YouVersion Logo
Search Icon

ನೆಹೆಮೀಯ 2

2
ಜೆರುಸಲೇಮಿಗೆ ಹೋಗಲು ನೆಹೆಮೀಯನಿಗೆ ಅನುಮತಿ
1ನಾನು ರಾಜನ ಪಾನಸೇವಕನಾಗಿದ್ದೆ. ಅರ್ತಷಸ್ತರಾಜನ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ, ರಾಜನು ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ, ದ್ರಾಕ್ಷಾರಸವನ್ನು ತಂದುಕೊಟ್ಟೆ. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ. 2ರಾಜ ನನಗೆ, “ನೀನು ಕಳೆಗುಂದಿದವನಾಗಿರುವೆ, ಏಕೆ? ನಿನ್ನ ದೇಹಾರೋಗ್ಯ ಚೆನ್ನಾಗಿದೆಯಲ್ಲವೆ? ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣ ಇರಲಾರದು,” ಎಂದು ಹೇಳಿದ. ನನಗೆ ಮಹಾಭೀತಿಯುಂಟಾಯಿತು. 3ನಾನು ರಾಜನಿಗೆ, “ರಾಜಾಧಿರಾಜರು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಹೀಗಿರುವಲ್ಲಿ, ನನ್ನ ಮುಖ ಕಳೆಗುಂದದೆ ಇರಲು ಸಾಧ್ಯವೆ?,” ಎಂದು ಹೇಳಿದೆ.
4ಆಗ ರಾಜ, “ನಿನ್ನ ಆಶೆಯೇನು?,” ಎಂದು ಕೇಳಿದನು. ನಾನು ಪರಲೋಕ ದೇವರನ್ನು ಪ್ರಾರ್ಥಿಸಿ, ಅವನಿಗೆ, “ರಾಜರ ಚಿತ್ತವಿರುವುದಾದರೆ, 5ಮತ್ತು ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ, ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ಮರಳಿ ಕಟ್ಟುವುದಕ್ಕೆ ಜುದೇಯ ನಾಡಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು,” ಎಂದು ಹೇಳಿದೆ. 6ರಾಜರ ಹತ್ತಿರದಲ್ಲೇ ಕುಳಿತುಕೊಂಡಿದ್ದಳು ರಾಣಿ. ರಾಜ, “ಪ್ರಯಾಣಕ್ಕೆ ನಿನಗೆ ಎಷ್ಟುಕಾಲಬೇಕು? ಯಾವಾಗ ಹಿಂದಿರುಗುವೆ,” ಎಂದು ವಿಚಾರಿಸಿದ. ನಾನು ಕಾಲವನ್ನು ಸೂಚಿಸಿದೆ. ಅವನು ಒಪ್ಪಿಕೊಂಡು ಹೋಗಿಬರಲು ಅಪ್ಪಣೆಕೊಟ್ಟ.
7ತರುವಾಯ ನಾನು ರಾಜನಿಗೆ, “ನದಿ ಆಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳಲ್ಲಿ ಹಾದು ಜುದೇಯ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡಬೇಕಾಗುತ್ತದೆ. 8ರಾಜ ವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳನ್ನೂ ಪಟ್ಟಣದ ಪೌಳಿಗೋಡೆಯನ್ನೂ ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡಬೇಕಾಗುತ್ತದೆ; ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು,” ಎಂದು ಬಿನ್ನವಿಸಿದೆ. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ ರಾಜನು ಅವುಗಳನ್ನು ನನಗೆ ಕೊಟ್ಟನು. 9ಅದೂ ಅಲ್ಲದೆ ನನ್ನನ್ನು ಸಾಗಕಳುಹಿಸುವುದಕ್ಕೆ ಸೇನಾಧಿಪತಿಗಳನ್ನೂ ರಾಹುತರನ್ನೂ ಕಳುಹಿಸಿದನು.
ಜೆರುಸಲೇಮಿನ ಗೋಡೆ ಕಟ್ಟುವ ನಿರ್ಧಾರ
ಹೀಗೆ ನಾನು ನದಿಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ರಾಜನ ಪತ್ರಗಳನ್ನು ಅವರಿಗೆ ತೋರಿಸಿದೆ. 10ಇಸ್ರಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್ ದೇಶದವನಾದ ತೊಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬ ಹೊಟ್ಟೆಕಿಚ್ಚುಪಟ್ಟರು.
