YouVersion Logo
Search Icon

ಗಲಾತ್ಯರಿಗೆ 2

2
ಪೌಲನು ಮತ್ತು ಇತರ ಪ್ರೇಷಿತರು
1ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ. 2ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯಧರ್ಮೀಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲಿ ಈಗ ಪಡುತ್ತಿರುವ ಶ್ರಮವಾಗಲಿ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ. 3ಆಗ ನನ್ನ ಸಂಗಡವಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿ ಆಗಬೇಕೆಂದು ಯಾರೂ ಒತ್ತಾಯಪಡಿಸಲಿಲ್ಲ. 4ಗೂಢಾಚಾರರಾಗಿ ಬಂದಿದ್ದ ಕೆಲವು ಸಹೋದರರು ಅಲ್ಲಿದ್ದುದರಿಂದ ಒತ್ತಾಯ ನಡೆದೀತೆಂಬ ಶಂಕೆ ಇತ್ತು. ಇವರು ಕ್ರಿಸ್ತಯೇಸುವಿನಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯದ ಬಗ್ಗೆ ಗುಟ್ಟಾಗಿ ವಿಚಾರಿಸಲು ಬಂದಿದ್ದರು. ನಮ್ಮನ್ನು ಪುನಃ ದಾಸತ್ವದಲ್ಲಿ ಸಿಕ್ಕಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. 5ಆದರೆ ನಾವು ಅವರಿಗೆ ಕ್ಷಣಮಾತ್ರವೂ ಬಿಟ್ಟುಕೊಡಲಿಲ್ಲ. ಹೀಗೆ ನಿಮಗೋಸ್ಕರ ಶುಭಸಂದೇಶದ ಸತ್ಯಾರ್ಥವನ್ನು ಸುಭದ್ರವಾಗಿ ಇರಿಸಿದೆವು.
6ಅಲ್ಲಿದ್ದ ಗಣ್ಯವ್ಯಕ್ತಿಗಳು ಕೂಡ (ಅವರು ಹಿಂದೆ ಎಂಥವರಾಗಿದ್ದರು ಎಂಬುದು ನನಗೆ ಮುಖ್ಯವಲ್ಲ; ದೇವರು ಮುಖನೋಡಿ ಮಣೆ ಹಾಕುವವರಲ್ಲ) ನನಗೆ ಯಾವ ಹೊಸ ಸಲಹೆ ನೀಡಲಿಲ್ಲ. 7ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಆ ಗಣ್ಯವ್ಯಕ್ತಿಗಳು ಒಪ್ಪಿಕೊಂಡರು. 8ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನ್ನನ್ನು ಪ್ರೇರೇಪಿಸಿದ್ದಾರೆ. 9ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು. 10ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು.
ಪೇತ್ರ ಪೌಲರ ವಾಗ್ವಾದ
11ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾಮುಖಿಯಾಗಿ ಖಂಡಿಸಿದೆ. 12ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು. 13ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು. 14ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ: “ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ದಿಯಲ್ಲವೇ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?” ಎಂದು ಕೇಳಿದೆ.
ವಿಶ್ವಾಸವೇ ಜೀವೋದ್ಧಾರದ ಮಾರ್ಗ
15ನಾವಂತೂ ಹುಟ್ಟು ಯೆಹೂದ್ಯರು. ಪಾಪಿಗಳೆಂದು ಕರೆಯಲಾಗುವ ಅನ್ಯಧರ್ಮೀಯರಲ್ಲ. 16ಆದರೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲ್ಲ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಡುವುದರಿಂದ ಮಾತ್ರ ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆಂದು ಬಲ್ಲೆವು. ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಸಲುವಾಗಿ ನಾವೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಬಿಟ್ಟು, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿದ್ದೇವೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲೆ ಯಾರೂ ದೇವರೊಡನೆ ಸತ್ಸಂಬಂಧಿಕರಾಗಿ ಕಂಡುಬರುವುದಿಲ್ಲ. 17ಕ್ರಿಸ್ತಯೇಸುವಿನ ಮುಖಾಂತರ ದೇವರೊಡನೆ ಸತ್ಸಂಬಂಧವನ್ನು ಪಡೆಯಲು ಯತ್ನಿಸುತ್ತಿರುವ ನಾವು ಅನ್ಯಧರ್ಮೀಯರಂತೆ ಕಂಡುಬರುವುದಾದರೆ, ಕ್ರಿಸ್ತಯೇಸುವೇ ಪಾಪಕ್ಕೆ ಕಾರಣರೆಂದು ಹೇಳಿದಂತಾಗುತ್ತದೆ. ಆದರೆ ಅದೆಂದಿಗೂ ಆಗದು. 18ನಾನು ಕೆಡವಿದ್ದನ್ನೇ ಪುನಃ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ರುಜುವಾತು ಪಡಿಸಿದಂತಾಗುವುದಿಲ್ಲವೇ? 19ನಾನಾದರೋ ದೇವರಿಗಾಗಿ ಜೀವಿಸುವುದಕ್ಕೋಸ್ಕರ, ಧರ್ಮಶಾಸ್ತ್ರದ ಮೂಲಕ, ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ. 20ಕ್ರಿಸ್ತಯೇಸುವಿನೊಂದಿಗೆ ನಾನೂ ಶಿಲುಬೆಗೇರಿಸಲಾದವನು. ಈಗ ಜೀವಿಸುವವನು ನಾನಲ್ಲ. ಕ್ರಿಸ್ತಯೇಸು ನನ್ನಲ್ಲಿ ಜೀವಿಸುತ್ತಾರೆ, ನನ್ನನ್ನು ಪ್ರೀತಿಸಿ ನನಗಾಗಿ ಪ್ರಾಣಾರ್ಪಣೆ ಮಾಡಿದ ದೇವರ ಪುತ್ರನಲ್ಲಿ ನಾನು ಇರಿಸಿರುವ ವಿಶ್ವಾಸದಿಂದಲೇ ನಾನೀಗ ಈ ದೇಹದಲ್ಲಿ ಜೀವಿಸುತ್ತಿದ್ದೇನೆ. 21ದೇವರ ಅನುಗ್ರಹವನ್ನು ನಿರಾಕರಿಸುವಂಥವನು ನಾನಲ್ಲ. ಧರ್ಮಶಾಸ್ತ್ರದ ಮೂಲಕ ದೇವರೊಡನೆ ಸತ್ಸಂಬಂಧವು ದೊರಕುವುದಾದರೆ ಕ್ರಿಸ್ತಯೇಸು ಮರಣಕ್ಕೀಡಾದುದು ನಿರರ್ಥಕವೇ ಸರಿ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy