YouVersion Logo
Search Icon

ಗಲಾತ್ಯರಿಗೆ 1

1
ಪೀಠಿಕೆ
1ಗಲಾತ್ಯದಲ್ಲಿರುವ ಸಭೆಗಳಿಗೆ, ಪ್ರೇಷಿತನಾದ ಪೌಲನು ಎಲ್ಲಾ ಸಹೋದರರೊಡನೆ ಸೇರಿ ಬರೆಯುವ ಪತ್ರ: 2ಮಾನವರಿಂದಾಗಲಿ ಮಾನವ ಅಧಿಕಾರದಿಂದಾಗಲಿ ನಾನು ಪ್ರೇಷಿತನಾಗಿರದೆ ಯೇಸುಕ್ರಿಸ್ತರಿಂದಲೂ ಮತ್ತು ಅವರನ್ನು ಮರಣದಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಪ್ರೇಷಿತನಾಗಿರುತ್ತೇನೆ.
3ನಮ್ಮ ತಂದೆಯಾದ ದೇವರಿಂದಲೂ ಪ್ರಭು ಯೇಸುಕ್ರಿಸ್ತರಿಂದಲೂ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
4ಯೇಸುಕ್ರಿಸ್ತರು, ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, ನಮ್ಮನ್ನು ಸದ್ಯದ ದುಷ್ಟಕಾಲದಿಂದ ಬಿಡುಗಡೆ ಮಾಡುವುದಕ್ಕಾಗಿ ಹಾಗು ನಮ್ಮ ಪಾಪಗಳ ಪರಿಹಾರಕ್ಕಾಗಿ ತಮ್ಮನ್ನೇ ಬಲಿಯಾಗಿ ಅರ್ಪಿಸಿದರು. 5ದೇವರಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ! ಆಮೆನ್.
ಏಕೈಕ ಶುಭಸಂದೇಶ
6ಕ್ರಿಸ್ತಯೇಸುವಿನ ಅನುಗ್ರಹದಿಂದ ನಿಮ್ಮನ್ನು ಕರೆದ ದೇವರನ್ನು ನೀವಿಷ್ಟು ಬೇಗನೆ ತ್ಯಜಿಸಿ, ಬೇರೊಂದು ‘ಶುಭಸಂದೇಶ’ವನ್ನು ಅಂಗೀಕರಿಸುತ್ತಿರುವಿರೆಂದು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. 7ವಾಸ್ತವವಾಗಿ, ಬೇರೆ ಯಾವ ಶುಭಸಂದೇಶವೂ ಇಲ್ಲ. ಆದರೆ ಕೆಲವರು ನಿಮ್ಮಲ್ಲಿ ಗೊಂದಲವೆಬ್ಬಿಸಿ, ಕ್ರಿಸ್ತಯೇಸುವಿನ ಶುಭಸಂದೇಶವನ್ನು ಮಾರ್ಪಡಿಸಲು ಯತ್ನಿಸುತ್ತಾ ಇದ್ದಾರೆ. 8ನಾವು ನಿಮಗೆ ಬೋಧಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ನಾವೇ ಆಗಲಿ, ಸ್ವರ್ಗದಿಂದ ಇಳಿದ ದೇವದೂತನೇ ಆಗಲಿ, ಯಾರೇ ಆಗಲಿ ಬೋಧಿಸಿದರೆ ಅವನು ಶಾಪಗ್ರಸ್ತನಾಗಲಿ! 9ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಸಾರುವವನು ಶಾಪಗ್ರಸ್ತನಾಗಲಿ ಎಂದು ನಾನು ಮೊದಲೇ ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ.
10ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಿಕೊಳ್ಳಲು ಯತ್ನಿಸುತ್ತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ ಕ್ರಿಸ್ತಯೇಸುವಿನ ದಾಸನಾಗಿರಲು ಸಾಧ್ಯವೇ ಇಲ್ಲ.
ಪ್ರೇಷಿತನಾದ ಪೌಲ
11ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ. 12ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ. ಯೇಸುಕ್ರಿಸ್ತರೇ ನನಗದನ್ನು ಶ್ರುತಪಡಿಸಿದರು.
13ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ. 14ಇದಲ್ಲದೆ, ನಾನು ನನ್ನ ಪೂರ್ವಜರ ಮತಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಠೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ.
15ಆದರೆ, ನಾನಿನ್ನೂ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು. 16ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ. 17ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ. ಅಲ್ಲಿಂದ ದಮಸ್ಕಸ್ ನಗರಕ್ಕೆ ಹಿಂದಿರುಗಿದೆ. 18ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಆತನೊಂದಿಗೆ ತಂಗಿದ್ದೆ. 19ಆಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತರನ್ನೂ ನಾನು ಕಾಣಲಿಲ್ಲ. 20ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ.ಎಂಬುದಕ್ಕೆ ದೇವರೇ ಸಾಕ್ಷಿ. 21ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ. 22ಆಗ ಜುದೇಯ ಪ್ರಾಂತ್ಯದಲ್ಲಿದ್ದ ಕ್ರೈಸ್ತ ಸಭೆಗಳಿಗೆ ನನ್ನ ಪರಿಚಯವಾಗಿರಲಿಲ್ಲ. 23‘ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರಮಾಡುತ್ತಿದ್ದಾನೆ’, ಎಂಬ ಸುದ್ದಿಯನ್ನು ಮಾತ್ರ ಕೇಳಿದ್ದರು. 24ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy