YouVersion Logo
Search Icon

ಲೂಕ. 1

1
ಪೀಠಿಕೆ
1ಸನ್ಮಾನ್ಯ ಥೆಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. 2ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು. 3ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. 4ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು.
ಸ್ನಾನಿಕ ಯೊವಾನ್ನನ ಜನನ
5ಜುದೇಯ ಪ್ರಾಂತ್ಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಪತ್ನಿಯ ಹೆಸರು ಎಲಿಜಬೇತ್‍. ಇವಳೂ ಆರೋನನ ಯಾಜಕವಂಶಕ್ಕೆ ಸೇರಿದವಳು. 6ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು; ಸರ್ವೇಶ್ವರನ ವಿಧಿನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು. 7ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು.
8ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು. 9ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು. ಅಂತೆಯೇ, ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ 10ಭಕ್ತಸಮೂಹವು ಹೊರಗೆನಿಂತು ಪ್ರಾರ್ಥನೆ ಮಾಡುತ್ತಿತ್ತು. 11ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು. 12ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು. 13ದೂತನು ಅವನಿಗೆ, “ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡುಮಗು ಹುಟ್ಟುವುದು. ನೀನು ಅವನಿಗೆ ‘ಯೊವಾನ್ನ’ ಎಂದು ನಾಮಕರಣ ಮಾಡಬೇಕು. 14ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹುಜನಕ್ಕೆ ಸಂತಸವನ್ನು ತರುವುದು. 15ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು. 16ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು. 17ಎಲೀಯನಂತೆ ಶಕ್ತಿಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು. ತಂದೆ-ಮಕ್ಕಳನ್ನು ಪುನಃ ಒಂದಾಗಿಸುವನು. ಸತ್ಪುರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು. ಹೀಗಾಗಿ ಪ್ರಭುವಿಗೆ ಯೋಗ್ಯಪ್ರಜೆಯನ್ನು ಸಿದ್ಧಗೊಳಿಸುವನು,” ಎಂದನು. 18ಅದಕ್ಕೆ ಜಕರೀಯನು, “ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು,” ಎಂದನು. 19ಆಗ ದೇವದೂತನು, “ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು. 20ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ,” ಎಂದನು.
21ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು. 22ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು. 23ತನ್ನ ಯಾಜಕ ಸೇವಾಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು. 24-25ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. ‘ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಳು.
ಕ್ರಿಸ್ತ ಜನನದ ಮುನ್ಸೂಚನೆ
26ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. 27ಆಕೆಗೆ ದಾವೀದರಸನ ವಂಶಜ ನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. 28ದೇವದೂತನು ಆಕೆಯ ಬಳಿಗೆ ಬಂದು, “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. 29ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. 30ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; 31ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; 32ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. 33ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು.
34ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. 35ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. 36ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. 37ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. 38ಆಗ ಮರಿಯಳು "ಇಗೋ, ನಾನು ದೇವರ ದಾಸಿ. ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
ಮರಿಯಳು - ಎಲಿಜಬೇತಳ ಭೇಟಿ
39ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. 40ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. 41ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿ ಶಿಶು ನಲಿದಾಡಿತು; ಎಲಿಜಬೇತಳೂ ಪವಿತ್ರಾತ್ಮಭರಿತಳಾಗಿ, 42ಹರ್ಷೋದ್ಗಾರದಿಂದ ಹೀಗೆಂದಳು:
“ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು;
ನಿನ್ನ ಕರುಳ ಕುಡಿಯೂ ಧನ್ಯ!
43ನನ್ನ ಪ್ರಭುವಿನ ತಾಯಿ ನೀನು;
ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ!
44ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ
ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!
45ನಂಬಿ ಧನ್ಯಳಾದೆ ನೀನು,
ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.”
ಮರಿಯಳ ಸ್ತುತಿಗೀತೆ
46ಆಗ ಹೀಗೆಂದು ಮರಿಯಳು ಹೊಗಳಿದಳು:
47“ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ I
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ II
48ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ I
ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ II
49ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ I
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ II
50ಆತನಲ್ಲಿ ಭಯಭಕ್ತಿಯುಳ್ಳವರಿಗೆ I
ಆತನ ಪ್ರೀತಿ ತಲತಲಾಂತರದವರೆಗೆ II
51ಗರ್ವ ಹೃದಯಿಗಳನಾತ ಚದರಿಸಿರುವನು I
ಪ್ರದರ್ಶಿಸಿರುವನು ತನ್ನ ಬಾಹುಬಲವನು II
52ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು I
ಏರಿಸಿರುವನು ಉನ್ನತಿಗೆ ದೀನದಲಿತರನು II
53ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ I
ಹೊರದೂಡಿರುವನು ಸಿರಿವಂತರನು ಬರೀಗೈಯಲಿ II
54ನೆರವಾದನು ತನ್ನ ದಾಸ ಇಸ್ರಯೇಲನಿಗೆ I
ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ II
55ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ I
ಅವನ ಸಂತತಿಗೆ, ಯುಗಯುಗಾಂತರದವರೆಗೆ II
56ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.
ಸ್ನಾನಿಕ ಯೊವಾನ್ನನ ಜನನ
57ದಿನ ತುಂಬಿದಾಗ ಎಲಿಜಬೇತಳು ಗಂಡುಮಗುವಿಗೆ ಜನ್ಮವಿತ್ತಳು. 58ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. 59ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು. 60ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು. 61ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ, 62“ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. 63ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು. 64ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. 65ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. 66ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು.
ಜಕರೀಯನ ಪ್ರವಾದನೆ
67ಆಗ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು :
68ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ I
ತಾನಾಗಿ ಬಂದು ತನ್ನ ಪ್ರಜೆಯನ್ನು ಬಿಡುಗಡೆ ಮಾಡಿದಾತನಿಗೆ II
69ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು I
ನಮಗೊಬ್ಬ ಶಕ್ತಿಯುತ ಮುಕ್ತಿದಾತನನು II
70ಪುರಾತನ ಕಾಲದಿಂದಲೆ, ಪೂಜ್ಯ ಪ್ರವಾದಿಗಳ ಬಾಯಿಂದಲೆ I
ಅರುಹಿಸಿರುವನು ಇಂತೆಂದು ನಮಗೆ: II
71‘ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ
ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ’ II
72ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಮಾಣಿಸಿದ ಪ್ರೀತಿಯನು I
ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು II
73ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ I
74ನಮಗಿತ್ತಿರುವರು ಶತ್ರುಗಳಿಂದ ರಕ್ಷಿಸುವನೆಂಬ ಅಭಯ II
75ಹೀಗೆ ಜೀವಮಾನವೆಲ್ಲ ನಾವು ಆತನ ಸೇವೆ ಮಾಡುವಂತಾಯಿತು ನಿರ್ಭೀತರಾಗಿ I
ಆತನ ಸನ್ನಿಧಿಯಲ್ಲಿ ಬಾಳುವಂತಾಯಿತು ಪುನೀತರಾಗಿ, ಸದ್ಭಕ್ತರಾಗಿ II
76ಸುಕುಮಾರಾ, ನೀನೆನಿಸಿಕೊಳ್ಳುವೆ ‘ಪರಾತ್ಪರನ ಪ್ರವಾದಿ’ I
77ಸರ್ವೇಶ್ವರನ ಮಾರ್ಗವನು ಸಜ್ಜುಗೊಳಿಸುವೆ, ಮುಂದಾಗಿ ತೆರಳಿ II
ಪಾಪಕ್ಷಮೆಯನು ಸಾರುವೆ ಆತನ ಪ್ರಜೆಗೆ I
ಈ ಮೂಲಕ ಜೀವೋದ್ಧಾರದ ಜ್ಞಾನವನ್ನೀಯುವೆ ಆ ಜನರಿಗೆ II
78ಕೃಪಾಸಾಗರ, ದಯಾಮಯ ನಮ್ಮ ದೇವನು I
ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು II
79ಬೆಳಗಿಸಲು ಇರುಳಿನಲು, ಮರಣದ ಮುಸುಕಿನಲು ಬಾಳುವವರನು I
ನಮ್ಮ ಕಾಲುಗಳನ್ನೂರಿಸಿ ನಡೆಯಲು ಶಾಂತಿಪಥದೊಳು II
80ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು.

Currently Selected:

ಲೂಕ. 1: KANCLBSI

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy