YouVersion Logo
Search Icon

ಫಿಲಿಪ್ಪಿಯರಿಗೆ 1

1
ಪೀಠಿಕೆ
1ಕ್ರಿಸ್ತಯೇಸುವಿನಲ್ಲಿ ಜೀವಿಸುವ ಫಿಲಿಪ್ಪಿಯ ದೇವಜನರಿಗೆ, ಧರ್ಮಾಧಿಕಾರಿಗಳಿಗೆ ಹಾಗೂ ಧರ್ಮಸೇವಕರಿಗೆ - ಕ್ರಿಸ್ತಯೇಸುವಿನ ದಾಸರಾದ ಪೌಲ ಮತ್ತು ತಿಮೊಥೇಯರು ಜೊತೆಗೂಡಿ ಬರೆಯುವ ಪತ್ರ.
2ನಮ್ಮೆಲ್ಲರ ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಆಶೀರ್ವಾದವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ!
ಫಿಲಿಪ್ಪಿಯರಿಗಾಗಿ ಪ್ರಾರ್ಥನೆ
3ನಿಮ್ಮನ್ನು ಜ್ಞಾಪಿಸಿಕೊಳ್ಳುವಾಗಲೆಲ್ಲ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 4ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. 5ಏಕೆಂದರೆ, ನಾನು ನಿಮ್ಮನ್ನು ಸಂಧಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. 6ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. 7ನೀವು ನನಗೆ ಆತ್ಮೀಯರು. ಆದಕಾರಣ, ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಸೆರೆಯಲ್ಲಿರುವಾಗಲೂ ಶುಭಸಂದೇಶಕ್ಕಾಗಿ ಹೋರಾಡಿ ಆದನ್ನು ಸ್ಥಿರಗೊಳಿಸುವಾಗಲೂ ದೇವರ ಅನುಗ್ರಹದಲ್ಲಿ ನೀವು ನನ್ನೊಂದಿಗೆ ಸಹಭಾಗಿಗಳಾಗಿದ್ದಿರಿ. 8ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ. 9ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಿಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. 10ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭು ಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. 11ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡುವಿರಿ.
ಯೇಸುವೇ ನನ್ನ ಜೀವಾಳ
12ಸಹೋದರರೇ, ನನಗೆ ಬಂದೊದಗಿರುವುದೆಲ್ಲವೂ ಶುಭಸಂದೇಶದ ಬೆಳವಣಿಗೆಗೆ ಹಿತಕರವಾಗಿ ಪರಿಣಮಿಸಿದೆ. ಇದು ನಿಮಗೆ ತಿಳಿದಿರಬೇಕೆಂಬುದೇ ನನ್ನ ಆಶಯ. 13ಯೇಸುಕ್ರಿಸ್ತರ ಸಲುವಾಗಿಯೇ ನಾನು ಸೆರೆಯಲ್ಲಿರುವುದೆಂದು ಇಲ್ಲಿಯ ಅರಮನೆಯ ಕಾವಲಾಳುಗಳಿಗೂ ಇತರರೆಲ್ಲರಿಗೂ ಚೆನ್ನಾಗಿ ತಿಳಿದಿದೆ.
14ನನ್ನ ಬಂಧನದಿಂದಾಗಿ ನಮ್ಮ ಸಹೋದರರಲ್ಲಿ ಅನೇಕರು ದೇವರಲ್ಲಿ ಭರವಸೆಯಿಟ್ಟಿರುವರು. ಅಳುಕಿಲ್ಲದೆ, ಅಂಜಿಕೆಯಿಲ್ಲದೆ ದಿಟ್ಟತನದಿಂದ ಶುಭಸಂದೇಶವನ್ನು ಅವರು ಸಾರುತ್ತಿರುವರು. 15ಕೆಲವರೇನೋ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಕ್ರಿಸ್ತಯೇಸುವನ್ನು ಸಾರುತ್ತಿರುವುದು ನಿಜ; ಆದರೆ ಮಿಕ್ಕವರು ಸದುದ್ದೇಶದಿಂದ ಸಾರುತ್ತಿದ್ದಾರೆ; 16ಒಲವಿನ ಒತ್ತಾಯದಿಂದ ಸಾರುತ್ತಿದ್ದಾರೆ; ಶುಭಸಂದೇಶದ ಸತ್ಯವನ್ನು ಸಮರ್ಥಿಸುವುದಕ್ಕಾಗಿ ನಾನು ಬಂಧಿತನೆಂದು ಇವರು ಬಲ್ಲರು. 17ಆ ಕೆಲವರಾದರೋ ಸ್ವಾರ್ಥಸಾಧನೆಗಾಗಿಯೇ ಹೊರತು ಪ್ರಾಮಾಣಿಕರಾಗಿ ಕ್ರಿಸ್ತಯೇಸುವನ್ನು ಸಾರುತ್ತಿಲ್ಲ. ಸೆರೆಯಲ್ಲಿರುವ ನನ್ನನ್ನು ಇನ್ನೂ ಹೆಚ್ಚಿನ ಕಷ್ಟಕ್ಕೆ ಗುರಿಮಾಡಬೇಕೆಂಬುದೇ ಅವರ ಉದ್ದೇಶ.
18ಅವರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. 19ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ. 20ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ. 21ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ. 22ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು. 23ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು. 24ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ. 25ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ. 26ನಿಮ್ಮಲ್ಲಿಗೆ ನಾನು ಮರಳಿಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು. 27ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.
28ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲೂ ಅಂಜದೆ, ಅಳುಕದೆ ಧೈರ್ಯದಿಂದಿರಿ. ಇದೇ ಅವರಿಗೆ ಅವರ ವಿನಾಶದ ಸ್ಪಷ್ಟ ಮುನ್ಸೂಚನೆ! ನಿಮಗೆ ದೇವರಿಂದ ಬರುವ ಸಂರಕ್ಷಣೆಯ ಮುನ್ಸೂಚನೆ. 29ಕ್ರಿಸ್ತಯೇಸುವನ್ನು ನೀವು ವಿಶ್ವಾಸಿಸುವುದು ಮಾತ್ರವಲ್ಲ, ಅವರಿಗೋಸ್ಕರ ಸಂಕಷ್ಟಗಳನ್ನು ಅನುಭವಿಸುವ ಸೌಭಾಗ್ಯವೂ ನಿಮ್ಮದಾಗಿದೆ. 30ನಿಮ್ಮ ಹೋರಾಟವೂ ನಮ್ಮ ಹೋರಾಟವೂ ಒಂದೇ ಆಗಿದೆ. ನಾನು ಕ್ರಿಸ್ತಯೇಸುವಿಗಾಗಿ ಪಟ್ಟ ಕಷ್ಟವನ್ನು ನೀವು ಕಂಡಿದ್ದೀರಿ. ಈಗಲೂ ಅನುಭವಿಸುತ್ತಿದ್ದೇನೆಂದು ಅರಿತಿದ್ದೀರಿ.

Highlight

Share

Copy

None

Want to have your highlights saved across all your devices? Sign up or sign in