YouVersion Logo
Search Icon

ಲೂಕ 6:27-49

ಲೂಕ 6:27-49 IRVKAN

“ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ. ನಿನ್ನನ್ನು ಬೇಡುವವರೆಲ್ಲರಿಗೂ ಕೊಡು; ನಿನ್ನ ಸೊತ್ತನ್ನು ಕಸಿದುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ. ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ. “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. ನಿಮಗೆ ಉಪಕಾರ ಮಾಡುವವರಿಗೇ ನೀವು ಉಪಕಾರ ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. ಸಾಲತೀರಿಸುವುರೆಂದು ನಿರೀಕ್ಷಿಸಿ ನೀವು ಅಂಥವರಿಗೆ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರೂ ಸಹ ತಾವು ಕೊಟ್ಟಷ್ಟು ತಮಗೆ ತಿರುಗಿ ಸಿಕ್ಕೀತೆಂದು ಸಾಲ ಕೊಡುತ್ತಾರಲ್ಲಾ. ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಏನನ್ನೂ ನಿರೀಕ್ಷಿಸದೆ ಸಾಲಕೊಡಿರಿ. ಹೀಗೇ ಮಾಡಿದರೆ, ನಿಮಗೆ ಬಹಳ ಫಲಸಿಕ್ಕುವುದು ಮತ್ತು ನೀವು ಪರಾತ್ಪರನಾದ ದೇವರ ಮಕ್ಕಳಾಗುವಿರಿ. ದೇವರು ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ. ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ ನೀವೂ ಕರುಣೆಯುಳ್ಳವರಾಗಿರಿ. “ಇದಲ್ಲದೆ ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ; ಕ್ಷಮಿಸಿರಿ, ಆಗ ನಿಮಗೂ ಕ್ಷಮಿಸಲ್ಪಡುವುದು. ಕೊಡಿರಿ, ಆಗ ನಿಮಗೂ ಕೊಡಲ್ಪಡುವುದು; ಅದುಮಿ, ಅಲ್ಲಾಡಿಸಿ, ತುಂಬಿತುಳುಕುವಂತೆ, ಅಳೆದು ನಿಮ್ಮ ಸೆರಿಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು” ಅಂದನು. ಇದಲ್ಲದೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಕುರುಡನು ಕುರುಡನಿಗೆ ದಾರಿ ತೋರಿಸುವುದಕ್ಕಾದೀತೇ? ಅವರಿಬ್ಬರೂ ಹಳ್ಳದಲ್ಲಿ ಬೀಳುವರಲ್ಲವೆ. ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ; ಆದರೆ ಪೂರ್ಣವಾಗಿ ಕಲಿತವನಾದ ಪ್ರತಿಯೊಬ್ಬನು ತನ್ನ ಗುರುವಿನಂತಾಗಿರುವನು. “ಇದಲ್ಲದೆ ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ಇಲ್ಲವೆ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನಿಗೆ, ‘ಅಣ್ಣಾ, ನಿನ್ನ ಕಣ್ಣಿನೊಳಗಿನ ಅಣುವನ್ನು ತೆಗೆಯುತ್ತೇನೆ ಬಾ’ ಎಂದು ಹೇಳುವುದಕ್ಕೆ ಹೇಗಾದೀತು? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿಕೋ, ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿನ ಅಣುವನ್ನು ತೆಗೆಯುವುದಕ್ಕೆ ಚೆನ್ನಾಗಿ ಕಾಣಿಸುವುದು. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಹಾಗೆಯೇ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವು ಅದರ ಫಲದಿಂದಲೇ ಗೊತ್ತಾಗುವುದು. ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನು ಕೀಳುವುದಿಲ್ಲ, ಕಳ್ಳಿ ಗಿಡದಲ್ಲಿ ದ್ರಾಕ್ಷಿಹಣ್ಣುಗಳನ್ನು ಕೊಯ್ಯುಲು ಸಾಧ್ಯವಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟಬೊಕ್ಕಸದೊಳಗಿನಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು. “ಇದಲ್ಲದೆ ನೀವು ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಕರೆದು ನಾನು ಹೇಳುವುದನ್ನು ಮಾಡದೆ ಇರುವುದೇಕೆ? ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಅಂಥವನಿಗೆ ಸಮಾನನೆಂಬುದನ್ನು ನಿಮಗೆ ತೋರಿಸುತ್ತೇನೆ. ಅವನು ಆಳವಾಗಿ ಅಗೆದು, ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೇ ಕಟ್ಟಿದವನಿಗೆ ಸಮಾನನು. ಹೊಳೆಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಚೆನ್ನಾಗಿ ಕಟ್ಟಿರುವುದರಿಂದ ಆ ಪ್ರವಾಹವು ಅದನ್ನು ಅಲ್ಲಾಡಿಸಲಾರದೆ ಹೋಯಿತು. ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದಿರುವವನು ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೇ ಕಟ್ಟಿದವನಿಗೆ ಸಮಾನನು. ಪ್ರವಾಹವು ಅದಕ್ಕೆ ಅಪ್ಪಳಿಸಿ ಬಡಿದ ಕೂಡಲೇ ಅದು ಕುಸಿದುಬಿತ್ತು ಮತ್ತು ಅದರ ನಾಶನವು ವಿಪರೀತವಾಗಿತ್ತು.”