YouVersion Logo
Search Icon

1 ಥೆಸಲೋನಿಯರಿಗೆ 2

2
ನಿಸ್ವಾರ್ಥ ಸೇವೆ
1ಸಹೋದರರೇ, ನಾವು ನಿಮ್ಮಲ್ಲಿಗೆ ಬಂದುದು ವ್ಯರ್ಥವಾಗಲಿಲ್ಲವೆಂಬುದು ನಿಮಗೆ ಗೊತ್ತು. 2ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು. 3ನಮ್ಮ ಬೋಧನೆಯಾದರೋ ದುರುದ್ದೇಶದಿಂದ ಕೂಡಿದುದಲ್ಲ; ಅಶುದ್ಧ ಅಥವಾ ಕಪಟ ಮನಸ್ಸಿನಿಂದ ಮೂಡಿದುದೂ ಅಲ್ಲ. 4ಶುಭಸಂದೇಶವನ್ನು ಸಾರಲು ನಾವು ಯೋಗ್ಯರೆಂದು ಎಣಿಸಿ, ದೇವರೇ ಈ ಹೊಣೆಯನ್ನು ನಮಗೆ ವಹಿಸಿಕೊಟ್ಟಿದ್ದಾರೆ. ಎಂತಲೇ, ನಾವು ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಅಂತರಂಗವನ್ನು ಪರಿಶೋಧಿಸುವ ದೇವರನ್ನು ಮೆಚ್ಚಿಸುವುದಕ್ಕಾಗಿ ಈ ಕಾರ್ಯವನ್ನು ನಿರ್ವಹಿಸುತ್ತೇವೆ. 5ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಗಾಗಿ ಮಾತನಾಡುವವರಲ್ಲ, ಧನದಾಶೆಯನ್ನು ಮರೆಮಾಚುವ ವೇಷಧಾರಿಗಳೂ ಅಲ್ಲ. ಇದಕ್ಕೆ ದೇವರೇ ಸಾಕ್ಷಿ. 6ಕ್ರಿಸ್ತಯೇಸುವಿನ ಪ್ರೇಷಿತರಾದ ನಾವು ಜನರಿಂದ ಮರ್ಯಾದೆ, ಗೌರವಗಳನ್ನು ಗಳಿಸಬಹುದಾಗಿದ್ದರೂ ನಿಮ್ಮಿಂದಾಗಲಿ, ಇತರರಿಂದಾಗಲಿ ಅವನ್ನು ನಾವು ಬಯಸಲಿಲ್ಲ. 7ತಾಯಿ ತನ್ನ ಮಕ್ಕಳನ್ನು ಸಾಕಿಸಲಹುವಂತೆಯೇ, ನಾವು ನಿಮ್ಮನ್ನು ವಾತ್ಸಲ್ಯದಿಂದ ಕಂಡೆವು. 8ನೀವು ನಮಗೆ ಇಷ್ಟು ಪ್ರಿಯರಾದ ಕಾರಣ ದೇವರ ಶುಭಸಂದೇಶವನ್ನು ಸಾರುವುದಕ್ಕೆ ಮಾತ್ರವಲ್ಲ, ನಿಮಗಾಗಿ ನಮ್ಮ ಪ್ರಾಣವನ್ನು ನೀಡುವುದಕ್ಕೂ ಸಿದ್ಧರಾಗಿದ್ದೆವು. 9ಸಹೋದರರೇ, ನಮ್ಮ ಶ್ರಮೆ ಹಾಗೂ ದುಡಿಮೆಗಳನ್ನು ನೀವು ಮರೆಯುವಂತಿಲ್ಲ. ನಿಮ್ಮಲ್ಲಿ ಯಾರಿಗೂ ನಾವು ಹೊರೆಯಾಗಬಾರದೆಂದು, ಬದುಕಿಗಾಗಿ ಹಗಲಿರುಳೂ ದುಡಿಯುತ್ತಾ ದೇವರ ಶುಭಸಂದೇಶವನ್ನು ಸಾರಿದೆವು.
10ವಿಶ್ವಾಸಿಗಳಾದ ನಿಮ್ಮ ನಡುವೆ ನಾವು ಎಷ್ಟು ಶುದ್ಧರಾಗಿ, ನೀತಿವಂತರಾಗಿ, ನಿರ್ದೋಷಿಗಳಾಗಿ ನಡೆದುಕೊಂಡೆವು ಎಂಬುದಕ್ಕೆ ನೀವೇ ಸಾಕ್ಷಿಗಳು, ಮಾತ್ರವಲ್ಲದೆ ದೇವರೂ ಸಾಕ್ಷಿಯೇ. 11ತಂದೆ ಮಕ್ಕಳನ್ನು ಕಾಣುವಂತೆ ನಾವು ಪ್ರತಿಯೊಬ್ಬನನ್ನೂ ಆದರದಿಂದ ಕಂಡೆವು; ಬುದ್ಧಿ ಹೇಳಿದೆವು; ಪ್ರೋತ್ಸಾಹಿಸಿದೆವು. 12ತಮ್ಮ ರಾಜ್ಯ ಹಾಗೂ ವೈಭವದಲ್ಲಿ ಭಾಗವಹಿಸಲು ಕರೆಯಿತ್ತ ದೇವರು ಮೆಚ್ಚುವಂತೆ ಬಾಳಬೇಕೆಂದು ನಿಮಗೆ ವಿಧಿಸಿದೆವು; ಇದೆಲ್ಲಾ ನಿಮಗೆ ತಿಳಿದಿದೆ. 13ಇನ್ನೊಂದು ಕಾರಣಕ್ಕಾಗಿಯೂ ನಾವು ಸತತವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನೀವು ದೇವರ ಸಂದೇಶವನ್ನು ನಮ್ಮಿಂದ ಕೇಳಿದಾಗ, ಅದನ್ನು ಮನುಷ್ಯರ ಮಾತುಗಳೆಂದು ಪರಿಗಣಿಸದೆ, ದೇವರ ವಾಕ್ಯವೆಂದೇ ಅರಿತು ಅಂಗೀಕರಿಸಿದಿರಿ. ವಿಶ್ವಾಸಿಗಳಾದ ನಿಮ್ಮಲ್ಲಿ ಚೈತನ್ಯಪೂರ್ಣವಾಗಿರುವ ಈ ವಾಕ್ಯವು, ನಿಜವಾಗಿಯೂ ದೇವರ ಸಂದೇಶವೇ ಸರಿ. 14ಸಹೋದರರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳನ್ನು ಅನುಸರಿಸಿದಿರಿ. ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಯೆಹೂದ್ಯರಿಂದ ಅನುಭವಿಸಿದಂಥ ಹಿಂಸೆಯನ್ನು, ನೀವೂ ಸ್ವಜನರಿಂದ ಅನುಭವಿಸಿದಿರಿ. 15ಆ ಯೆಹೂದ್ಯರೇ ಪ್ರಭು ಯೇಸುವನ್ನೂ ಪ್ರವಾದಿಗಳನ್ನೂ ಸಂಹರಿಸಿದವರು; ನಮ್ಮನ್ನೂ ಸಹ ಹೊರದಬ್ಬಿದರು. ಅವರು ದೇವರಿಗೆ ದ್ರೋಹವೆಸಗಿದರು; ಜನರೆಲ್ಲರಿಗೆ ವಿರೋಧಿಗಳಾದರು. 16ಯೆಹೂದ್ಯರಲ್ಲದ ಜನರಿಗೆ ಜೀವೋದ್ಧಾರವನ್ನು ತರುವ ಶುಭಸಂದೇಶವನ್ನು ನಾವು ಸಾರದಂತೆ ಅವರು ನಮ್ಮನ್ನು ತಡೆಗಟ್ಟುತ್ತಾರೆ. ಹೀಗೆ, ಅವರು ತಮ್ಮ ಪಾಪಕೃತ್ಯಗಳ ಪಟ್ಟಿಯನ್ನು ಸದಾ ಭರ್ತಿಮಾಡುತ್ತಾರೆ. ಕಡೆಗೆ, ದೇವರ ಕೋಪಾಗ್ನಿಯು ಅವರ ಮೇಲೆ ಬರುತ್ತದೆ.
ಮರುಭೇಟಿಯ ಬಯಕೆ
17ಸಹೋದರರೇ, ನಾವು ದೈಹಿಕವಾಗಿ ನಿಮ್ಮಿಂದ ಸ್ವಲ್ಪಕಾಲ ದೂರವಿದ್ದರೂ ಅಂತರಂಗದಲ್ಲಿ ನಿಮ್ಮೊಡನೆಯೇ ಇದ್ದೆವು; ನಿಮ್ಮನ್ನು ಮುಖಾಮುಖಿಯಾಗಿ ಕಾಣಲು ಪ್ರಯತ್ನಿಸಿದೆವು. 18ನಿಮ್ಮಲ್ಲಿಗೆ ಹಿಂದಿರುಗಲು ನಮಗೆ ಮನಸ್ಸಿತ್ತು. ಪೌಲನೆಂಬ ನಾನಂತೂ, ನಿಮ್ಮ ಬಳಿಗೆ ಬರಲು ಅನೇಕ ಸಾರಿ ಪ್ರಯಾಸಪಟ್ಟೆ. ಆದರೆ ಸೈತಾನನು ನಮಗೆ ಅಡ್ಡಿ ಆತಂಕವನ್ನೊಡ್ಡಿದನು. 19ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ಅವರ ಸಮ್ಮುಖದಲ್ಲಿ ನಮ್ಮ ಆಶಯ-ಆನಂದಗಳು, ಕೀರ್ತಿ-ಕಿರೀಟಗಳಾದರೂ ಯಾರು? ನೀವೇ ಅಲ್ಲವೇ? 20ನಿಶ್ಚಯವಾಗಿ ನಮ್ಮ ಗೌರವವೂ ಆನಂದವೂ ನೀವೇ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy