YouVersion Logo
Search Icon

ಯೋವೇಲ 1

1
ಮಿಡತೆಗಳು ಬೆಳೆಯನ್ನು ನಾಶಮಾಡುವವು
1ಪೆತೂವೇಲನ ಮಗನಾದ ಯೋವೇಲನು ಯೆಹೋವನಿಂದ ಈ ಸಂದೇಶವನ್ನು ಪಡೆದನು.
2ನಾಯಕರೇ, ಈ ಸಂದೇಶಕ್ಕೆ ಕಿವಿಗೊಡಿರಿ.
ದೇಶದಲ್ಲಿ ವಾಸಿಸುವ ಎಲ್ಲಾ ಜನರೇ, ನನ್ನ ಮಾತುಗಳನ್ನು ಆಲೈಸಿರಿ.
ನಿಮ್ಮ ಜೀವಮಾನಕಾಲದಲ್ಲಿ ಇಂಥಾ ಸಂಗತಿ ಎಂದಾದರೂ ಸಂಭವಿಸಿದೆಯೋ? ಇಲ್ಲ!
ನಿಮ್ಮ ತಂದೆಗಳ ಕಾಲದಲ್ಲಿಯಾದರೂ ಇಂಥಾ ಸಂಗತಿಗಳು ಸಂಭವಿಸಿದೆಯೋ? ಇಲ್ಲ!
3ಇವುಗಳನ್ನು ನೀವು ನಿಮ್ಮ ಮಕ್ಕಳಿಗೆ ತಿಳಿಸುವಿರಿ.
ಮತ್ತು ನಿಮ್ಮ ಮಕ್ಕಳು ಅವರ ಮಕ್ಕಳಿಗೆ ತಿಳಿಸುವರು.
ಮತ್ತು ನಿಮ್ಮ ಮೊಮ್ಮಕ್ಕಳು ಅವರ ನಂತರದ ಪೀಳಿಗೆಗೆ ತಿಳಿಸುವರು.
4ಚೂರಿ ಮಿಡತೆ ತಿಂದುಬಿಟ್ಟಿದ್ದನ್ನು
ಗುಂಪು ಮಿಡತೆ ತಿಂದಿತು.
ಗುಂಪು ಮಿಡತೆ ತಿಂದುಬಿಟ್ಟದ್ದನ್ನು
ಹಾರುವ ಮಿಡತೆ ತಿಂದಿತು.
ಹಾರುವ ಮಿಡತೆ ತಿಂದು ಉಳಿದದ್ದನ್ನು
ನಾಶಮಾಡುವ ಮಿಡತೆ ತಿಂದುಬಿಟ್ಟಿತು.
ಮಿಡತೆಗಳು ಆಗಮಿಸಿದವು
5ಅಮಲೇರಿದವರೇ, ಎಚ್ಚರಗೊಂಡು ಅಳಿರಿ.
ದ್ರಾಕ್ಷಾರಸವನ್ನು ಕುಡಿಯುವವರೇ, ಅಳಿರಿ.
ಯಾಕೆಂದರೆ ನಿಮ್ಮ ಸಿಹಿಯಾದ ದ್ರಾಕ್ಷಾರಸವು ಮುಗಿದುಹೋಯಿತು.
ಆ ದ್ರಾಕ್ಷಾರಸದ ಸವಿಯು ನಿಮಗೆ ಇನ್ನು ಸಿಗದು.
6ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು.
ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ.
ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು.
ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.
7ಆ ಮಿಡತೆಗಳು ನನ್ನ ದ್ರಾಕ್ಷಿತೋಟದ
ಹಣ್ಣುಗಳನ್ನೆಲ್ಲಾ ತಿಂದುಬಿಡುವವು.
ನನ್ನ ಅಂಜೂರದ ಮರಗಳನ್ನು ನಾಶಮಾಡುವವು.
ನನ್ನ ಮರಗಳ ತೊಗಟೆಗಳನ್ನು ಮಿಡತೆಗಳು ತಿಂದುಬಿಡುವವು.
ಅದರ ಕೊಂಬೆಗಳು ಬಿಳುಪಾಗುವವು.
ಮರಗಳು ನಾಶವಾಗುವವು.
ಜನರು ಬೊಬ್ಬಿಡುತ್ತಾರೆ
8ಮದುಮಗನು ಸತ್ತುಹೋದಾಗ
ಮದುಮಗಳು ಗೋಳಾಡುವಂತೆ ನೀವು ಗೋಳಾಡಿರಿ.
9ಯಾಜಕರೇ, ಯೆಹೋವನ ಸೇವಕರೇ, ಗೋಳಾಡಿರಿ.
ಯಾಕೆಂದರೆ ಇನ್ನು ಮುಂದೆ ಯೆಹೋವನ ಆಲಯದಲ್ಲಿ ಪಾನ ಮತ್ತು ಧಾನ್ಯಾರ್ಪಣೆ ಇರದು.
10ಹೊಲಗದ್ದೆಗಳೆಲ್ಲಾ ನಾಶವಾದವು.
ಭೂಮಿಯೂ ಗೋಳಾಡುತ್ತಿರುವುದು.
ಯಾಕೆಂದರೆ ಧಾನ್ಯವು ನಾಶವಾದವು.
ಹೊಸ ದ್ರಾಕ್ಷಾರಸವು ಬತ್ತಿಹೋಯಿತು.
ಎಣ್ಣೆಯು ಇಲ್ಲದೆಹೋಯಿತು.
11ರೈತರೇ, ದುಃಖಿಸಿರಿ,
ದ್ರಾಕ್ಷಿತೋಟ ಮಾಡಿದವರೇ, ಗಟ್ಟಿಯಾಗಿ ಬೊಬ್ಬಿಡಿರಿ.
ಗೋದಿಗಾಗಿಯೂ, ಜವೆಗೋದಿಗಾಗಿಯೂ ಅಳಿರಿ.
ಯಾಕೆಂದರೆ ಬೆಳೆಯು ನಾಶವಾಯಿತು.
12ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ
ಮತ್ತು ಅಂಜೂರದ ಮರವು ಸಾಯುತ್ತಲಿದೆ.
ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ,
ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ.
ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
13ಯಾಜಕರೇ, ನೀವು ನಿಮ್ಮ ಶೋಕವಸ್ತ್ರವನ್ನು ಧರಿಸಿ ಗಟ್ಟಿಯಾಗಿ ರೋಧಿಸಿರಿ.
ವೇದಿಕೆಯಲ್ಲಿ ಸೇವೆಮಾಡುವವರೇ, ಗಟ್ಟಿಯಾಗಿ ರೋಧಿಸಿರಿ.
ನನ್ನ ದೇವರ ಸೇವಕರೇ, ನೀವು ನಿಮ್ಮ ಶೋಕವಸ್ತ್ರಗಳಲ್ಲಿಯೇ ನಿದ್ರೆಮಾಡಿರಿ.
ಯಾಕೆಂದರೆ ಇನ್ನು ದೇವಾಲಯದಲ್ಲಿ ಧಾನ್ಯ ಮತ್ತು ಪಾನಸಮರ್ಪಣೆ ಇಲ್ಲ.
ಮಿಡತೆಗಳ ಭಯಂಕರ ನಾಶನ
14ಉಪವಾಸ ದಿನವನ್ನು ಗೊತ್ತುಪಡಿಸಿರಿ. ಆ ದಿನಕ್ಕಾಗಿ ಜನರನ್ನು ಒಟ್ಟುಗೂಡಿಸಿರಿ. ದೇಶದಲ್ಲಿ ವಾಸವಾಗಿರುವ ನಾಯಕರುಗಳೆಲ್ಲರನ್ನೂ ಜನರನ್ನೂ ಒಟ್ಟುಗೂಡಿಸಿರಿ; ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಅವರನ್ನೆಲ್ಲ ಪ್ರಾರ್ಥನೆಗಾಗಿ ಕರೆದುಕೊಂಡು ಬನ್ನಿರಿ.
15ಶೋಕಿಸಿರಿ. ಯಾಕೆಂದರೆ ಯೆಹೋವನ ಮಹಾದಿನವು ಹತ್ತಿರ ಬಂತು. ಆ ಸಮಯದಲ್ಲಿ ಸರ್ವಶಕ್ತನಾದ ದೇವರ ಸನ್ನಿಧಾನದಿಂದ ದಂಡನೆಯು ಬರುವುದು. 16ನಮಗೆ ಆಹಾರವು ಇಲ್ಲದೆ ಹೋಯಿತು. ಆನಂದವೂ ಸಂತೋಷವೂ ನಮ್ಮ ದೇವಾಲಯದಿಂದ ಹೊರಟುಹೋದವು. 17ನಾವು ಬೀಜ ಬಿತ್ತಿದೆವು. ಆದರೆ ಅವು ಒಣಗಿ, ಸತ್ತು ಈಗ ನೆಲದ ಮೇಲೆ ಬಿದ್ದಿವೆ. ನಮ್ಮ ಗಿಡಗಳೆಲ್ಲಾ ಒಣಗಿ ಸತ್ತಿವೆ. ನಮ್ಮ ಉಗ್ರಾಣವು ಬರಿದಾಗಿದ್ದು ಬೀಳುತ್ತಲಿದೆ.
18ಪ್ರಾಣಿಗಳು ಹಸಿವಿನಿಂದ ನರಳಾಡುತ್ತಿವೆ. ಪ್ರಾಣಿಗಳ ಹಿಂಡು ಗಲಿಬಿಲಿಗೊಂಡು ಅಡ್ಡಾಡುತ್ತವೆ. ಅವುಗಳಿಗೆ ತಿನ್ನಲು ಹುಲ್ಲು ಇಲ್ಲ. ಕುರಿಗಳು ಸಾಯುತ್ತಿವೆ. 19ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು. 20ಕಾಡುಪ್ರಾಣಿಗಳೂ ಬಾಯಾರಿ ನಿನ್ನ ಕಡೆಗೆ ನೋಡುತ್ತಿವೆ. ನೀರಿನ ತೊರೆಗಳು ಬತ್ತಿಹೋಗಿವೆ. ನೀರೇ ಇಲ್ಲ. ನಮ್ಮ ಹಸಿರು ಹುಲ್ಲುಗಾವಲು ಬೆಂಕಿಯ ದೆಸೆಯಿಂದ ಮರುಭೂಮಿಯಾಗಿರುತ್ತದೆ.

Currently Selected:

ಯೋವೇಲ 1: KERV

Highlight

Share

Copy

None

Want to have your highlights saved across all your devices? Sign up or sign in