YouVersion Logo
Search Icon

ಲೂಕ 20

20
ಶಾಸ್ತ್ರಿಗಳು ಯೇಸುವಿನ ಅಧಿಕಾರವನ್ನು ವಿಚಾರಿಸಿದಾಗ ಆತನು ತಕ್ಕ ಉತ್ತರಕೊಟ್ಟು ಅವರು ಮಾಡಿದ ದೇವದ್ರೋಹವನ್ನು ಸಾಮ್ಯಗಳಿಂದ ಸೂಚಿಸಿದ್ದು
(ಮತ್ತಾ. 21.23-46; ಮಾರ್ಕ. 11.27—12.12)
1ಆ ದಿವಸಗಳೊಳಗೆ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮಹಾಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಕೊಂಡು 2ಫಕ್ಕನೆ ಬಂದು - ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು, ನಮಗೆ ಹೇಳು ಎಂದು ಆತನನ್ನು ಕೇಳಲು 3ಆತನು ಅವರಿಗೆ - ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ನನಗೆ ಹೇಳಿರಿ. 4ದೀಕ್ಷಾಸ್ನಾನಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂತೋ ಮನುಷ್ಯರಿಂದ ಬಂತೋ ಎಂದು ಅವರನ್ನು ಕೇಳಿದನು. 5ಆಗ ಅವರು - ಪರಲೋಕದಿಂದ ಬಂತೆಂದು ನಾವು ಹೇಳಿದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು; 6ಮನುಷ್ಯರಿಂದ ಬಂತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಂಡು 7ಅದು ಎಲ್ಲಿಂದ ಬಂತೋ ನಾವರಿಯೆವು ಎಂದು ಉತ್ತರಕೊಟ್ಟರು. 8ಆಗ ಯೇಸು ಅವರಿಗೆ - ಇದನ್ನೆಲ್ಲಾ ಯಾವ ಅಧಿಕಾರದಿಂದ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ ಎಂದು ಹೇಳಿದನು.
ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವದಕ್ಕೆ ತೊಡಗಿದನು. 9ಅದೇನಂದರೆ - ಒಬ್ಬ ಮನುಷ್ಯನು ಒಂದು ದ್ರಾಕ್ಷೆಯ ತೋಟವನ್ನು ಮಾಡಿ ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10ಫಲಕಾಲ ಬಂದಾಗ ದ್ರಾಕ್ಷೆಯತೋಟದ ಹುಟ್ಟುವಳಿಯ ಪಾಲನ್ನು ತೆಗೆದುಕೊಳ್ಳುವದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಲಿ ಕಳುಹಿಸಿಬಿಟ್ಟರು. 11ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನ ಪಡಿಸಿ ಬರಿಗೈಲಿ ಕಳುಹಿಸಿಬಿಟ್ಟರು. 12ಆಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಕ್ಕೆ ಅಟ್ಟಿದರು. 13ಆಗ ಆ ದ್ರಾಕ್ಷೆಯ ತೋಟದ ಧಣಿಯು - ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು ಅಂದುಕೊಂಡನು. 14ಆದರೆ [ಕಳುಹಿಸಿದಾಗ] ಆ ಒಕ್ಕಲಿಗರು ಅವನನ್ನು ಕಂಡು - ಇವನೇ ಬಾಧ್ಯಸ್ಥನು; ಇವನನ್ನು ಕೊಂದುಹಾಕೋಣ, ಇವನ ಸ್ವಾಸ್ತ್ಯ ನಮ್ಮದಾಗಲಿ ಎಂದು ಒಬ್ಬರಸಂಗಡಲೊಬ್ಬರು ಮಾತಾಡಿಕೊಂಡು 15ಅವನನ್ನು ದ್ರಾಕ್ಷೆಯ ತೋಟದಿಂದ ಹೊರಕ್ಕೆ ದೊಬ್ಬಿ ಕೊಂದುಹಾಕಿದರು. ಹಾಗಾದರೆ ದ್ರಾಕ್ಷೆಯತೋಟದ ಧಣಿಯು ಅವರಿಗೆ ಏನು ಮಾಡುವನು? 16ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವದಕ್ಕೆ ಕೊಡುವನು ಅಂದನು. 17ಇದನ್ನು ಜನರು ಕೇಳಿ - ಹಾಗಾಗಬಾರದು ಅಂದರು. ಆದರೆ ಆತನು ಅವರನ್ನು ದೃಷ್ಟಿಸಿ ನೋಡಿ - ಹಾಗಾದರೆ
ಮನೇ ಕಟ್ಟುವವರು ಬೇಡವೆಂದು ಬಿಟ್ಟ
ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು
ಎಂದು ಬರೆದಿರುವ ಮಾತೇನು? 18ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುವದೋ ಅವನನ್ನು ಪುಡಿ ಪುಡಿ ಮಾಡುವದು ಅಂದನು.
19ಶಾಸ್ತ್ರಿಗಳೂ ಮಹಾಯಾಜಕರೂ ಈ ಮಾತುಗಳನ್ನು ಕೇಳಿ ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ತಿಳುಕೊಂಡು ಅದೇ ಗಳಿಗೆಯಲ್ಲಿ ಆತನನ್ನು ಹಿಡಿಯುವದಕ್ಕೆ ಸಂದರ್ಭನೋಡಿದರು; ಆದರೆ ಜನರಿಗೆ ಭಯಪಟ್ಟರು.
ವಿರೋಧಿಗಳು ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವದಕ್ಕೆ ಪ್ರಯತ್ನಮಾಡಿ ಸೋತುಹೋದದ್ದು
(ಮತ್ತಾ. 22.15—23.7; ಮಾರ್ಕ. 12.13-40)
20ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಕ್ಕೂ ಒಪ್ಪಿಸಬೇಕೆಂದು ಹೊಂಚಿನೋಡುವವರಾಗಿ ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ಹಿಡಿಯುವದಕ್ಕೆ [ಆತನ ಬಳಿಗೆ] ಕಳುಹಿಸಿದರು. 21ಇವರು - ಬೋಧಕನೇ, ನೀನು ಸರಿಯಾಗಿ ಮಾತಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು. 22ಕೈಸರನಿಗೆ#20.22 ಅಂದರೆ, ರೋಮ್ ಸಾಮ್ರಾಜ್ಯದ ಚಕ್ರವರ್ತಿಗೆ. ಕಂದಾಯ ಕೊಡುವದು ಸರಿಯೋ ಸರಿಯಲ್ಲವೋ ಎಂದು ಆತನನ್ನು ಕೇಳಿದರು. 23ಆತನು ಅವರ ಕುಯುಕ್ತಿಯನ್ನು ಕಂಡುಕೊಂಡು 24ಅವರಿಗೆ - ನನಗೆ ಒಂದು ಹಣವನ್ನು ತೋರಿಸಿರಿ. ಇದರಲ್ಲಿ ಯಾರ ತಲೆಯೂ ಮುದ್ರೆಯೂ ಅದೆ ಎಂದು ಕೇಳಿದ್ದಕ್ಕೆ ಅವರು - ಕೈಸರನದು ಅಂದರು. 25ಆತನು ಅವರಿಗೆ - ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. 26ಆತನ ಮಾತಿನಲ್ಲಿ ಅವರು ಜನರ ಮುಂದೆ ಏನೂ ಹಿಡಿಯಲಾರದೆ ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮಗಾದರು.
27ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ - 28ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ. 29ಒಳ್ಳೇದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಹೆಂಡತಿಯನ್ನು ಮಾಡಿಕೊಂಡು ಮಕ್ಕಳಿಲ್ಲದೆ ಸತ್ತನು. 30-31ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತರು. 32ಕಡೆಯಲ್ಲಿ ಆ ಸ್ತ್ರೀಯೂ ಸತ್ತಳು. 33ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ ಅಂದರು. 34ಯೇಸು ಅವರಿಗೆ - ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ, ಮದುವೆಮಾಡಿಕೊಡುತ್ತಾರೆ; 35ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆ ಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ. 36ಅವರು ಇನ್ನು ಮರಣಕ್ಕೆ ಗುರಿಯಾಗುವದೇ ಇಲ್ಲ. ಪುನರುತ್ಥಾನವನ್ನು ಹೊಂದಿದವರಾಗಿದ್ದು ದೇವದೂತರಿಗೆ ಸರಿಸಮಾನರೂ ದೇವರ ಮಕ್ಕಳೂ ಆಗಿದ್ದಾರೆ. ಸತ್ತವರು ಬದುಕಿ ಏಳುತ್ತಾರೆಂಬದನ್ನು ಮೋಶೆಯು ಸೂಚಿಸಿದ್ದಾನೆ. 37ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಎಂದು ಹೇಳಿದ್ದಾನೆ. ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. 38ಆತನಿಗೆ ಎಲ್ಲರೂ ಜೀವಿಸುವವರೇ ಎಂದು ಹೇಳಿದನು. 39ಶಾಸ್ತ್ರಿಗಳಲ್ಲಿ ಕೆಲವರು - ಬೋಧಕನೇ, ಚೆನ್ನಾಗಿ ಹೇಳಿದಿ ಅಂದರು. 40ಆತನನ್ನು ಇನ್ನೇನು ಕೇಳುವದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.
41ಆಗ ಆತನು - ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
42-43ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವಾಗ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು
ಕರ್ತನು ನನ್ನ ಒಡೆಯನಿಗೆ ನುಡಿದನು
ಎಂಬದಾಗಿ ಕೀರ್ತನಗ್ರಂಥದಲ್ಲಿ ದಾವೀದನೇ ಹೇಳುತ್ತಾನಷ್ಟೆ. 44ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ ಎಂದು ಅವರನ್ನು ಕೇಳಿದನು.
45ಜನರೆಲ್ಲರು ಕೇಳುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - 46ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಇವುಗಳಲ್ಲಿ ಇಷ್ಟವುಳ್ಳವರೂ ಆಗಿದ್ದಾರೆ. 47ಅವರು ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.

Currently Selected:

ಲೂಕ 20: KANJV-BSI

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy