Logo YouVersion
Eicon Chwilio

ಮತ್ತಾಯ 1

1
ಯೇಸುಸ್ವಾಮಿಯ ವಂಶಾವಳಿ
1ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:
2ಅಬ್ರಹಾಮನು ಇಸಾಕನ ತಂದೆ,
ಇಸಾಕನು ಯಾಕೋಬನ ತಂದೆ,
ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,
3ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ,
ಪೆರೆಸನು ಹೆಚ್ರೋನನ ತಂದೆ,
ಹೆಚ್ರೋನನು ಅರಾಮನ ತಂದೆ,
4ಅರಾಮನು ಅಮ್ಮೀನಾದಾಬನ ತಂದೆ,
ಅಮ್ಮೀನಾದಾಬನು ನಹಶೋನನ ತಂದೆ,
ನಹಶೋನನು ಸಲ್ಮೋನನ ತಂದೆ,
5ಸಲ್ಮೋನನು ಬೋವಜನ ತಂದೆ, ಬೋವಜನ ತಾಯಿ ರಾಹಾಬಳು,
ಬೋವಜನು ಓಬೇದನ ತಂದೆ, ಓಬೇದನ ತಾಯಿ ರೂತಳು,
ಓಬೇದನು ಇಷಯನ ತಂದೆ,
6ಇಷಯನು ರಾಜನಾದ ದಾವೀದನ ತಂದೆ.
ದಾವೀದನು ಸೊಲೊಮೋನನ ತಂದೆ, ಇವನ ತಾಯಿ ಊರೀಯನ ಹೆಂಡತಿಯಾಗಿದ್ದವಳು,
7ಸೊಲೊಮೋನನು ರೆಹಬ್ಬಾಮನ ತಂದೆ,
ರೆಹಬ್ಬಾಮನು ಅಬೀಯನ ತಂದೆ,
ಅಬೀಯನು ಆಸನ ತಂದೆ,
8ಆಸನು ಯೆಹೋಷಾಫಾಟನ ತಂದೆ,
ಯೆಹೋಷಾಫಾಟನು ಯೆಹೋರಾಮನ ತಂದೆ,
ಯೆಹೋರಾಮನು ಉಜ್ಜೀಯನ ತಂದೆ,
9ಉಜ್ಜೀಯನು ಯೋತಾಮನ ತಂದೆ,
ಯೋತಾಮನು ಆಹಾಜನ ತಂದೆ,
ಆಹಾಜನು ಹಿಜ್ಕೀಯನ ತಂದೆ,
10ಹಿಜ್ಕೀಯನು ಮನಸ್ಸೆಯ ತಂದೆ,
ಮನಸ್ಸೆಯು ಆಮೋನನ ತಂದೆ,
ಆಮೋನನು ಯೋಷೀಯನ ತಂದೆ,
11ಯೋಷೀಯನಿಗೆ ಯೆಕೊನ್ಯ#1:11 ಯೆಹೋಯಾಕೀನನು ಎಂದು ಸಹ ಕರೆಯಲಾಗುತ್ತಿತ್ತು. ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
12ಬಾಬಿಲೋನಿಗೆ ಸೆರೆಹೋದ ಮೇಲೆ:
ಯೆಕೊನ್ಯನು ಶೆಯಲ್ತೀಯೇಲನನ್ನು ಪಡೆದನು,
ಶೆಯಲ್ತೀಯೇಲನು ಜೆರುಬ್ಬಾಬೆಲನ ತಂದೆ,
13ಜೆರುಬ್ಬಾಬೆಲನು ಅಬಿಹೂದನ ತಂದೆ,
ಅಬಿಹೂದನು ಎಲಿಯಕೀಮನ ತಂದೆ,
ಎಲಿಯಕೀಮನು ಅಜೋರನ ತಂದೆ,
14ಅಜೋರನು ಸದೋಕನ ತಂದೆ,
ಸದೋಕನು ಅಖೀಮನ ತಂದೆ,
ಅಖೀಮನು ಎಲಿಹೂದನ ತಂದೆ,
15ಎಲಿಹೂದನು ಎಲಿಯಾಜರನ ತಂದೆ,
ಎಲಿಯಾಜರನು ಮತ್ತಾನನ ತಂದೆ,
ಮತ್ತಾನನು ಯಾಕೋಬನ ತಂದೆ,
16ಯಾಕೋಬನು ಯೋಸೇಫನ ತಂದೆ, ಯೋಸೇಫನು ಮರಿಯಳ ಪತಿ, ಮರಿಯಳು ಕ್ರಿಸ್ತ ಎಂದು ಕರೆಯಲಾದ, ಯೇಸುಸ್ವಾಮಿಯ ತಾಯಿ.
17ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.
ಕ್ರಿಸ್ತ ಯೇಸುವಿನ ಜನನ
18ಕ್ರಿಸ್ತ ಯೇಸುವಿನ ಜನನದ ವಿವರ: ಯೇಸುವಿನ ತಾಯಿ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದ್ದರು, ಆದರೆ ಅವರಿಬ್ಬರು ಕೂಡಿಬಾಳುವುದಕ್ಕಿಂತ ಮುಂಚೆಯೇ, ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದು ತಿಳಿದುಬಂತು. 19ಯೋಸೇಫನು ನೀತಿವಂತನಾಗಿದ್ದರಿಂದ, ಆಕೆಯನ್ನು ಬಹಿರಂಗವಾಗಿ ಅವಮಾನ ಮಾಡುವುದಕ್ಕೆ ಮನಸ್ಸಿಲ್ಲದೆ, ಆಕೆಯನ್ನು ರಹಸ್ಯವಾಗಿ ಬಿಟ್ಟು ಬಿಡಬೇಕೆಂದಿದ್ದನು.
20ಅವನು ಹೀಗೆ ಯೋಚಿಸುತ್ತಿದ್ದಾಗ, ಕರ್ತನ ದೂತನು ಕನಸಿನಲ್ಲಿ ಅವನಿಗೆ ಪ್ರತ್ಯಕ್ಷನಾಗಿ, “ದಾವೀದನ ವಂಶದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭವತಿಯಾಗಿರುವುದು ಪವಿತ್ರಾತ್ಮರಿಂದಲೇ. 21ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು#1:21 ಯೇಸು ಎಂಬುದು ಗ್ರೀಕ್ ರೂಪವಾದ ಯೆಹೋಶುವಾ ಇದರ ಅರ್ಥ ಯೆಹೋವ ದೇವರು ರಕ್ಷಿಸುವರು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.
22ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು: 23“ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’#1:23 ಯೆಶಾಯ 7:14 ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.
24ಯೋಸೇಫನು ನಿದ್ದೆಯಿಂದ ಎದ್ದ ಮೇಲೆ, ಕರ್ತನ ದೂತನು ಆಜ್ಞಾಪಿಸಿದಂತೆ ಮರಿಯಳನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. 25ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.

Uwcholeuo

Rhanna

Copi

None

Eisiau i'th uchafbwyntiau gael eu cadw ar draws dy holl ddyfeisiau? Cofrestra neu mewngofnoda