YouVersion Logo
Search Icon

ಆಮೋ 2

2
ಮೋವಾಬಿನ ಪಾಪಕ್ಕೆ ಆದ ದಂಡನೆ
1ಯೆಹೋವನು ಇಂತೆನ್ನುತ್ತಾನೆ,
“ಮೋವಾಬಿನವರು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಅದು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಬೂದಿಮಾಡಿತು.
2ನಾನು ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು,
ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡುವುದು.
ಭಟರು ಘೋಷಿಸಿ ಕೊಂಬೂದುವ ಯುದ್ಧದ ಕೋಲಾಹಲದಲ್ಲಿ,
ಮೋವಾಬು ಸಾಯುವುದು;
3ನಾನು ಅದರೊಳಗಿಂದ ಅಧಿಪತಿಯನ್ನು ಕಡಿದುಹಾಕಿ,
ಸಕಲ ರಾಜ್ಯಾಧಿಕಾರಿಗಳನ್ನೂ ಸಂಹರಿಸುವೆನು.”
ಇದು ಯೆಹೋವನ ನುಡಿ.
ಯೆಹೂದದ ಪಾಪಕ್ಕೆ ಆದ ದಂಡನೆ
4ಯೆಹೋವನು ಇಂತೆನ್ನುತ್ತಾನೆ,
“ಯೆಹೂದವು ಮೂರು ದ್ರೋಹಗಳನ್ನು,
ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಯೆಹೂದ್ಯರು ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿದರು.
ಆತನ ವಿಧಿಗಳನ್ನು ಕೈಕೊಳ್ಳಲಿಲ್ಲ.
ಅವರ ಪೂರ್ವಿಕರು ಹಿಂಬಾಲಿಸಿದ ಸುಳ್ಳುದೇವತೆಗಳು,
ಇವರನ್ನು ದಾರಿ ತಪ್ಪುವಂತೆ ಮಾಡಿದವು.
5ಆದಕಾರಣ ನಾನು ಯೆಹೂದದ ಮೇಲೆ ಬೆಂಕಿಯನ್ನು ಉರಿಸುವೆನು.
ಅದು ಯೆರೂಸಲೇಮಿನ ಅರಮನೆಗಳನ್ನು ನುಂಗಿಬಿಡುವುದು.”
ಇಸ್ರಾಯೇಲಿನ ಪಾಪಕ್ಕೆ ಆದ ದಂಡನೆ
6ಯೆಹೋವನು ಇಂತೆನ್ನುತ್ತಾನೆ,
“ಇಸ್ರಾಯೇಲರು ಮೂರು ದ್ರೋಹಗಳನ್ನು,
ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಇಸ್ರಾಯೇಲರು ನ್ಯಾಯವಂತನನ್ನು ಬೆಳ್ಳಿಗೆ,
ಒಂದು ಜೊತೆ ಕೆರದ ಸಾಲಕ್ಕಾಗಿ ದಿಕ್ಕಿಲ್ಲದವನನ್ನು ಮಾರಿದರು.
7ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ,
ದೀನರ ದಾರಿಗೆ ಅಡ್ಡ ಹಾಕುತ್ತಾರೆ.
ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.
8ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವು ಇಟ್ಟ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ;
ದಂಡಹಾಕಿಸಿಕೊಂಡವರು ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.
9ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು,
ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ,
ಅಲ್ಲೋನ್ ಮರದ ಹಾಗೆ ಬಲಿಷ್ಠವಾಗಿಯೂ ಇದ್ದರು.
ಆದರೂ ಮರದ ಮೇಲಿನ ಅದರ ಫಲವನ್ನು,
ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು.
10ಇಸ್ರಾಯೇಲ್ಯರೇ, ನೀವು ಅಮ್ಮೋನಿಯರ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು,
ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಪಾರುಮಾಡಿ,
ನಲ್ವತ್ತು ವರ್ಷ ಅರಣ್ಯದಲ್ಲಿ ನಿಮ್ಮನ್ನು ನಡೆಸಿದೆನು.
11ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ
ಮತ್ತು ನಿಮ್ಮ ಯುವಕರಲ್ಲಿ ಪ್ರತಿಷ್ಠಿತರನ್ನೂ ಎಬ್ಬಿಸಿದೆನು.
ಇಸ್ರಾಯೇಲಿನ ಜನರೇ,
ಇದು ಸತ್ಯವಲ್ಲವೋ?”
ಎಂದು ಯೆಹೋವನು ಅನ್ನುತ್ತಾನೆ.
12“ಆದರೆ ನೀವೋ ಪ್ರತಿಷ್ಠಿತರಿಗೆ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟಿರಿ
ಮತ್ತು ಪ್ರವಾದಿಗಳಿಗೆ ಪ್ರವಾದಿಸಬೇಡಿರೆಂದು ಆಜ್ಞಾಪಿಸಿದ್ದಿರಿ.
13ಇಗೋ, ನೀವು ನಿಂತಿರುವಲ್ಲಿಯೇ ನಿಮ್ಮನ್ನು ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ
ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
14ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳಲಾರನು.
ಬಲಿಷ್ಠನು ತನ್ನ ಬಲವನ್ನು, ತನ್ನ ಪ್ರಾಣವನ್ನು ಬಲಪಡಿಸಿಕೊಳ್ಳಲಾರನು.
ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
15ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲಲಾರನು,
ಪಾದತ್ವರಿತನು ತಪ್ಪಿಸಿಕೊಳ್ಳಲಾರನು,
ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
16ಆ ದಿನದಲ್ಲಿ ಶೂರರಲ್ಲಿ ಧೀರನಾದವನು
ಬೆತ್ತಲೆಯಾಗಿ ಓಡಿಹೋಗುವನು” ಇದು ಯೆಹೋವನ ನುಡಿ.

Currently Selected:

ಆಮೋ 2: IRVKan

Highlight

Share

Copy

None

Want to have your highlights saved across all your devices? Sign up or sign in