YouVersion Logo
Search Icon

1 ಸಮು 18

18
ದಾವೀದ ಯೋನಾತಾನರ ಗೆಳೆತನ
1ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ #18:1 ಆದಿ 44:30.ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. #18:1 ಧರ್ಮೋ 13:6.ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು. 2ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು. 3ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು. 4ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು. 5ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು.
ಸೌಲನು ದಾವೀದನನ್ನು ದ್ವೇಷಿಸಿದ್ದು
6ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ #18:6 ವಿಮೋ 15:20,21.ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು. 7ಅವರು ಹಾಡುತ್ತಾ, ಕೊಂಡಾಡುತ್ತಾ,
“ಸೌಲನು ಸಾವಿರ ಶತ್ರುಗಳನ್ನು ಕೊಂದನು.
ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು.
8ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು 9ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು. 10ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು. 11ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು. 12ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು, 13ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು. 14ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು. 15ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು. 16ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು.
ದಾವೀದನು ಸೌಲನ ಅಳಿಯನಾದದ್ದು
17ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು. 18ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು. 19ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು.
20ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು. 21ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು. 22ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು. 23ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “#18:23 ಅರಣ್ಯ 16:9.ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು. 24ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು. 25ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು. 26ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ, 27ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ #18:27 2 ಸಮು 3:14.ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು. 28#18:28 ಅಥವಾ ಇಸ್ರಾಯೇಲ ಜನರೆಲ್ಲರು ಅವನನ್ನು ಪ್ರೀತಿಸುವವರಾದರು.ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು, 29ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು. 30#18:30 2 ಸಮು 11:1.ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.

Currently Selected:

1 ಸಮು 18: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy