YouVersion Logo
Search Icon

ಆದಿ 39

39
ಯೋಸೇಫನು ಮತ್ತು ಪೋಟೀಫರನ ಹೆಂಡತಿ
1ಯೋಸೇಫನನ್ನು ಕ್ರಯಕ್ಕೆ ತೆಗೆದುಕೊಂಡು ಹೋಗಿದ್ದ ಇಷ್ಮಾಯೇಲರು ಐಗುಪ್ತ ದೇಶಕ್ಕೆ ಹೋದರು. ಅಲ್ಲಿ ಒಬ್ಬ ಐಗುಪ್ತ್ಯನು ಅವನನ್ನು ಅವರಿಂದ ಕ್ರಯಕ್ಕೆ ತೆಗೆದುಕೊಂಡನು. ಇವನು ಫರೋಹನ ಉದ್ಯೋಗಸ್ಥನು, ಐಗುಪ್ತರ ದಂಡಿನ ಮುಖ್ಯಸ್ಥನು ಆಗಿದ್ದ ಪೋಟೀಫರನು ಎಂಬುವನಾಗಿದ್ದನು. 2ಯೆಹೋವನು ಯೋಸೇಫನ ಸಂಗಡ ಇದ್ದುದರಿಂದ ಅವನು ಕೃತಾರ್ಥನಾದನು. ಐಗುಪ್ತನಾದ ತನ್ನ ದಣಿಯ ಮನೆಯೊಳಗೆ ಯೋಸೇಫನು ಸೇವಕನಾದನು. 3ಯೆಹೋವನು ಯೋಸೇಫನ ಸಂಡಗವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದನು. 4ಆದುದರಿಂದ ಅವನ ದಣಿಯು ಯೋಸೇಫನ ಮೇಲೆ ದಯೆ ಇಟ್ಟು, ಅವನನ್ನು ಸ್ವಂತ ಸೇವಕನನ್ನಾಗಿ ನೇಮಿಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು. 5ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ, ಆಸ್ತಿಯ ಮೇಲೆಯೂ ಮೇಲ್ವಿಚಾರಕನನ್ನಾಗಿ ಇಟ್ಟಿದ್ದರಿಂದ ಯೆಹೋವನು ಯೋಸೇಫನ ನಿಮಿತ್ತವಾಗಿ ಆ ಐಗುಪ್ತನ ಮನೆಯನ್ನು ಅಭಿವೃದ್ಧಿಗೆ ತಂದನು. ಮನೆಯಲ್ಲಾಗಲಿ, ಹೊಲದಲ್ಲಾಗಲಿ ಅವನಿಗಿದ್ದ ಎಲ್ಲಾದರ ಮೇಲೆ ಯೆಹೋವನ ಆಶೀರ್ವಾದವುಂಟಾಯಿತು.
6ಅವನು ತನ್ನ ಆಸ್ತಿಯನ್ನೆಲ್ಲಾ ಯೋಸೇಫನ ವಶಕ್ಕೆ ಒಪ್ಪಿಸಿದನು. ಇವನು ತನ್ನ ಬಳಿಯಲ್ಲೇ ಇದ್ದುದರಿಂದ ತಾನು ತಿನ್ನುವ ಆಹಾರ ಒಂದನ್ನೇ ಹೊರತು ಬೇರೆ ಯಾವ ವಿಷಯದಲ್ಲೂ ಚಿಂತಿಸುತ್ತಿರಲಿಲ್ಲ. ಯೋಸೇಫನು ರೂಪವಂತನೂ, ಸುಂದರನೂ ಆಗಿದ್ದನು. 7ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು.
8ಆದರೆ ಅವನು ಒಪ್ಪದೆ, “ನನ್ನ ದಣಿಯು ತನ್ನ ಆಸ್ತಿಯನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಿರುವುದಲ್ಲದೆ ನಾನು ಇಲ್ಲಿ ಇರುವುದರಿಂದ ಮನೆಯೊಳಗೆ ನಡೆಯುವ ಯಾವ ಕೆಲಸವನ್ನೂ ಚಿಂತಿಸದೇ ಇದ್ದಾನೆ. 9ಈ ಮನೆಯಲ್ಲಿ ನನಗಿಂತ ಯಾರೂ ದೊಡ್ಡವರಲ್ಲ. ನೀನು ಅವನ ಧರ್ಮಪತ್ನಿಯಾದುದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ. ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಟ ಕಾರ್ಯವನ್ನು ಮಾಡಿ ದೇವರಿಗೆ ವಿರೋಧವಾಗಿ ಹೇಗೆ ಪಾಪ ಮಾಡಲಿ?” ಎಂದು ತನ್ನ ದಣಿಯ ಹೆಂಡತಿಗೆ ಉತ್ತರ ಹೇಳಿದನು. 10ಅವಳು ಯೋಸೇಫನ ಸಂಗಡ ಪ್ರತಿದಿನವೂ ಈ ಮಾತನ್ನು ಆಡಿದ್ದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯನ್ನು ಮೋಹಿಸುವುದಕ್ಕಾಗಲಿ, ಆಕೆಯ ಬಳಿಯಲ್ಲಿರುವುದಕ್ಕಾಗಲೀ ಒಪ್ಪಿಕೊಳ್ಳಲೇ ಇಲ್ಲ.
11ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯೊಳಗೆ ಯಾವ ಸೇವಕರೂ ಇರಲಿಲ್ಲ. 12ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನೊಂದಿಗೆ ಸಂಗಮಿಸಲು ಬಾ” ಎಂದು ಕರೆಯಲು, ಅವನು ತನ್ನ ಬಟ್ಟೆಯನ್ನು ಆಕೆಯ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಹೊರಗೆ ಓಡಿಹೋದನು.
13ಅವನು ತನ್ನ ಬಟ್ಟೆಯನ್ನು ಅವಳ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದದ್ದನ್ನು ಆಕೆಯು ನೋಡಿ, 14ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನನ್ನ ಯಜಮಾನನು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾನೆ. ಅವನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು. 15ನಾನು ಕೂಗುವುದನ್ನು ಕೇಳಿ ಅವನು ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದಳು.
16ತನ್ನ ಯಜಮಾನನು ಮನೆಗೆ ಬರುವ ತನಕ ಆಕೆಯು ಆ ಬಟ್ಟೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿದ್ದಳು. 17ಯಜಮಾನನು ಬಂದಾಗ ಆಕೆಯು ಅದೇ ಮಾತನ್ನು ಹೇಳಿ ಅವನಿಗೆ, “ನೀನು ನಮ್ಮಲ್ಲಿ ಸೇರಿಸಿಕೊಂಡ ಆ ಇಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಬಳಿಗೆ ಬಂದನು. 18ನಾನು ಜೋರಾಗಿ ಕೂಗಿಕೊಂಡಾಗ ಅವನು ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದು ಹೇಳಿದಳು.
19ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬುದಾಗಿ ತನ್ನ ಹೆಂಡತಿ ಹೇಳಿದ ಮಾತುಗಳನ್ನು ಯೋಸೇಫನ ದಣಿಯು ಕೇಳಿದಾಗ ಬಹಳ ಸಿಟ್ಟುಗೊಂಡನು. 20ಆಗ ಯೋಸೇಫನ ದಣಿಯು ಅವನನ್ನು ಹಿಡಿದು ಅರಸನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿಸಿದನು. ಅಲ್ಲಿ ಯೋಸೇಫನು ಸೆರೆಯಲ್ಲಿ ಇರಬೇಕಾಯಿತು.
21ಆದರೆ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯನ್ನಿಟ್ಟು ಸೆರೆಮನೆಯ ಯಜಮಾನನಿಂದ ದಯೆ ದೊರಕುವಂತೆ ಮಾಡಿದನು. 22ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಒಪ್ಪಿಸಿ ಅವನನ್ನು ಮೇಲ್ವಿಚಾರಕನನ್ನಾಗಿ ಮಾಡಿದನು. ಅವರು ಮಾಡಬೇಕಾದ ಎಲ್ಲ ಕೆಲಸವನ್ನು ಯೋಸೇಫನೇ ಮಾಡಿಸುತ್ತಿದ್ದನು. 23ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಸಫಲಗೊಳಿಸಿದ್ದರಿಂದ ಅವನ ವಶಕ್ಕೆ ಒಪ್ಪಿಸಿದ್ದ ಯಾವ ವಿಷಯದ ಕುರಿತಾಗಿಯೂ ಸೆರೆಮನೆಯ ಯಜಮಾನನು ಯೋಚಿಸದೆ ನಿಶ್ಚಿಂತನಾಗಿದ್ದನು.

Currently Selected:

ಆದಿ 39: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy