YouVersion Logo
Search Icon

ಮೀಕ 1

1
ಇಸ್ರೇಲ್ ಮತ್ತು ಸಮಾರ್ಯವು ಶಿಕ್ಷಿಸಲ್ಪಡಬೇಕು
1ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.
2ಎಲ್ಲಾ ಜನರೇ, ಕೇಳಿರಿ!
ಭೂಮಿಯೂ ಅದರಲ್ಲಿರುವವರೆಲ್ಲರೂ ಕೇಳಿರಿ!
ನನ್ನ ಒಡೆಯನಾದ ಯೆಹೋವನು ತನ್ನ ಪವಿತ್ರ ಆಲಯದಿಂದ ಬರುವನು.
ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
3ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವುದನ್ನು ನೋಡಿರಿ.
ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
4ಬೆಂಕಿಯಲ್ಲಿ ಮೇಣವು ಕರಗುವಂತೆ
ಬೆಟ್ಟಗಳು ಆತನ ಪಾದದಡಿಯಿಂದ ಕರಗಿಹೋಗುತ್ತವೆ.
ತಗ್ಗುಗಳು ಇಬ್ಭಾಗವಾಗಿ ನೀರಿನಂತೆ
ಕಡಿದಾದ ಸ್ಥಳದಿಂದ ಹರಿದುಹೋಗುತ್ತವೆ.
5ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ,
ಇಸ್ರೇಲರ ದ್ರೋಹಗಳೇ!
ಪಾಪಕ್ಕೆ ಕಾರಣ ಸಮಾರ್ಯವೇ
ಯಾಕೋಬು ಪಾಪಮಾಡಿದ್ದಕ್ಕೆ ಕಾರಣವೇನು?
ಸಮಾರ್ಯವೇ ಕಾರಣ.
ಯೆಹೂದದ ಎತ್ತರವಾದ ಸ್ಥಳ ಯಾವುದು?#1:5 ಎತ್ತರವಾದ ಸ್ಥಳ ಪೂಜಾಸ್ಥಳ.
ಅದೇ ಜೆರುಸಲೇಮ್.
6ಆದ್ದರಿಂದ ನಾನು ಸಮಾರ್ಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವೆನು.
ಅದು ದ್ರಾಕ್ಷಿಬಳ್ಳಿ ನೆಡಲು ಸಿದ್ಧವಾಗುವುದು.
ಸಮಾರ್ಯದ ಕಲ್ಲುಗಳನ್ನೆಲ್ಲಾ ತಗ್ಗಿಗೆ ನೂಕಿಬಿಡುವೆನು;
ಆಗ ಅಲ್ಲಿ ಕೇವಲ ಅಸ್ತಿವಾರಗಳು ಕಾಣುವವು.
7ಆಕೆಯ ವಿಗ್ರಹಗಳೆಲ್ಲಾ ಒಡೆದು ಪುಡಿಮಾಡಲ್ಪಡುವವು.
ಆಕೆಯ ಸೂಳೆತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು.
ಆಕೆಯ ಸುಳ್ಳುದೇವರ ವಿಗ್ರಹಗಳನ್ನೆಲ್ಲಾ ನಾಶಮಾಡುವೆನು.
ಯಾಕೆಂದರೆ ಸಮಾರ್ಯ ನನಗೆ ಅಪನಂಬಿಗಸ್ತಳಾಗಿ ಧನಿಕಳಾದಳು.
ನನಗೆ ನಂಬಿಗಸ್ತರಲ್ಲದವರು
ಆಕೆಯಿಂದ ಅದನ್ನು ಕಸಿದುಕೊಳ್ಳುವರು.
ಮೀಕನ ಮಹಾ ದುಃಖ
8ಮುಂದೆ ಸಂಭವಿಸುವ ಘಟನೆಗಳ ಬಗ್ಗೆ ನಾನು ಬಹಳ ದುಃಖಿತನಾಗಿದ್ದೇನೆ.
ನಾನು ಬಟ್ಟೆಯನ್ನಾಗಲಿ ಚಪ್ಪಲಿಯನ್ನಾಗಲಿ ಹಾಕಿಕೊಳ್ಳದೇ ಹೋಗುವೆನು.
ನಾಯಿಯಂತೆ ಅಳುವೆನು,
ಪಕ್ಷಿಯಂತೆ ಗೋಳಾಡುವೆನು.
9ಸಮಾರ್ಯದ ಗಾಯವು ವಾಸಿಯಾಗದು.
ಆಕೆಯ ರೋಗವು (ಪಾಪ) ಯೆಹೂದಕ್ಕೆ ಹಬ್ಬಿಯದೆ.
ಅದು ನನ್ನ ಜನರ ಪಟ್ಟಣದ ಹೆಬ್ಬಾಗಿಲಿನವರೆಗೆ ಹೋಗಿದೆ.
ಜೆರುಸಲೇಮಿನ ತನಕ ಪಸರಿಸಿಯದೆ.
10ಇದನ್ನು ಗತ್‌ನಲ್ಲಿ ತಿಳಿಸಬೇಡಿ.
ಅಕ್ಕೊದಲ್ಲಿ ಅಳಬೇಡಿರಿ.
ಬೆತ್ ಒಫ್ರದ ಧೂಳಿನಲ್ಲಿ ಹೊರಳಾಡಿರಿ.
11ಶಾಫೀರ್‌ನಲ್ಲಿ ವಾಸಿಸುವವರೇ,
ಬೆತ್ತಲೆಯಾಗಿ ನಾಚಿಕೆಯಿಂದ ನಡೆಯಿರಿ.
ಚಾನಾನ್‌ನಲ್ಲಿ ವಾಸಿಸುವವರು
ಹೊರಗೆ ಬರುವದಿಲ್ಲ.
ಬೇತೇಚೆಲಿನ ಜನರು ಅಳುವರು,
ನಿಮಗೆ ಅವರು ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವರು.
12ಮಾರೊತ್‌ನಲ್ಲಿ ವಾಸಿಸುವ ಜನರು ಬಲಹೀನರಾಗಿದ್ದಾರೆ.
ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ.
ಯಾಕೆಂದರೆ ಜೆರುಸಲೇಮಿನ ನಗರ ದ್ವಾರದ ಬಳಿಗೆ
ಯೆಹೋವನಿಂದ ಆಪತ್ತು ಬಂದಿದೆ.
13ಲಾಕೀಷಿನ ಸ್ತ್ರೀಯೇ,
ವೇಗವಾಗಿ ಓಡುವ ಕುದುರೆಯನ್ನು ನಿನ್ನ ಬಂಡಿಗೆ ಬಿಗಿ.
ಚೀಯೋನಿನ ಪಾಪವು ಲಾಕೀಷಿನಲ್ಲಿ ಪ್ರಾರಂಭವಾಯಿತು.
ಯಾಕೆಂದರೆ ನೀನು ಇಸ್ರೇಲಿನ ಪಾಪವನ್ನು ಅನುಸರಿಸಿದಿ.
14ಆದ್ದರಿಂದ ಗತ್‌ನಲ್ಲಿರುವ ಮೋರೆಷತ್‌ಗೆ
ಬೀಳ್ಕೊಡುವ ಕಾಣಿಕೆಗಳನ್ನು ಕೊಡು.
ಅಕ್ಜೀಬಿನ ಕುಟುಂಬಗಳು
ಇಸ್ರೇಲ್ ಅರಸರನ್ನು ಮೋಸಪಡಿಸುವವು.
15ಮಾರೇಷದಲ್ಲಿ ವಾಸಿಸುವ ಜನರೇ,
ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು.
ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು.
ಇಸ್ರೇಲಿನ ಮಹಿಮೆಯು (ದೇವರ)
ಅದುಲ್ಲಾಮಿಗೆ ಬರುವದು.
16ನಿನ್ನ ಕೂದಲನ್ನು ಬೋಳಿಸು;
ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ.
ಗಿಡುಗನಂತೆ ನಿನ್ನ ತಲೆ ಬೋಳಾಗಲಿ. ನಿನ್ನ ದುಃಖವನ್ನು ಪ್ರದರ್ಶಿಸು.
ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಪಡುವರು.

Currently Selected:

ಮೀಕ 1: KERV

Highlight

Share

Copy

None

Want to have your highlights saved across all your devices? Sign up or sign in