YouVersion Logo
Search Icon

1 ಸಮು 4

4
ಫಿಲಿಷ್ಟಿಯರ ಜಯ - ಏಲಿಯ ಮಕ್ಕಳ ಮರಣ
1ಇಸ್ರಾಯೇಲರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸಮೀಪದಲ್ಲಿ ಪಾಳೆಯಮಾಡಿಕೊಂಡರು; ಫಿಲಿಷ್ಟಿಯರು ಬಂದು ಅಫೇಕಿನಲ್ಲಿ ಇಳಿದುಕೊಂಡರು. 2ಇವರು ಇಸ್ರಾಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧಮಾಡಲು ಇಸ್ರಾಯೇಲರು ಸೋತರು; ಫಿಲಿಷ್ಟಿಯರು ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಾಯೇಲರನ್ನು ಸಂಹರಿಸಿದರು. 3ಇಸ್ರಾಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರ ಹಿರಿಯರು ಅವರಿಗೆ, “ಯೆಹೋವನು ಈ ಹೊತ್ತು ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ತಪ್ಪಿಸಲಿ” ಎಂದು ಆಲೋಚನೆ ಹೇಳಿದ್ದರಿಂದ ಅವರು ಜನರನ್ನು ಕಳುಹಿಸಿ 4#4:4 ವಿಮೋ 25:22.ಕೆರೂಬಿಗಳ ಮಧ್ಯದಲ್ಲಿ ಆಸೀನನಾಗಿರುವ ಸೇನಾಧೀಶ್ವರ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು. 5ಯೆಹೋವನ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇಲ್ಯರೆಲ್ಲಾ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು. 6ಫಿಲಿಷ್ಟಿಯರು ಇದನ್ನು ಕೇಳಿ, “ಇಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೇನು ಕಾರಣ” ಎಂದು ವಿಚಾರಿಸುವಲ್ಲಿ ಯೆಹೋವನ ಮಂಜೂಷವು ಪಾಳೆಯದಲ್ಲಿ ಬಂದದ್ದೇ ಕಾರಣವೆಂದು ತಿಳಿದುಕೊಂಡರು. 7ದೇವರು ಇವರ ಪಾಳೆಯಕ್ಕೆ ಬಂದಿದ್ದಾನಲ್ಲಾ ಎಂದು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟು, “ಅಯ್ಯೋ! ಮುಂಚೆ ಹೀಗಾಗಿರಲ್ಲಿಲ್ಲ. 8ಅಯ್ಯೋ! ಪರಾಕ್ರಮವುಳ್ಳ ಈ ದೇವರ ಕೈಯಿಂದ ನಮ್ಮನ್ನು ಬಿಡಿಸುವವರು ಯಾರು? ಐಗುಪ್ತ್ಯರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೋ! 9#4:9 1 ಕೊರಿ 16:13.ಫಿಲಿಷ್ಟಿಯರೇ, ಬಲಗೊಳ್ಳಿರಿ, ಶೂರರಾಗಿರಿ; ನಿಮಗೆ ದಾಸರಾಗಿದ್ದ ಇಬ್ರಿಯರಿಗೆ ನೀವೇ ದಾಸರಾದೀರಿ. ಆದಕಾರಣ ಶೌರ್ಯದಿಂದ ಯುದ್ಧಮಾಡಬೇಕು” ಎಂದು ಹೇಳಿಕೊಂಡು 10ಫಿಲಿಷ್ಟಿಯರು ಯುದ್ಧಮಾಡಲು ಇಸ್ರಾಯೇಲರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾ ಸಂಹಾರವಾಯಿತು; ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು. 11#4:11 ಕೀರ್ತ 78:60-61.ದೇವರ ಮಂಜೂಷವು ಶತ್ರುವಶವಾಯಿತು; ಏಲಿಯ ಮಕ್ಕಳಾದ ಹೊಫ್ನಿಯೂ ಮತ್ತು ಫೀನೆಹಾಸನೂ ಹತರಾದರು.
ಏಲಿಯ ಮರಣ
12ಅದೇ ದಿನ ಒಬ್ಬ ಬೆನ್ಯಾಮೀನನು ರಣರಂಗದಿಂದ ತಪ್ಪಿಸಿಕೊಂಡು #4:12 ಯೆಹೋ. 7:6.ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು ಶೀಲೋವಿಗೆ ಬಂದು 13ನಡೆದದ್ದನ್ನು ತಿಳಿಸಲಾಗಿ ಜನರೆಲ್ಲಾ ಗೋಳಾಡತೊಡಗಿದರು. ದೇವರ ಮಂಜೂಷವೇನಾಯಿತೋ ಎಂಬ ಚಿಂತೆಯಿಂದ ಮಂದಿರದ್ವಾರದ ಬಳಿಯಲ್ಲಿ ಆಸೀನನಾಗಿ ದಾರಿಯನ್ನು ನೋಡುತ್ತಿದ್ದ ಏಲಿಯು ಆ ದುಃಖದ ಧ್ವನಿಯನ್ನು ಕೇಳಿ 14ಈ ಗದ್ದಲವೇನೆಂದು ವಿಚಾರಿಸಲು ಒಡನೆ ಆ ಮನುಷ್ಯನು ಏಲಿಯ ಬಳಿಗೆ ಬಂದು ನಡೆದದ್ದೆಲ್ಲವನ್ನೂ ತಿಳಿಸಿದನು. ಏಲಿಯು ತೊಂಭತ್ತೆಂಟು ವರ್ಷದವನು; 15ಕಣ್ಣುಗಳು ಇಂಗಿಹೋಗಿ ಕುರುಡನಾಗಿದ್ದನು. 16ಆ ಮನುಷ್ಯನು ಏಲಿಗೆ, “ನಾನು ರಣರಂಗದಲ್ಲಿದ್ದವನು; ಈ ಹೊತ್ತೇ ಅಲ್ಲಿಂದ ಓಡಿಬಂದೆನು” ಅನ್ನಲು ಏಲಿಯು ಅವನನ್ನು, “ನನ್ನ ಮಗನೇ, ವರ್ತಮಾನವೇನು?” ಎಂದು ಕೇಳಿದನು. 17ಅವನು ಏಲಿಗೆ, “ಇಸ್ರಾಯೇಲರು ಫಿಲಿಷ್ಟಿಯರಿಗೆ ಬೆನ್ನುತೋರಿಸಿದರು; ಮಹಾಸಂಹಾರವಾಯಿತು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸರು ಸತ್ತರು; ದೇವರ ಮಂಜೂಷವು ಶತ್ರುವಶವಾಯಿತು” ಎಂದು ತಿಳಿಸಿದನು. 18ಮುದುಕನೂ, ಸ್ಥೂಲಕಾಯನೂ ಆದ ಏಲಿಯು ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದೊಡನೆಯೇ ಪೀಠದಿಂದ ಹಿಂದಕ್ಕೆ ಬಾಗಿಲಿನ ಕಡೆಗೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಅವನು ಇಸ್ರಾಯೇಲರನ್ನು ನಲ್ವತು ವರ್ಷ ಪಾಲಿಸಿದ್ದನು.
19ಅವನ ಸೊಸೆಯಾದ ಫೀನೆಹಾಸನ ಹೆಂಡತಿ ದಿನತುಂಬಿದ ಗರ್ಭಿಣಿಯಾಗಿದ್ದಳು. ಅವಳು ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ, ತನ್ನ ಮಾವನೂ, ತನ್ನ ಗಂಡನೂ ಹತರಾದದ್ದನ್ನೂ ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು. 20ಆಕೆಯು ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಸ್ತ್ರೀಯರು, “ಭಯಪಡಬೇಡ, ಮಗನನ್ನು ಹಡೆದಿರುವೆ” ಎಂದು ಹೇಳಿದರು. ಆಕೆಯು ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ, ಪ್ರತ್ಯುತ್ತರಕೊಡಲಿಲ್ಲ. 21ದೇವರ ಮಂಜೂಷವು ಶತ್ರುವಶವಾದ್ದರಿಂದಲೂ, ಮಾವನೂ, ಗಂಡನೂ ಮೃತರಾದ್ದರಿಂದಲೂ, “ಮಹಿಮೆಯು ಇಸ್ರಾಯೇಲರನ್ನು ಬಿಟ್ಟು ಹೋಯಿತೆಂದು ಹೇಳಿ ಆ ಕೂಸಿಗೆ #4:21 ಅಂದರೆ ಮಹಿಮೆಯು ಬಿಟ್ಟುಹೋಯಿತು.ಈಕಾಬೋದ್” ಎಂದು ಹೆಸರಿಟ್ಟಳು. 22“ದೇವರ ಮಂಜೂಷವು ಶತ್ರುವಶವಾದ್ದರಿಂದಲೇ ಇಸ್ರಾಯೇಲರ ಮಹಿಮೆಯು ಹೊರಟುಹೋಯಿತೆಂದು” ಹೇಳಿದಳು.

Currently Selected:

1 ಸಮು 4: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy