YouVersion Logo
Search Icon

1 ಸಮು 19

19
ಸೌಲನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ್ದು
1ಸೌಲನು ದಾವೀದನನ್ನು ಕೊಲ್ಲಬೇಕೆಂದು ತನ್ನ ಮಗನಾದ ಯೋನಾತಾನನಿಗೂ, ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. 2ಆದ್ದರಿಂದ ಅವನು ದಾವೀದನಿಗೆ, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾನೆ. ನೀನು ಜಾಗರೂಕತೆಯಿಂದಿರು. ನಾಳೆ ಬೆಳಿಗ್ಗೆ ಒಂದು ಗುಪ್ತವಾದ ಸ್ಥಳದಲ್ಲಿ ಅಡಗಿಕೊಂಡಿರು. 3ನೀನು ಅಡಗಿಕೊಂಡಿರುವ ಹೊಲಕ್ಕೆ ನಾನು ಬಂದು, ನನ್ನ ತಂದೆಯ ಬಳಿಯಲ್ಲಿ ನಿಂತು, ನಿನ್ನ ವಿಷಯವನ್ನು ಮಾತನಾಡಿ, ಅವನಿಂದ ತಿಳಿದು ಬರುವ ವಿಚಾರವನ್ನು ನಿನಗೆ ತಿಳಿಸುವೆನು” ಎಂದು ಹೇಳಿದನು. 4ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿ, “ಒಡೆಯನು ತನ್ನ ಸೇವಕನಾದ ದಾವೀದನಿಗೆ ಅನ್ಯಾಯ ಮಾಡದಿರಲಿ. ಅವನು ನಿನಗೆ ದ್ರೋಹ ಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ. 5#19:5 ನ್ಯಾಯ 12:3.ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಫಿಲಿಷ್ಟಿಯನನ್ನು ಕೊಂದನು. ಯೆಹೋವನು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿ ಸಂತೋಷಪಟ್ಟಿಯಲ್ಲಾ. ದಾವೀದನನ್ನು ನಿಷ್ಕರುಣೆಯಾಗಿ ಕೊಂದು, #19:5 ಮತ್ತಾ 27:4.ನಿರಪರಾಧಿಯ ರಕ್ತವನ್ನು ಸುರಿಸಿ, ಅಪರಾಧಕ್ಕೆ ನೀನೇಕೆ ಗುರಿಯಾಗುತ್ತೀ?” ಅಂದನು. 6ಸೌಲನು ಯೋನಾತಾನನ ಮಾತುಗಳನ್ನು ಲಾಲಿಸಿ, “#19:6 ರೂತ. 3:13.ಯೆಹೋವನಾಣೆ, ಅವನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣಮಾಡಿದನು. 7ಆಗ ಯೋನಾತಾನನು ದಾವೀದನನ್ನು ಕರೆದು, ಅವನಿಗೆ ಈ ಮಾತುಗಳನ್ನು ತಿಳಿಸಿ, ಸೌಲನ ಬಳಿಗೆ ಕರೆದುಕೊಂಡು ಬಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲಿ ಇರುವವನಾದನು. 8ಫಿಲಿಷ್ಟಿಯರು ತಿರುಗಿ ಯುದ್ಧಕ್ಕೆ ಬಂದಾಗ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಸಂಪೂರ್ಣವಾಗಿ ಸೋಲಿಸಿ, ಓಡಿಸಿಬಿಟ್ಟನು.
9ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದಾಗ ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂದಿತು. 10ಅವನು ಒಡನೆ ಕಿನ್ನರಿಯನ್ನು ನುಡಿಸುತ್ತಿದ್ದ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಪಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ, ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು. 11ಸೌಲನು ಕೂಡಲೇ ದೂತರನ್ನು ಕರಿಸಿ #19:11 ಕೀರ್ತ 59.ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ, “ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ” ಎಂದು ಹೇಳಿ 12#19:12 ಅ.ಕೃ. 9:25.ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಲು ಅವನು ಓಡಿಹೋಗಿ ತಪ್ಪಿಸಿಕೊಂಡನು. 13ಅನಂತರ ಆಕೆಯು ಮನೆಯಲ್ಲಿದ್ದ #19:13 ಆದಿ 31:19.ಒಂದು ವಿಗ್ರಹವನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ತಲೆದಿಂಬಿನ ಜಾಗದಲ್ಲಿ ಹಾಕಿ ಕಂಬಳಿಯನ್ನು ಹೊದಿಸಿದಳು. 14ಸೌಲನ ದೂತರು ದಾವೀದನನ್ನು ಹಿಡಿಯುವುದಕ್ಕೆ ಬಂದಾಗ ಅವಳು ಅವನಿಗೆ ಸ್ವಸ್ಥವಿಲ್ಲವೆಂದು ಹೇಳಿಕಳುಹಿಸಿದಳು. 15ಸೌಲನು ತಿರುಗಿ ತನ್ನ ಆಳುಗಳನ್ನು, “ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಕೊಂದುಹಾಕುತ್ತೇನೆ” ಎಂದು ಆಜ್ಞಾಪಿಸಿದನು. 16ಅವರು ಹೋಗಿ ನೋಡಲು ಹಾಸಿಗೆಯ ಮೇಲಿರುವುದು ಮೇಕೆಕೂದಲಿನಿಂದ ಹೆಣೆದ ಜಾಲರಿಯ ಒಂದು ವಿಗ್ರಹ ಎಂದು ತಿಳಿದುಬಂತು. 17ಆಗ ಸೌಲನು ಮೀಕಲಳಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲಾ” ಎನ್ನಲು ಆಕೆಯು ಅವನಿಗೆ, “ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ ಎಂದು ಅವನು ನನಗೆ ಹೇಳಿದನು” ಅಂದಳು.
ದಾವೀದನು ಸಮುವೇಲನ ಬಳಿಗೆ ಬಂದದ್ದು
18ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದೆಲ್ಲವನ್ನು ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ನಯೋತ್ ಎಂಬ ಸ್ಥಳದಲ್ಲಿ ವಾಸವಾಗಿದ್ದರು. 19ದಾವೀದನು ರಾಮದ ನಯೋತಿನಲ್ಲಿರುವುದು ಸೌಲನಿಗೆ ಗೊತ್ತಾಗಲು, 20ಅವನು ದಾವೀದನನ್ನು ಹಿಡಿದು ತರುವುದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿ ಸಮೂಹವು ಪ್ರವಾದಿಸುತ್ತಿರುವುದನ್ನೂ, ಸಮುವೇಲನು ಅವರ ನಾಯಕನಾಗಿ ನಿಂತಿರುವುದನ್ನು ಕಂಡಾಗ, ದೇವರ ಆತ್ಮವು ಅವರ ಮೇಲೆಯೂ ಬಂದಿತು. #19:20 ಅರಣ್ಯ 11:25; ಯೋವೆ. 2:28.ಅವರೂ ಪ್ರವಾದಿಸಿದರು. 21ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು. ಇವರೂ ಪ್ರವಾದಿಸಿದರು. ಅವನು ಮೂರನೆಯ ಸಾರಿ ಇನ್ನೂ ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಅವರೂ ಪ್ರವಾದಿಸಿದರು. 22ಆಗ ಸೌಲನು ತಾನೇ ರಾಮಕ್ಕೆ ಹೋಗಬೇಕೆಂದು ಹೊರಟು, ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, “ಸಮುವೇಲ ದಾವೀದರು ಎಲ್ಲಿರುತ್ತಾರೆ?” ಎಂದು ವಿಚಾರಿಸಿದನು. ಆಗ ಜನರು, “ರಾಮದ ನಯೋತಿನಲ್ಲಿ ಇರುತ್ತಾರೆ” ಎಂದು ಉತ್ತರಕೊಟ್ಟರು. 23ಅವನು ಅಲ್ಲಿಂದ ರಾಮದ ನಯೋತಿಗೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವ ತನಕ ಪ್ರವಾದಿಸುತ್ತಾ ಹೋದನು. 24ಅಲ್ಲಿಗೆ ಸೇರಿದ ಮೇಲೆ ಅವನು #19:24 ಯೆಶಾ 20:2.ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪ್ರವಾದಿಸುತ್ತಾ, ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಇದರಿಂದ “ಸೌಲನೂ ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ” ಎಂಬ ಮಾತು ಪ್ರಚಲಿತವಾಯಿತು.

Currently Selected:

1 ಸಮು 19: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy