YouVersion Logo
Search Icon

ಯೋಯೇಲ 1

1
1ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು:
ಮಿಡತೆಗಳಿಂದಾದ ಹಾನಿ
2ಹಿರಿಯರೇ, ಇದನ್ನು ಕೇಳಿರಿ:
ದೇಶದ ನಿವಾಸಿಗಳೇ, ಕಿವಿಗೊಡಿರಿ.
ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ
ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?
3ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ,
ಅವರು ತಮ್ಮ ಮಕ್ಕಳಿಗೆ ತಿಳಿಸಲಿ,
ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ.
4ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು
ಗುಂಪುಮಿಡತೆ ತಿಂದುಬಿಟ್ಟಿತು.
ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು,
ಕುದುರೆಮಿಡತೆ ತಿಂದುಬಿಟ್ಟಿತು.
ಕುದುರೆಮಿಡತೆ ಬಿಟ್ಟಿದ್ದನ್ನು
ಕಂಬಳಿಮಿಡತೆ ತಿಂದುಬಿಟ್ಟಿತು.
5ಅಮಲೇರಿದವರೇ, ಎಚ್ಚೆತ್ತು ಅಳಿರಿ;
ದ್ರಾಕ್ಷಾರಸ ಕುಡಿಯುವವರೆಲ್ಲರೇ,
ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ;
ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ.
6ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು.
ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ;
ಅದರ ಕೋರೆಗಳು ಸಿಂಹದ ಹಲ್ಲುಗಳು,
ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ.
7ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ,
ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ.
ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ.
ಅದರ ಕೊಂಬೆಗಳು ಬಿಳುಪಾದವು.
8ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ,
ಕನ್ಯೆಯ ಹಾಗೆ ಪ್ರಲಾಪಿಸು.
9ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ
ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ.
ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ.
10ಹೊಲವು ಹಾಳಾಗಿದೆ;
ಭೂಮಿಯು ಒಣಗಿದೆ,
ಧಾನ್ಯವು ನಾಶವಾಗಿದೆ;
ಹೊಸ ದ್ರಾಕ್ಷಾರಸವು ಒಣಗಿದೆ;
ಎಣ್ಣೆ ತೀರಿಹೋಗಿದೆ.
11ರೈತರೇ, ರೋದಿಸಿರಿ,
ತೋಟಗಾರರೇ, ಪರಿತಪಿಸಿರಿ;
ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ;
ಏಕೆಂದರೆ ಹೊಲದ ಬೆಳೆ ನಾಶವಾಗಿದೆ.
12ದ್ರಾಕ್ಷಾಲತೆ ಒಣಗಿದೆ;
ಅಂಜೂರದ ಗಿಡ ಬಾಡಿ ಹೋಗಿದೆ;
ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ.
ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
ಪ್ರಲಾಪಕ್ಕೆ ಕರೆ
13ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ.
ಬಲಿಪೀಠದ ಸೇವಕರೇ, ಗೋಳಾಡಿರಿ.
ನನ್ನ ದೇವರ ಸೇವಕರೇ,
ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ.
ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ
ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ.
14ಪವಿತ್ರ ಉಪವಾಸವನ್ನು ಘೋಷಿಸಿರಿ.
ಪವಿತ್ರ ಸಭೆಯನ್ನು ಕರೆಯಿರಿ.
ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ
ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ,
ಯೆಹೋವ ದೇವರಿಗೆ ಮೊರೆಯಿಡಿರಿ.
15ಆ ದಿನ ಭಯಂಕರವಾದದ್ದು!
ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ.
ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.
16ನಮ್ಮ ಕಣ್ಣೆದುರೇ
ಆಹಾರವು ಹಾಳಾಯಿತಲ್ಲಾ.
ಸಂತೋಷವೂ ಉಲ್ಲಾಸವೂ
ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ?
17ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ.
ಉಗ್ರಾಣಗಳು ನಾಶವಾಗಿವೆ.
ಕಣಜಗಳು ಕುಸಿದುಬಿದ್ದಿವೆ.
ಏಕೆಂದರೆ ಧಾನ್ಯವು ಒಣಗಿದೆ.
18ಪಶುಗಳು ನರಳುತ್ತವೆ.
ದನದ ಹಿಂಡುಗಳು ಕಳವಳಗೊಂಡಿವೆ.
ಏಕೆಂದರೆ ಅವುಗಳಿಗೆ ಮೇವು ಇಲ್ಲ;
ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ.
19ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ.
ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ;
ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.
20ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ.
ನೀರಿನ ಹೊಳೆಗಳು ಬತ್ತಿ ಹೋಗಿವೆ.
ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.

Currently Selected:

ಯೋಯೇಲ 1: KSB

Highlight

Share

Copy

None

Want to have your highlights saved across all your devices? Sign up or sign in