11ಅನಂತರ ಜೆರುಸಲೇಮಿಗೆ ಬಂದೆ. ಅಲ್ಲಿ ಮೂರು ದಿನಗಳಿದ್ದೆ. 12ಆಮೇಲೆ ಜೆರುಸಲೇಮಿಗಾಗಿ ಮಾಡತಕ್ಕ ಕಾರ್ಯದ ಬಗ್ಗೆ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾರೆಂದು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆ. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ. 13ನಾನು ರಾತ್ರಿ ವೇಳೆಯಲ್ಲಿ ಕಣಿವೆಯ ಬಾಗಿಲಿನಿಂದ ಹೊರಟು, ಹಾಳುಬಿದ್ದ ಜೆರುಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲಾಗಿದ್ದ ಅದರ ಬಾಗಿಲುಗಳನ್ನೂ ನೋಡುತ್ತಾ ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆ. 14ಅಲ್ಲಿಂದ ಬುಗ್ಗೆಬಾಗಿಲನ್ನು ಹಾದು ಅರಸನ ಕೊಳಕ್ಕೆ ಹೋದೆ. 15ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿಲ್ಲದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆ. ಆಮೇಲೆ ಪುನಃ ಕಣಿವೆಯ ಬಾಗಿಲಿನಿಂದ ಮನೆಗೆ ಬಂದೆ.
16ನಾನು ಆವರೆಗೆ ಯೆಹೂದ್ಯರಿಗೂ ಯಾಜಕರಿಗೂ ಶ್ರೀಮಂತರಿಗೂ ಅಧಿಕಾರಿಗಳಿಗೂ ಹಾಗು ಕೆಲಸ ನಡೆಸತಕ್ಕ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ, ನಾನು ಎಲ್ಲಿ ಹೋಗಿದ್ದೆ, ಏನು ಮಾಡಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿರಲಿಲ್ಲ. 17ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣಮುಂದಿರುತ್ತದಲ್ಲವೇ? ಜೆರುಸಲೇಮ್ ಪಟ್ಟಣ ಹಾಳುಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಜೆರುಸಲೇಮಿನ ಗೋಡೆಯನ್ನು ಕಟ್ಟೋಣ, ಹೀಗೆ ಮಾಡಿದರೆ ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ. 18ಇದಲ್ಲದೆ, ನನ್ನ ದೇವರ ಕೃಪಾಹಸ್ತ ನನ್ನನ್ನು ಹೇಗೆ ನಡೆಸಿತೆಂಬುದನ್ನೂ ರಾಜನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆ. ಆಗ ಅವರು, “ಬನ್ನಿ, ಕಟ್ಟೋಣ” ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.
19ಹೋರೋನಿನವನಾದ ಸನ್ಬಲ್ಲಟನೂ ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಯೂ ಅರೇಬಿಯನಾದ ಗೆಷೆಮನೂ ಈ ಸಮಾಚಾರವನ್ನೂ ಕೇಳಿದಾಗ ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿದರು. “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರೋಧವಾಗಿ ದಂಗೆ ಏಳಬೇಕೆಂದಿದ್ದೀರೋ?” ಎಂದು ಕೇಳಿದರು. 20ನಾನು ಅವರಿಗೆ, “ಪರಲೋಕದೇವರು ನಮಗೆ ಸಫಲತೆಯನ್ನು ಅನುಗ್ರಹಿಸುವರು. ಆದುದರಿಂದ ಅವರ ದಾಸರಾದ ನಾವು ಕೋಟೆಯ ಗೋಡೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಜೆರುಸಲೇಮಿನಲ್ಲಿ ಪಾಲಾಗಲಿ, ಹಕ್ಕಾಗಲಿ, ಸ್ಮಾರಕವಾಗಲಿ ಇರುವುದಿಲ್ಲ,” ಎಂದು ಉತ್ತರಕೊಟ್ಟೆ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy