೆಯ ಕೊಂಬುಗಳು ಮುರಿಯಲ್ಪಟ್ಟು ನೆಲದ ಮೇಲೆ ಬೀಳುವವು. 15ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು.

Currently Selected:

ಆಮೋಸ 3: KERV

Highlight

Share

Copy

None

Want to have your highlights saved across all your devices? Sign up or sign in