YouVersion Logo
Search Icon

ನಹೂಮ 1

1
ನಿನೆವೆಯ ಮೇಲೆ ಪ್ರಭುವಿನ ಶಾಪ
1ನಿನೆವೆಯನ್ನು ಕುರಿತ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಪ್ರವಾದಿಗೆ ಆದ ದೈವದರ್ಶನವಿದು:
2ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು
ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು.
ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ
ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.
3ಸರ್ವೇಶ್ವರ ಶಾಂತಿಸ್ವರೂಪಿ; ಆದರೆ ಆತನ ಶಕ್ತಿ ಅಪಾರ,
ಅಪರಾಧಿಗಳನ್ನು ಆತ ಶಿಕ್ಷಿಸದೆ ಬಿಡ;
ಗಾಳಿಬಿರುಗಾಳಿಗಳ ನಡುವೆ ಆತನ ಹಾದಿ;
ಮೋಡಗಳು ಆತನ ನಡೆಯಿಂದೇಳುವ ಧೂಳಿ.
4ಆತನ ಗದರಿಕೆಯೊಂದಕೆ ಬತ್ತಿಹೋಗುತ್ತದೆ ಸಮುದ್ರ;
ನಂದಿಹೋಗುತ್ತವೆ ನದಿಸರೋವರ.
ಕಂದುತ್ತವೆ ಕಾರ್ಮೆಲ್ ಗುಡ್ಡಗಳು
ಬಾಡುತ್ತವೆ ಬಾಷಾನಿನ ಹೊಲಗಳು
ಮುದುಡುತ್ತವೆ ಲೆಬನೋನಿನ ಚಿಗುರುಗಳು.
5ಆತನೆದುರು ಅದರುತ್ತವೆ ಬೆಟ್ಟಗಳು ಕರಗುತ್ತವೆ ಗುಡ್ಡಗಳು.
ಆತನ ದರ್ಶನಕೆ ಕಂಪಿಸುತ್ತದೆ ಭೂಗೋಳವು
ತಲ್ಲಣಿಸುತ್ತದೆ ಲೋಕ ಲೋಕನಿವಾಸಿಗಳೆಲ್ಲವು.
6ಯಾರು ತಡೆದಾರು ಆತನ ಸಿಟ್ಟಿಗೆ?
ಯಾರು ನಿಂತಾರು ಆತನ ರೋಷಾಗ್ನಿಗೆ?
ಆತನ ರೌದ್ರ ಜ್ವಾಲಾಪ್ರವಾಹದಂತೆ
ಬಂಡೆಗಳು ಪುಡಿಪುಡಿ ಆತನ ಮುಂದೆ.
7ಒಳ್ಳೆಯವನು ಸರ್ವೇಶ್ವರ
ಸಂಕಟದಲಿ ಆಶ್ರಯದುರ್ಗ
ಮೊರೆಹೊಕ್ಕವರನು ಚೆನ್ನಾಗಿ ಬಲ್ಲನಾತ.
8ನಾಶಗೊಳಿಸುವನು ನಿನೆವೆಯನು ಮಹಾಜಲಪ್ರಳಯದಲ್ಲೋ ಎಂಬಂತೆ
ಹಿಂದಟ್ಟಿ ತಳ್ಳುವನು ವಿರೋಧಿಗಳನು ಗಾಢಾಂಧಕಾರಕ್ಕೋ ಎಂಬಂತೆ.
9ಸರ್ವೇಶ್ವರನ ವಿರುದ್ಧ ಮಾಡಬಲ್ಲಿರಾ ನೀವು ಕುಯುಕ್ತಿ?
ಮರಳಿ ತಲೆಯೆತ್ತದಂತೆ ನಾಶಮಾಡುವನು ನಿಮ್ಮನು ಪೂರ್ತಿಯಾಗಿ.
10ಆತನ ವೈರಿಗಳು ಹೆಣೆದುಕೊಂಡಿದ್ದರೂ ಮುಳ್ಳುಗಳಂತೆ
ಕುಡಿದು ಮತ್ತರಾಗಿ ಮುಳುಗಿದ್ದರೂ ಮದ್ಯದಲ್ಲೆ
ತುತ್ತಾಗುವರು ಬೆಂಕಿಗೆ ತೀರ ಒಣಗಿದ ಕೂಳೆಯಂತೆ.
11ನಿನೆವೆಯೇ, ಸರ್ವೇಶ್ವರಸ್ವಾಮಿಗೆ ವಿರುದ್ಧವಾಗಿ ಕುಯುಕ್ತಿಯನ್ನು ಕಲ್ಪಿಸುವವನು ನಿನ್ನಿಂದಲೆ ಹೊರಟಿದ್ದಾನೆ.
12ಆ ಸ್ವಾಮಿ ಇಂತೆನ್ನುತ್ತಾನೆ: “ನಿನ್ನ ಶತ್ರುಗಳು ಎಷ್ಟು ಬಲಾಢ್ಯರಾಗಿದ್ದರೂ ಎಷ್ಟು ಅಧಿಕ ಸಂಖ್ಯೆಯಲ್ಲಿದ್ದರೂ ಅವರು ನಾಶಕ್ಕೊಳಗಾಗುವರು; ಆ ದುರಾಲೋಚಕನು ಇಲ್ಲವಾಗುವನು. ನನ್ನ ಜನರೇ, ನಾನು ನಿಮ್ಮನ್ನು ಬಾಧಿಸಿದ್ದುಂಟು, ಆದರೆ ಇನ್ನು ಮುಂದೆ ಬಾಧಿಸುವುದಿಲ್ಲ. 13ಆ ಶತ್ರು ನಿಮ್ಮ ಮೇಲೆ ಹೇರಿದ ನೊಗವನ್ನು ಈಗ ನಿಮ್ಮಿಂದ ತೆಗೆದು ಮುರಿದುಬಿಡುವೆನು. ನಿಮ್ಮ ಸಂಕೋಲೆಗಳನ್ನು ಕಿತ್ತುಹಾಕುವೆನು.”
14ಅಸ್ಸೀರಿಯವೇ, ಸರ್ವೇಶ್ವರನಾದ ನಾನು ನಿನ್ನ ಬಗ್ಗೆ ಹೊರಡಿಸಿದ ಆಜ್ಞೆ ಏನೆಂದರೆ: ಹೆಸರೆತ್ತಲು ನಿನಗೆ ಸಂತಾನವೇ ಇಲ್ಲದಂತಾಗುವುದು. ನಿನ್ನ ದೇವರುಗಳ ಗುಡಿಗಳಲ್ಲಿರುವ ಕೆತ್ತನೆಯ ವಿಗ್ರಹವನ್ನೂ ಎರಕದ ಬೊಂಬೆಯನ್ನೂ ಒಡೆದುಹಾಕುವೆನು. ನಿನಗೆ ಸಮಾಧಿಯೊಂದನ್ನು ಸಿದ್ಧಗೊಳಿಸುವೆನು; ಏಕೆಂದರೆ ನೀನು ಕೆಡುಕ.”
15ಇಗೋ, ಶುಭಸಂದೇಶವನ್ನು ಸಾರಲು ದೂತನೊಬ್ಬನು ಪರ್ವತದಿಂದ ಇಳಿದು ಬರುತ್ತಿದ್ದಾನೆ! ಶಾಂತಿ ಸಮಾಧಾನವನ್ನು ಘೋಷಿಸಲು ತ್ವರೆಪಡುತ್ತಿದ್ದಾನೆ! ಜುದೇಯ ನಾಡೇ, ನಿನ್ನ ಹಬ್ಬಗಳನ್ನು ಆಚರಿಸು. ನಿನ್ನ ಹರಕೆಗಳನ್ನು ಸಲ್ಲಿಸು. ಆ ದುಷ್ಟ ಶತ್ರು ಇನ್ನೆಂದಿಗೂ ನಿನಗೆ ಮುತ್ತಿಗೆಹಾಕಲಾರನು. ಅವನು ಸಂಪೂರ್ಣವಾಗಿ ನಾಶವಾಗಿದ್ದಾನೆ!

Currently Selected:

ನಹೂಮ 1: KANCLBSI

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy