YouVersion Logo
Search Icon

ಯಾಜಕಕಾಂಡ 1

1
ದಹನ ಬಲಿಗಳು
1ಸರ್ವೇಶ್ವರ ಸ್ವಾಮಿ ಮೋಶೆಯನ್ನು ಕರೆದು, ದೇವದರ್ಶನದ ಗುಡಾರದಿಂದ ಅವನ ಸಂಗಡ ಮಾತಾಡಿ, ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ತಿಳಿಸಿದರು. 2“ನಿಮ್ಮಲ್ಲಿ ಯಾರಾದರೂ ಸರ್ವೇಶ್ವರನಿಗೆ ಒಂದು ಪ್ರಾಣಿಯನ್ನು ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ ಆಡುಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ. 3ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಸರ್ವೇಶ್ವರನಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು. 4ಅರ್ಪಿಸುವವನು ಆ ಪ್ರಾಣಿಯ ತಲೆಯ ಮೇಲೆ ಕೈಯಿಡಬೇಕು. ಆಗ ಅದು ಅವನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅಂಗೀಕೃತವಾಗುವುದು. 5ಅವನು ಅದನ್ನು ಸರ್ವೇಶ್ವರನ ಎದುರಿನಲ್ಲಿ ವಧಿಸಬೇಕು. ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು. 6ಅದೂ ಅಲ್ಲದೆ ಅರ್ಪಿಸುವವನು ಆ ಪ್ರಾಣಿಯ ಚರ್ಮವನ್ನು ಸುಲಿದು ಅದರ ದೇಹವನ್ನು ತುಂಡುತುಂಡಾಗಿ ಕಡಿಯಬೇಕು. 7ಆರೋನನ ವಂಶಜರಾದ ಯಾಜಕರು ಬಲಿಪೀಠದ ಮೇಲೆ ಬೆಂಕಿಯನ್ನಿಟ್ಟು 8ಅದರ ಮೇಲೆ ಕಟ್ಟಿಗೆಯನ್ನು ಪೇರಿಸಬೇಕು. ಪ್ರಾಣಿಯ ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಅದರ ಮೇಲೆ ಕ್ರಮವಾಗಿ ಇಡಬೇಕು. 9ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
10“ಒಬ್ಬನು ಆಡನ್ನಾಗಲಿ, ಕುರಿಯನ್ನಾಗಲಿ ದಹನಬಲಿದಾನ ಮಾಡಬೇಕೆಂದಿದ್ದರೆ ಅಂಥವನು ಕಳಂಕರಹಿತವಾದ ಗಂಡನ್ನು ತರಲಿ. 11ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಉತ್ತರದ ಕಡೆ ವಧಿಸಲಿ. ತರುವಾಯ ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಲಿ. 12ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ ಯಾಜಕನು ಆ ತುಂಡುಗಳನ್ನೂ ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು. 13ಅದರ ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆಸಿದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
14ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿ ಜಾತಿಯಾಗಿದ್ದರೆ ಅದು ಬೆಳವಕ್ಕಿಯಾಗಿರಲಿ, ಅಥವಾ ಮರಿ ಪಾರಿವಾಳ ಆಗಿರಲಿ. 15ಯಾಜಕನು ಅದನ್ನು ಬಲಿಪೀಠದ ಬಳಿಗೆ ತಂದು ಕುತ್ತಿಗೆ ಮುರಿದು ಬಲಿಪೀಠದ ಮೇಲೆ ಹೋಮಮಾಡಲಿ; ಅದರ ರಕ್ತವನ್ನು ಬಲಿಪೀಠದ ಪಕ್ಕದಲ್ಲಿ ಹಿಂಡಲಿ. 16ಅದರ ಕರುಳುಗಳನ್ನೂ, ಗರಿಗಳನ್ನೂ ತೆಗೆದುಬಿಟ್ಟು ಬಲಿಪೀಠದ ಪೂರ್ವದಿಕ್ಕಿನಲ್ಲಿರುವ ಬೂದಿಯ ಎಡೆಯಲ್ಲಿ ಬಿಸಾಡಲಿ. 17ಯಾಜಕನು ಆ ಹಕ್ಕಿಯ ದೇಹವನ್ನು ಇಬ್ಭಾಗವಾಗಿ ಸೀಳಲಿ; ಒಂದೊಂದು ಭಾಗದಲ್ಲಿ ಒಂದು ರೆಕ್ಕೆ ಇರುವಂತೆ ಸೀಳಲಿ. ಅನಂತರ ಅದನ್ನು ಬಲಿಪೀಠದ ಮೇಲಿನ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಹೋಮಮಾಡಲಿ. ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy