YouVersion Logo
Search Icon

ಯೆಹೆ 3

3
1ಆತನು ನನಗೆ, “ನರಪುತ್ರನೇ, ನಿನಗೆ ಸಿಕ್ಕಿದ ಈ ಸುರುಳಿಯನ್ನು ತಿನ್ನು; ಅನಂತರ ನೀನು ಹೋಗಿ (ಇದರಲ್ಲಿನ ಸಂಗತಿಗಳನ್ನು) ಇಸ್ರಾಯೇಲ್ ವಂಶದವರಿಗೆ ಸಾರು” ಎಂದು ಅಪ್ಪಣೆಕೊಟ್ಟನು. 2ನಾನು ಬಾಯಿ ತೆರೆದೆ, ಆತನು ಆ ಸುರುಳಿಯನ್ನು ನನಗೆ ತಿನ್ನಿಸಿದನು. 3ಆಗ ಆತನು ನನಗೆ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ” ಎಂದು ಹೇಳಲು ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಿಯಲ್ಲಿ ಜೇನಿನಂತೆ ಸಿಹಿಯಾಗಿತ್ತು.
ಪ್ರವಾದಿಗೆ ಅವಶ್ಯಕವಾದ ಧೈರ್ಯ
4ಆಮೇಲೆ ಆತನು ನನಗೆ ಹೀಗೆಂದನು, “ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು. 5ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಬಳಿಗೆ ಕಳುಹಿಸುತ್ತೇನೆಯೇ ಹೊರತು ಕಷ್ಟಕರವಾದ ಅನ್ಯಭಾಷೆಯ ಜನರ ಬಳಿಗೆ ಕಳುಹಿಸುವುದಿಲ್ಲ. 6ಹೌದು, ನಿನಗೆ ಅರ್ಥವಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ನಾನಾ ಜನಾಂಗಗಳ ಬಳಿಗೆ ನಿನ್ನನು ಕಳುಹಿಸುವುದಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ ಅವರಾದರೂ ನಿಶ್ಚಯವಾಗಿ ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. 7ಇಸ್ರಾಯೇಲ್ ವಂಶದವರೋ ನಿನಗೆ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ಅವರೆಲ್ಲರೂ ನಾಚಿಕೆಗೆಟ್ಟವರೂ, ಹಟಮಾರಿಗಳು ಆಗಿದ್ದಾರೆ. 8ಇಗೋ, ನಾನು ಅವರ ಕಠಿಣ ಹೃದಯಕ್ಕೆ ವಿರುದ್ಧವಾಗಿ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ. 9ನಿನ್ನ ನಿರ್ಧಾರವನ್ನು ಕಗ್ಗಲ್ಲಿಗಿಂತ ಗಟ್ಟಿಯಾದ ವಜ್ರದಂತೆ ಮಾಡಿದ್ದೇನೆ; ಅವರು ತಿರುಗಿ ಬೀಳುವ ಮನೆತನದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಹೆದರದಿರು.” 10ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಹೃದಯದಲ್ಲಿಟ್ಟುಕೋ. 11ಸೆರೆಯಾಗಿರುವ ನಿನ್ನ ಸ್ವಂತ ಜನರ ಬಳಿಗೆ ಹೋಗಿ ಅವರು ಕೇಳಿದರೂ, ಕೇಳದೆ ಹೋದರೂ ಅವರನ್ನು ಉದ್ದೇಶಿಸಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಅವರಿಗೆ ಸಾರು.”
ಪ್ರವಾದಿಯು ತನ್ನ ಉದ್ಯೋಗ ಸ್ಥಳವನ್ನು ತಲುಪಿದ್ದು
12ಆಮೇಲೆ ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಗಲಾಗಿ, “ಮಹಿಮೆಯುಳ್ಳ ಯೆಹೋವನಿಗೆ ಆತನ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ” ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು. 13ಜೀವಿಗಳ ರೆಕ್ಕೆಗಳು ಒಂದಕ್ಕೊಂದು ಬಡಿಯುವ ಸಪ್ಪಳ, ಅವುಗಳ ಪಕ್ಕದಲ್ಲಿ ಗರಗರನೆ ತಿರುಗುವ ಚಕ್ರಗಳ ಸದ್ದು, ಹೀಗೆ ಭೂಕಂಪದಂಥ ಮಹಾಶಬ್ದವು ನನ್ನ ಕಿವಿಗೆ ಬಿತ್ತು. 14ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಯಿತು. ನಾನು ಚಿಂತೆಯಿಂದ ಮನಸ್ತಾಪಪಡುತ್ತಾ ಹೋದೆನು. ಆದರೆ ಯೆಹೋವನ ಕೈ ನನ್ನ ಮೇಲೆ ಬಲವಾಗಿತ್ತು. 15ಆಗ ಸೆರೆಯಾಗಿ ಒಯ್ಯಲ್ಪಟ್ಟು ಕೆಬಾರ್ ನದಿಯ ಹತ್ತಿರ ತೇಲ್ ಆಬೀಬಿನಲ್ಲಿ ವಾಸವಾಗಿದ್ದವರ ಬಳಿಗೆ ಬಂದು, ಅವರು ಕುಳಿತುಕೊಂಡಿದ್ದ ಸ್ಥಳದಲ್ಲಿಯೇ ಕುಳಿತುಕೊಂಡೆನು; ಏಳು ದಿನಗಳವರೆಗೂ ಅಲ್ಲೇ ಅವರ ಮಧ್ಯದಲ್ಲಿ ಸ್ತಬ್ಧನಾಗಿ ಉಳಿದುಬಿಟ್ಟೆನು.
ಕಾವಲುಗಾರನಾಗಿ ನೇಮಕ
16ಏಳು ದಿನಗಳಾದ ಮೇಲೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, 17“ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು. 18ನಾನು ದುಷ್ಟನಿಗೆ, ‘ನೀನು ಖಂಡಿತವಾಗಿ ಸಾಯುವೆ’ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ, ಅವನು ತನ್ನ ಕೆಟ್ಟಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವುದು; ಅವನ ಮರಣಕ್ಕೆ ನೀನು ಹೊಣೆಯಾಗುವೆ. 19ನೀನು ದುಷ್ಟನನ್ನು ಎಚ್ಚರಿಸಿದರೂ, ಅವನು ತನ್ನ ದುಷ್ಟತನವನ್ನೂ, ಕೆಟ್ಟಮಾರ್ಗವನ್ನೂ ಬಿಡದೆಹೋದರೆ ತನ್ನ ಅಪರಾಧದಿಂದಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. 20ಇದಲ್ಲದೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯಮಾಡುವವನಾದರೆ, ಆಗ ನಾನು ಅವನ ಮುಂದೆ ಅಡಚಣೆಯನ್ನು ಒಡ್ಡುವೆನು, ಎಡವಿದರೆ ಅವನು ಸಾಯುವನು; ನೀನು ಅವನನ್ನು ಎಚ್ಚರಿಸದೆ ಹೋದಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಒಳ್ಳೆಕಾರ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಮರಣಕ್ಕೆ ನೀನು ಹೊಣೆಯಾಗುವೆ. 21ನೀನು ನೀತಿವಂತನನ್ನು ಪಾಪ ಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆ ಎಚ್ಚರಗೊಂಡ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.”
ಪ್ರವಾದಿಯ ಬಾಯಿಗೆ ಬೀಗ
22ಅದೇ ಸ್ಥಳದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಆತನು ನನಗೆ, “ನೀನು ಎದ್ದು, ಬಯಲು ಸೀಮೆಗೆ ಹೊರಡು, ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು” ಎಂದು ಹೇಳಿದನು. 23ನಾನು ಎದ್ದು ಬಯಲು ಸೀಮೆಗೆ ಹೊರಟುಹೋದೆನು. ಯೆಹೋವನ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ಅಡ್ಡಬಿದ್ದೆನು. 24ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿದ ಮೇಲೆ ಆತನು ನನಗೆ ಹೀಗೆ ಹೇಳಿದನು, “ನೀನು ಹೋಗಿ ನಿನ್ನ ಮನೆಯೊಳಗೆ ಅಡಗಿಕೋ. 25ನರಪುತ್ರನೇ, ಇಗೋ, ನಿನ್ನ ಸ್ವಜನರು ನಿನ್ನನ್ನು ಬಂಧಿಸಿ ಕಟ್ಟುವರು, ನೀನು ಹೊರಗೆ ಸಂಚರಿಸಲು ಆಗುವುದಿಲ್ಲ. 26ಇದಲ್ಲದೆ ನಿನ್ನ ನಾಲಿಗೆಯು ಸೇದಿ ಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ನೀನು ಅವರನ್ನು ಖಂಡಿಸಲಾರೆ; ಅವರು ತಿರುಗಿ ಬೀಳುವ ಮನೆತನದವರಾಗಿದ್ದಾರೆ. 27ನಾನು ನಿನ್ನೊಡನೆ ಮತ್ತೆ ಮಾತನಾಡುವಾಗ ನಾನು ನಿನ್ನ ಬಾಯಿಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಹೇಳಬೇಕು; ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ; ಅವರು ತಿರುಗಿ ಬೀಳುವ ವಂಶದವರೇ.”

Currently Selected:

ಯೆಹೆ 3: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy