YouVersion Logo
Search Icon

1 ಸಮು 13

13
ಇಸ್ರಾಯೇಲ್ಯರ ಮತ್ತು ಫಿಲಿಷ್ಟಿಯರ ಯುದ್ಧ
1ಸೌಲನು ಅರಸನಾದಾಗ ಮೂವತ್ತು ವರ್ಷದವನಾಗಿದ್ದನು. ಅವನು ಇಸ್ರಾಯೇಲರನ್ನು ಎರಡು ವರ್ಷಗಳ ಕಾಲ ಆಳಿದನು. 2ಅವನು ಇಸ್ರಾಯೇಲರಿಂದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡನು, ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯೂ, ಬೇತೇಲಿನ ಗುಡ್ಡದಲ್ಲಿಯೂ ಇದ್ದರು. ಒಂದು ಸಾವಿರ ಜನರನ್ನು ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಉಳಿದ ಇಸ್ರಾಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು. 3ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದನು. ಈ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿತು. ಸೌಲನು “ಎಲ್ಲಾ ಇಬ್ರಿಯರು ಕೇಳಲಿ” ಎಂದು #13:3 ನ್ಯಾಯ 3:27.ದೇಶದಲ್ಲೆಲ್ಲಾ ತುತ್ತೂರಿ ಊದಿಸಿದನು. 4ಸೌಲನು ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದ್ದರಿಂದ ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಾಯೇಲರು ತಿಳಿದು ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು. 5ಆಗ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೋಸ್ಕರ ಮೂವತ್ತು ಸಾವಿರ ರಥಬಲವನ್ನೂ, ಆರು ಸಾವಿರ ಅಶ್ವಬಲವನ್ನೂ, ಸಮುದ್ರದ ಮರಳಿನಷ್ಟು ಅಸಂಖ್ಯವಾದ ಕಾಲಾಳುಗಳನ್ನೂ ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು. 6ಇಸ್ರಾಯೇಲರಿಗೆ ಕೇಡು ಬಂದಿತು. ತಾವು ಇಕ್ಕಟ್ಟಿನಲ್ಲಿದ್ದೇವೆಂದು ಅವರು ತಿಳಿದು #13:6 ಇಬ್ರಿ. 11:38.ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು. 7ಕೆಲವರು ಯೊರ್ದನ್ ಹೊಳೆದಾಟಿ ಗಾದ್ಯರ ದೇಶಕ್ಕೂ, ಗಿಲ್ಯಾದ್ ಪ್ರಾಂತ್ಯಕ್ಕೂ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತ ಅವನನ್ನು ಹಿಂಬಾಲಿಸಿದರು. 8ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿನ ಇದ್ದರೂ ಸಮುವೇಲನು ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು.
ಸೌಲನ ಅವಿಧೇಯತೆ ಮತ್ತು ಸಮುವೇಲನು ಗದರಿಸಿದ್ದು
9ಆಗ ಸೌಲನು ಜನರಿಂದ ಸರ್ವಾಂಗಹೋಮಕ್ಕೂ, ಸಮಾಧಾನ ಯಜ್ಞಕ್ಕೂ ಬೇಕಾದದ್ದನ್ನು ತರಿಸಿ ಸರ್ವಾಂಗಹೋಮವನ್ನು ಅರ್ಪಿಸಿದನು. 10ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕೋಸ್ಕರ ಎದುರಿಗೆ ಹೋಗಲು 11ಸಮುವೇಲನು ಅವನನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಅವನು, “ಜನರು ಚದರಿಹೋಗುವುದನ್ನೂ, ನೀನು ನಿಯಮಿತಕಾಲದಲ್ಲಿ ಬಾರದಿರುವುದನ್ನೂ, ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನೂ ನೋಡಿದೆನು. 12ಆಗ ನಾನು ‘ಫಿಲಿಷ್ಟಿಯರು ಗಿಲ್ಗಾಲಿನಲ್ಲಿರುವ ನನ್ನ ಬಳಿಗೆ ಬಂದು ನನ್ನ ಮೇಲೆ ಬಿದ್ದಾರು, ನಾನು ಯೆಹೋವನ ದಯೆಯನ್ನು ಬೇಡಿಕೊಳ್ಳಲಿಲ್ಲ’ ಎಂದು, ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವುದಕ್ಕೆ ಮುಂದಾದೆನು” ಅಂದನು. 13ಆಗ ಸಮುವೇಲನು, “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. 14ಈಗಲಾದರೋ ನಿನ್ನ ಅರಸುತನವು ನಿಲ್ಲುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದುದರಿಂದ ಆತನು #13:14 ಅ.ಕೃ. 13:22.ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ” ಎಂದು ಹೇಳಿದನು. 15ಅನಂತರ ಸಮುವೇಲನು ಗಿಲ್ಗಾಲನ್ನು ಬಿಟ್ಟು ಬೆನ್ಯಾಮೀನ್ಯರ ಗಿಬೆಯಕ್ಕೆ ಹೋದನು.
ಆಯುಧ ರಹಿತರಾದ ಇಸ್ರಾಯೇಲ್ಯರು
16ಸೌಲನು ತನ್ನ ಜೊತೆಯಲ್ಲಿದ್ದ ಸೈನಿಕರನ್ನು ಲೆಕ್ಕಿಸಿದಾಗ ಆರು ನೂರು ಪುರುಷರಿದ್ದರು. ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾಮೀನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು. 17ಸುಲಿಗೆ ಮಾಡುವುದಕ್ಕೋಸ್ಕರ ಫಿಲಿಷ್ಟಿಯರ ಪಾಳೆಯದಿಂದ ಮೂರು ಗುಂಪುಗಳು ಹೊರಟು, ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್‌ ನಾಡಿಗೂ, 18ಇನ್ನೊಂದು ಗುಂಪು #13:18 ಯೆಹೋ. 10:10ಬೇತ್‌ಹೋರೋನಿನ ಕಡೆಗೂ, ಮತ್ತೊಂದು ಜೆಬೋಯೀಮಿನ ಕಣಿವೆಯ ಕೆಳಗಿರುವ ಅರಣ್ಯವನ್ನು ನೋಡಬಹುದಾದ ಸ್ಥಳಕ್ಕೂ ಹೋದವು. 19ಇಬ್ರಿಯರು ಈಟಿಕತ್ತಿಗಳನ್ನು ಮಾಡಿಕೊಳ್ಳಬಾರದೆಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ ಇಸ್ರಾಯೇಲ್‌ ದೇಶದಲ್ಲಿ ಅವುಗಳನ್ನು ಮಾಡುವ ಕಮ್ಮಾರರೇ ಇರಲಿಲ್ಲ. 20ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹರಿತ ಮಾಡಿಸುವುದಕ್ಕೆ ಫಿಲಿಷ್ಟಿಯರ ಹತ್ತಿರವೇ ಹೋಗಬೇಕಿತ್ತು. 21ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವುದಕ್ಕೋಸ್ಕರ ಅವರಲ್ಲಿ #13:21 ಅರ.ಹರಿತ ಮಾಡುವ ಕಲ್ಲು ಮಾತ್ರ ಇತ್ತು. 22ಹೀಗಿರುವುದರಿಂದ ಯುದ್ಧ ಪ್ರಾರಂಭಿಸಿದಾಗ ಸೌಲ ಮತ್ತು ಯೋನಾತಾನರ ಹೊರತು ಅವರ ಜೊತೆಯಲ್ಲಿದ್ದ ಜನರಲ್ಲಿ ಒಬ್ಬನ ಕೈಯಲ್ಲಾದರೂ, ಕತ್ತಿಯಾಗಲಿ ಬರ್ಜಿಯಾಗಲಿ ಇರಲಿಲ್ಲ.
ಯೋನಾತಾನನ ಶೌರ್ಯ
23ಫಿಲಿಷ್ಟಿಯರ ಕಾವಲುದಂಡು ಮಿಕ್ಮಾಷಿನ ಕಣಿವೆಯ ಕಡೆಗೆ ಹೊರಟಿತು.

Currently Selected:

1 ಸಮು 13: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy