YouVersion Logo
Search Icon

ನಹೂಮ 2

2
ನಿನೆವೆಯ ಪತನ
1ನಿನೆವೆಯೇ,
ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು!
ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು;
ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು.
2(ಸರ್ವೇಶ್ವರ, ಕೊಳ್ಳೆಗಾರರು ಸುಲಿಗೆಮಾಡಿದ್ದನ್ನೂ ಮುರಿದುಹಾಕಿದ ದ್ರಾಕ್ಷಿಯ ತೋಟಗಳನ್ನೂ ಸರಿಪಡಿಸಲಿದ್ದಾರೆ. ಯಕೋಬಿನ ಮಹತ್ವವನ್ನು ಹಾಗೂ ಇಸ್ರಯೇಲಿನ ಮಹಿಮೆಯನ್ನು ಈಗ ಮತ್ತೆ ಸ್ಥಾಪಿಸಲಿದ್ದಾರೆ).
3ಶತ್ರುವಿನ ಶೂರರ ಗುರಾಣಿ ರಕ್ತಗೆಂಪು,
ಪರಾಕ್ರಮಿಗಳ ಉಡುಪು ಕಡುಗೆಂಪು.
ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು.
ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು.
4ಹಾದಿಬೀದಿಗಳಲಿ ಓಡಾಡುತ್ತಿವೆ ರಥಗಳು ರಭಸದಿಂದ
ನಗರ ಚೌಕಗಳಲ್ಲಿ ಅವು ಅಡ್ಡಾಡುತ್ತವೆ ವೇಗದಿಂದ
ಅವು ಬೆಳಗುತ್ತಿವೆ ಪಂಜುಗಳಂತೆ, ಹೊಳೆಯುತ್ತಿವೆ ಮಿಂಚಿನಂತೆ.
5ಹಾಜರಾಗಲು ಕರೆಬಂದಿದೆ ಅರಸನಿಂದ ಸೇನಾಪತಿಗಳಿಗೆ;
ಎದ್ದುಬಿದ್ದು ಓಡಾಡುತ್ತಿರೆ ಅವರು ಪೌಳಿಗೋಡೆ ಕಡೆಗೆ
ಅಡ್ಡ ಗುರಾಣಿಗಳನ್ನೊಡ್ಡುತ್ತಿರೆ ಟಗರು ದಿಮ್ಮಿಗಳಿಗೆ.
6ತೆರೆಯಲಾಗಿವೆ ನದಿಯ ದ್ವಾರಗಳು
ಕುಸಿದುಬಿದ್ದಿವೆ ಅರಮನೆಯ ಗೋಡೆಗಳು.
7ಸೆರೆಹಿಡಿದಿರುವರು ರಾಣಿಯನು; ತಂದಿಹರು ಆಕೆಯನು ಬೈಲಿಗೆ.
ದಾಸಿಯರು ಬಡಿದುಕೊಳ್ಳುತಿಹರು ಎದೆ;
ರೋದಿಸುತಿಹರು ಪಾರಿವಾಳಗಳಂತೆ.
8ನಿನೆವೆ ಕಟ್ಟೆಯೊಡೆದ ಕೆರೆಯಂತಿದೆ;
“ನಿಲ್ಲಿರಿ! ನಿಲ್ಲಿರಿ!” ಎಂಬ ಕೂಗು ಕೇಳುತ್ತಿದೆ;
ಆದರೂ ಓಡುತಿಹರು ಜನರೆಲ್ಲರು ಹಿಂದೆ ನೋಡದೆ.
9ಸೂರೆ ಮಾಡಿರಿ ಅದರ ಬೆಳ್ಳಿಯನು,
ಕೊಳ್ಳೆಹೊಡೆಯಿರಿ ಬಂಗಾರವನು.
ಮಿತಿಯಿಲ್ಲ ಅದರ ಧನಕನಕಕೆ,
ಎಲ್ಲೆಯಿಲ್ಲ ಅದರ ಅಮೂಲ್ಯ ಆಸ್ತಿಪಾಸ್ತಿಗೆ.
10ನಿನೆವೆ ಬರಿದಾಗಿದೆ; ಬಟ್ಟಬರಿದಾಗಿ ಪಾಳುಬಿದ್ದಿದೆ;
ಎದೆಕರಗಿದೆ, ಮೊಣಕಾಲುಗಳು ಅದರುತ್ತಿವೆ.
ಎಲ್ಲರ ಸೊಂಟಗಳು ಮುರಿದಂತಾಗಿವೆ, ಅವರ ಮುಖಗಳು ಬಾಡಿಹೋಗಿವೆ.
11ಮೃಗರಾಜನ ಗವಿಯೆಲ್ಲಿ? ಯುವಸಿಂಹಗಳ ಹಕ್ಕೆಯೆಲ್ಲಿ?
ಸಿಂಹ ಸಿಂಹಿಣಿಗಳು, ಅವುಗಳ ಮರಿಗಳು ಹೆದರದೆ
ತಿರುಗಾಡುತ್ತಿದ್ದ ಎಡೆಯೆಲ್ಲಿ?
12ಅಲ್ಲಿ ಸಿಂಹಬೇಟೆಯನ್ನು ಸೀಳಿಹಾಕುತ್ತಿತ್ತು ತನ್ನ ಮರಿಗಳಿಗಾಗಿ;
ಕೊರಳುಹಿಡಿದು ಪ್ರಾಣಿಗಳನ್ನು ಹೊಸಕುತ್ತಿತ್ತು ಸಿಂಹಿಣಿಗಳಿಗಾಗಿ;
ಗವಿಗಳನ್ನು ಬೇಟೆಯಿಂದ, ಹಕ್ಕೆಗಳನ್ನು ಮಾಂಸದಿಂದ ತುಂಬಿಸುತ್ತಿತ್ತು ಅವುಗಳಿಗಾಗಿ.
13ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ:
“ನಿನಗೆ ವಿರುದ್ಧವಾಗಿದ್ದೇನೆ ನಾನು; ಸುಟ್ಟು
ಭಸ್ಮಮಾಡುವೆ ನಿನ್ನ ರಥಗಳನು;
ಸಂಹರಿಸಿಬಿಡುವೆನು ನಿನ್ನ ಯುವಸಿಂಹಗಳನು;
ನಿನಗೆ ಜಗದಲ್ಲೆಲ್ಲ ಬೇಟೆ ಸಿಗದಂತೆ ಮಾಡುವೆನು;
ಯಾರೂ ಕೇಳರು ನಿನ್ನ ರಾಯಭಾರಿಗಳ ಮಾತನು.”

Currently Selected:

ನಹೂಮ 2: KANCLBSI

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy