ಫಿಲಿಪ್ಪಿಯರಿಗೆ 3
3
ಯೇಸುವಿನಲ್ಲಿ ಸತ್ಸಂಬಂಧ
1ಕೊನೆಯದಾಗಿ ಸಹೋದರರೇ, ಪ್ರಭುವಿನಲ್ಲಿ ಆನಂದಿಸಿರಿ. ನಾನು ನಿಮಗೆ ಮೊದಲೇ ತಿಳಿಸಿದಂತೆ ಇದನ್ನು ಮತ್ತೆ ಮತ್ತೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ; ಇದು ನಿಮ್ಮ ಹಿತಕ್ಕಾಗಿಯೇ. 2ನಿಮಗೆ ಸುನ್ನತಿಯಾಗಬೇಕೆಂದು ಬೋಧಿಸುವವರ ವಿಷಯದಲ್ಲಿ ಜಾಗರೂಕರಾಗಿರಿ. ಅವರು ದುಷ್ಕರ್ಮಿಗಳು, ಶ್ವಾನಗಳಿಗೆ ಸಮಾನರು. 3ನಿಜವಾದ ಸುನ್ನತಿ ಪಡೆದವರು ನಾವು, ಏಕೆಂದರೆ, ನಾವು ಪವಿತ್ರಾತ್ಮ ಅವರ ಪ್ರೇರಣೆಯಿಂದ ದೇವರನ್ನು ಆರಾಧಿಸುತ್ತೇವೆ. ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹರ್ಷಿಸುತ್ತೇವೆ. ಬಾಹ್ಯಾಚರಣೆಗಳಲ್ಲೇ ನಂಬಿಕೆಯಿಡದೆ ಬಾಳುತ್ತೇವೆ. 4ಇಂಥ ಬಾಹ್ಯಾಚರಣೆಯಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ. 5ಹುಟ್ಟಿದ ಎಂಟನೆಯ ದಿನ ನನಗೆ ಸುನ್ನತಿಯಾಯಿತು; ಹುಟ್ಟಿನಿಂದ ನಾನು ಇಸ್ರಯೇಲನು, ಬೆನ್ಯಮೀನ ಕುಲದವನು; ಅಪ್ಪಟ ಹಿಬ್ರಿಯನು, 6ಧರ್ಮಶಾಸ್ತ್ರದ ದೃಷ್ಟಿಯಲ್ಲಿ ನಿಷ್ಠಾವಂತ ಫರಿಸಾಯನು; ಮತಾಶಕ್ತಿಯ ಹಿತದೃಷ್ಟಿಯಿಂದ ಧರ್ಮಸಭೆಯ ಹಿಂಸಕನು; ಧರ್ಮಶಾಸ್ತ್ರ ವಿಧಿನಿಯಮಗಳ ಪಾಲನೆಯಲ್ಲಿ ನಿಂದಾರಹಿತನು. 7ಇವನ್ನೆಲ್ಲಾ ಲಾಭವೆಂದು ಪರಿಗಣಿಸಿದ್ದ ನಾನು ಈಗ ಕ್ರಿಸ್ತಯೇಸುವಿನ ಸಲುವಾಗಿ ನಷ್ಟವೆಂದೇ ಎಣಿಸುತ್ತೇನೆ. 8ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನೂ ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. 9ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ, ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ. 10ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ಥಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ. 11ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ-ನಿರೀಕ್ಷೆ.
ಯೇಸುವಿನ ಸಾನ್ನಿಧ್ಯಕ್ಕೆ
12ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. 13ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ ಕಣ್ಣಿಟ್ಟು ನಾನು ಓಡುತ್ತಿದ್ದೇನೆ. 14ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆ ನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ. 15ನಮ್ಮಲ್ಲಿ ಪರಿಣತರಾದವರು ಈ ವಿಷಯದಲ್ಲಿ ಇದೇ ಮನೋಭಾವನೆಯಿಂದ ಇರಬೇಕು. ಯಾವುದಾದರೂ ಒಂದು ವಿಷಯದಲ್ಲಿ ನೀವು ಭಿನ್ನಾಭಿಪ್ರಾಯ ಉಳ್ಳವರಾಗಿದ್ದರೆ ದೇವರು ನಿಜಾಂಶವನ್ನು ಸ್ಪಷ್ಟೀಕರಿಸುವರು. 16ಅಂತೂ, ಇದುವರೆಗೆ ನಾವು ಎಷ್ಟೇ ಮುಂದುವರೆದಿದ್ದರೂ ಅದೇ ಮಾರ್ಗದಲ್ಲಿ ಸಾಗೋಣ.
17ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. 18ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. 19ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. 20ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. 21ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು.
Currently Selected:
ಫಿಲಿಪ್ಪಿಯರಿಗೆ 3: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.