1 ಅರಸು 1
1
ದಾವೀದನ ವೃದ್ಧಾಪ್ಯ
1ಅರಸನಾದ ದಾವೀದನು ವಯೋವೃದ್ಧನಾಗಿದ್ದನು. ಸೇವಕರು ಎಷ್ಟು ಕಂಬಳಿ ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ. 2ಆದುದರಿಂದ ಅವನ ಸೇವಕರು ಅವನಿಗೆ, “ನಮ್ಮ ಒಡೆಯನಾದ ಅರಸನಿಗೋಸ್ಕರ ಒಬ್ಬ ಕನ್ಯೆಯನ್ನು ಹುಡುಕಿತರುವೆವು. ಆಕೆಯು ಅರಸನ ಸನ್ನಿಧಿಯಲ್ಲಿದ್ದುಕೊಂಡು ನಿನ್ನನ್ನು ಪರಾಂಬರಿಸಬೇಕು. ಆಕೆಯು ನಮ್ಮ ಒಡೆಯನಾದ ಅರಸನ ಪಕ್ಕದಲ್ಲಿ ಮಲಗುವುದರಿಂದ ನಿಮಗೆ ಬೆಚ್ಚಗಾಗುವುದು” ಎಂದು ಹೇಳಿದರು. 3ಆನಂತರ ಅವರು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಅತಿ ಸುಂದರಿಯಾದ ಹುಡುಗಿಯನ್ನು ಹುಡುಕುವುದಕ್ಕೆ ಹೋಗಿ ಶೂನೇಮ್ ಊರಿನ ಅಬೀಷಗ್ ಎಂಬಾಕೆಯನ್ನು ಕಂಡು ಆಕೆಯನ್ನು ಅರಸನ ಬಳಿಗೆ ಕರೆದುಕೊಂಡು ಬಂದರು. 4ಬಹು ಸುಂದರಿಯಾದ ಈಕೆಯು ಅರಸನನ್ನು ಶುಶ್ರೂಷೆ ಮಾಡುವ ಸೇವಕಿಯಾದಳು. ಆದರೆ ಅರಸನು ಈಕೆಯನ್ನು ಸಂಗಮಿಸಲಿಲ್ಲ.
ಅದೋನೀಯನು ಅರಸನಾಗುವುದಕ್ಕೆ ಪ್ರಯತ್ನಿಸಿದ್ದು
5ಆನಂತರ ಹಗ್ಗೀತಳ ಮಗನಾದ ಅದೋನೀಯನು, “ನಾನೇ ಅರಸನಾಗತಕ್ಕವನು” ಎಂಬುದಾಗಿ ಹೇಳಿ ಉಬ್ಬಿಕೊಂಡು, ತನಗೋಸ್ಕರ ರಥರಥಾಶ್ವಗಳನ್ನೂ, ಮುಂದೆ ಓಡುವುದಕ್ಕಾಗಿ ಐವತ್ತು ಸಿಪಾಯಿಗಳನ್ನೂ ನೇಮಿಸಿಕೊಂಡನು. 6ಅವನ ತಂದೆಯಾದ ದಾವೀದನು, “ನೀನು ಹೀಗೆ ಮಾಡಿದ್ದೇಕೆ” ಎಂದು ಅವನನ್ನು ಒಂದು ಸಾರಿಯಾದರೂ ಗದರಿಸಿ ಬೇಸರಪಡಿಸಿರಲಿಲ್ಲ. ಅವನು ಬಹು ಸುಂದರವಾಗಿದ್ದನು. ಅಬ್ಷಾಲೋಮನ ತರುವಾಯ ಅವನೇ ಹಿರಿಯನಾಗಿದ್ದನು. 7ಅವನು ಚೆರೂಯಳ ಮಗನಾದ ಯೋವಾಬನನ್ನು ಮತ್ತು ಯಾಜಕನಾದ ಎಬ್ಯಾತಾರನನ್ನೂ ತನ್ನ ಕಡೆಗೆ ಒಲಿಸಿಕೊಂಡನು. ಇವರು ಅವನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾದರು. 8ಆದರೆ ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ದಾವೀದನ ವಿಶೇಷ ಕಾವಲಿನವರು ಅದೋನೀಯನನ್ನು ಬೆಂಬಲಿಸಲಿಲ್ಲ. 9ಅದೋನೀಯನು ರೋಗೆಲ್ ಬುಗ್ಗೆಯ ಬಳಿಯಲ್ಲಿರುವ ಚೋಹೆಲೆತ್ ಬಂಡೆಯ ಮೇಲೆ ಕುರಿ, ಹೋರಿ ಮೊದಲಾದ ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ರಾಜಪುತ್ರರಾದ ತನ್ನ ಉಳಿದ ಸಹೋದರರನ್ನೂ ಅರಸನ ಅಧಿಕಾರಿಗಳಾದ ಎಲ್ಲಾ ಯೆಹೂದ್ಯರನ್ನೂ ಔತಣಕ್ಕೆ ಆಮಂತ್ರಿಸಿದನು. 10ಆದರೆ ಪ್ರವಾದಿಯಾದ ನಾತಾನ್, ಬೆನಾಯ, ದಾವೀದನ ವಿಶೇಷ ಕಾವಲಿನವರು ತಮ್ಮನಾದ ಸೊಲೊಮೋನ್ ಇವರನ್ನು ಮಾತ್ರ ಆಮಂತ್ರಿಸಿರಲಿಲ್ಲ.
11ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, “ಹಗ್ಗೀತಳ ಮಗನಾದ ಅದೋನೀಯನು ನಮ್ಮ ಒಡೆಯನಾದ ದಾವೀದನಿಗೆ ತಿಳಿಯದೇ ಅರಸನಾದನೆಂಬುದನ್ನು ನೀನು ಕೇಳಿದಿಯಲ್ಲವೋ? 12ಈಗ ನನ್ನ ಆಲೋಚನೆಯನ್ನು ಲಾಲಿಸಿ ನಿನ್ನ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವವನ್ನು ಉಳಿಸಿಕೋ. 13ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು. ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣ ಮಾಡಿ ಹೇಳಿದ್ದನಲ್ಲಾ. ಹೀಗಿದ್ದ ಮೇಲೆ ಅದೋನೀಯನು ಆಳುವುದೇಕೆ’ ಎಂದು ಕೇಳು. 14ನೀನು ಅರಸನೊಡನೆ ಮಾತನಾಡುತ್ತಿರುವಾಗ ನಾನು ಬಂದು ನಿನ್ನ ಮಾತನ್ನು ದೃಢಪಡಿಸುವೆನು” ಎಂದನು. 15ಅರಸನು ಬಹು ವೃದ್ಧನಾಗಿದುದರಿಂದ ಶೂನೇಮ್ಯಳಾದ ಅಬೀಷಗ್ ಎಂಬಾಕೆಯಿಂದ ಪರಾಂಬರಿಕೆಯನ್ನು ಹೊಂದುತ್ತಾ ಒಳಗಿನ ಕೋಣೆಯಲ್ಲಿಯೇ ಇರುತ್ತಿದ್ದನು. 16ಬತ್ಷೆಬೆಯು ಅಲ್ಲಿಗೆ ಹೋಗಿ ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನು, “ನಿನಗೇನು ಬೇಕು?” ಎಂದು ಆಕೆಯನ್ನು ಕೇಳಿದನು. 17ಆಗ ಆಕೆಯು, “ನನ್ನ ಒಡೆಯನು ತನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ತಮ್ಮ ದಾಸಿಯಾದ ನನಗೆ ನನ್ನ ತರುವಾಯ ನನ್ನ ಮಗನಾದ ಸೊಲೊಮೋನನು ಅರಸನಾಗಬೇಕು. ನಿಜವಾಗಿ ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂಬುದಾಗಿ ಹೇಳಿದ್ದೆಯಲ್ಲಾ. 18ಆದರೆ ಈಗ ಅದೋನೀಯನು ನನ್ನ ಒಡೆಯನೂ ಅರಸನೂ ಆದ ನಿಮಗೆ ತಿಳಿಯದೇ ಅರಸನಾಗಿದ್ದಾನೆ. 19ಆತನು ಹೋರಿ, ಕುರಿ ಮೊದಲಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ ನಿನ್ನ ಸೇವಕನಾದ ಸೊಲೊಮೋನನ ಹೊರತಾಗಿ ಎಲ್ಲಾ ರಾಜಪುತ್ರರನ್ನೂ, ಯಾಜಕನಾದ ಎಬ್ಯಾತಾರನನ್ನೂ, ಸೇನಾಧಿಪತಿಯಾದ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. 20ನನ್ನ ಒಡೆಯನೂ ಅರಸನೂ ಆದ ನಿಮ್ಮ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರೆಂಬುದನ್ನು ನೀವೇ ಗೊತ್ತುಮಾಡಬೇಕೆಂದು ಇಸ್ರಾಯೇಲರೆಲ್ಲರೂ ಕಾದುಕೊಂಡಿದ್ದಾರೆ. 21ನನ್ನ ಒಡೆಯನೂ, ಅರಸನೂ ಆದ ನೀವೂ ಹಾಗೆ ಮಾಡದೆ ಪೂರ್ವಿಕರ ಬಳಿಗೆ ಸೇರುವುದಾದರೆ ನಾನೂ ಮತ್ತು ನನ್ನ ಮಗನೂ ದೋಷಾರೋಪಣೆಗೆ ಗುರಿಯಾಗುವೆವು” ಎಂದು ಹೇಳಿದಳು.
22ಆಕೆಯು ಹೀಗೆ ಅರಸನ ಸಂಗಡ ಮಾತನಾಡುವಷ್ಟರಲ್ಲಿ ಪ್ರವಾದಿಯಾದ ನಾತಾನನು ಬಂದನು. 23ಸೇವಕರು ನಾತಾನನು ಬಂದಿರುವ ಸಂಗತಿಯನ್ನು ಅರಸನಿಗೆ ತಿಳಿಸಿದರು. ಪ್ರವಾದಿಯಾದ ನಾತಾನನು ಅರಸನ ಮುಂದೆ ಹೋಗಿ ಸಾಷ್ಟಾಂಗನಮಸ್ಕಾರಮಾಡಿದನು. 24ನಾತಾನನು, “ನನ್ನ ಒಡೆಯನೂ, ಅರಸನೂ ಆದ ನೀನು ಅದೋನೀಯನಿಗೆ ಅರಸನಾಗುವುದಕ್ಕೆ ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಅಪ್ಪಣೆಕೊಟ್ಟಿರುವಂತೆ ಕಾಣುತ್ತದೆ. 25ಅವನು ಗಟ್ಟಾ ಇಳಿದು ಹೋಗಿ ಹೋರಿ, ಕುರಿ ಮುಂತಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ಎಲ್ಲಾ ರಾಜಪುತ್ರರನ್ನೂ, ಸೇನಾಧಿಪತಿಗಳನ್ನೂ, ಯಾಜಕನಾದ ಎಬ್ಯಾತಾರನನ್ನೂ ಔತಣಕ್ಕೆ ಕರೆದಿದ್ದಾನೆ. ಅವರು ಅವನ ಪಂಕ್ತಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ’ ಎಂದು ಕೂಗುತ್ತಿದ್ದಾರೆ. 26ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ ನಿನ್ನ ಮಗನೂ, ಸೇವಕನೂ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ. 27ಈ ಕಾರ್ಯವು ನನ್ನ ಒಡೆಯನೂ ಅರಸನೂ ಆದ ನಿನ್ನಿಂದಲೇ ನಡೆದಿರುವ ಪಕ್ಷದಲ್ಲಿ ನಿನ್ನ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರು ಎಂಬುವುದನ್ನು ನಿನ್ನ ಸೇವಕನಾದ ನನಗೆ ತಿಳಿಸಬಾರದಾಗಿತ್ತೇ” ಎಂದು ಹೇಳಿದನು.
ಸೊಲೊಮೋನನ ರಾಜಾಭಿಷೇಕ
28ಅರಸನಾದ ದಾವೀದನು ಬತ್ಷೆಬೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಆಕೆಯು ಬಂದು ಅರಸನ ಮುಂದೆ ನಿಂತಳು. 29ಅರಸನು ಆಕೆಗೆ, “ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಯೆಹೋವನಾಣೆ, 30ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಅರಸನಾದ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕೆಂದು ನಾನು ನಿನಗೆ ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದನ್ನು ಈಹೊತ್ತೇ ನೆರವೇರಿಸುವೆನು” ಎಂದನು. 31ಆಗ ಬತ್ಷೆಬೆಯು ಅರಸನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ನನ್ನ ಒಡೆಯನೂ ಅರಸನೂ ಆದ ದಾವೀದನು ಸದಾಕಾಲವೂ ಬಾಳಲಿ” ಎಂದಳು.
32ಅನಂತರ ಅರಸನಾದ ದಾವೀದನು ತನ್ನ ಸೇವಕರಿಗೆ, “ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನು ಕರೆಯಿರಿ” ಎಂದು ಆಜ್ಞಾಪಿಸಿದನು. ಅವರು ಅರಸನ ಸನ್ನಿಧಿಗೆ ಬಂದರು. 33ಅರಸನು ಅವರಿಗೆ, “ನೀವು ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. 34ಅಲ್ಲಿ ಯಾಜಕನಾದ ಚಾದೋಕನೂ ಮತ್ತು ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲರ ಅರಸನನ್ನಾಗಿ ಅಭಿಷೇಕಿಸಲಿ. ಅನಂತರ ಕೊಂಬನ್ನೂದಿರಿ. ಎಲ್ಲರೂ, ‘ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಜಯಘೋಷ ಮಾಡಲಿ. 35ಆಮೇಲೆ ನೀವು ಅವನ ಹಿಂದೆ ಬನ್ನಿರಿ. ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲರ ಮತ್ತು ಯೆಹೂದ್ಯರನ್ನು ಆಳಲು ಅವನನ್ನೇ ಪ್ರಭುವನ್ನಾಗಿ ನೇಮಿಸಿದ್ದೇನೆ” ಎಂದನು. 36ಯೆಹೋಯಾದಾವನ ಮಗನಾದ ಬೆನಾಯನು ಅರಸನಿಗೆ, “ಹಾಗೆಯೇ ಆಗಲಿ. ನನ್ನ ಒಡೆಯನಾದ ಅರಸನ ದೇವರಾದ ಯೆಹೋವನು ಅದನ್ನು ಸ್ಥಿರಪಡಿಸಲಿ. 37ಆತನು ನನ್ನ ಒಡೆಯನಾದ ಅರಸನ ಸಂಗಡ ಇದ್ದ ಪ್ರಕಾರ ಸೊಲೊಮೋನನ ಸಂಗಡಲೂ ಇದ್ದು ರಾಜ್ಯವನ್ನು ನನ್ನ ಒಡೆಯನೂ, ಅರಸನೂ ಆದ ನಿನ್ನ ಕಾಲದಲ್ಲಿದ್ದದಕ್ಕಿಂತ ಹೆಚ್ಚಾಗಿ ಅಭಿವೃದ್ಧಿಮಾಡಲಿ” ಎಂದು ನುಡಿದನು. 38ಆಗ ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳನ್ನು ತೆಗೆದುಕೊಂಡು ಸೊಲೊಮೋನನನ್ನು ಅರಸನಾದ ದಾವೀದನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿ, ಗೀಹೋನಿಗೆ ಕರೆದುಕೊಂಡು ಹೋದರು. 39ಯಾಜಕನಾದ ಚಾದೋಕನು ದೇವದರ್ಶನದ ಗುಡಾರದಲ್ಲಿ ಎಣ್ಣೆಯ ಕೊಂಬನ್ನು ತೆಗೆದುಕೊಂಡು ಸೊಲೊಮೋನನನ್ನು ಅಭಿಷೇಕಿಸಿದನು. ಕೂಡಲೇ ಕೊಂಬನ್ನೂದಿ ಎಲ್ಲಾ ಜನರು “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40ತರುವಾಯ ಅವರೆಲ್ಲರೂ ಅವನನ್ನು ಹಿಂಬಾಲಿಸಿ ಕೊಳಲೂದುತ್ತಾ, ಬಹುಸಂತೋಷದಿಂದ ಜಯಘೋಷಮಾಡುತ್ತಾ ಹಿಂತಿರುಗಿ ಬಂದರು. ಅವರ ಕೂಗಿನಿಂದ ಭೂಮಿಯು ನಡುಗಿತೋ ಎಂಬಂತೆ ಆಯಿತು.
41ಅದೋನೀಯನು ಅವನ ಸಂಗಡ ಇದ್ದ ಅತಿಥಿಗಳೂ ಭೋಜನವನ್ನು ಮುಗಿಸುವಷ್ಟರಲ್ಲೇ ಅವರಿಗೆ ಈ ಕೂಗು ಕೇಳಿಸಿತು. ಯೋವಾಬನು ಕೊಂಬಿನ ಧ್ವನಿಯನ್ನು ಕೇಳಿದಾಗ, “ಪಟ್ಟಣದಲ್ಲಿ ಇಂಥ ಗದ್ದಲವೇಕೆ?” ಎಂದು ವಿಚಾರಿಸಿದನು. 42ಆಗ ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, “ಬಾ ನೀನು ಯೋಗ್ಯ ಪುರುಷನೂ, ಶುಭವರ್ತಮಾನವನ್ನು ತರುವವನೂ ಆಗಿರುತ್ತೀ” ಎಂದನು. 43ಯೋನಾತಾನನು ಅವನಿಗೆ, “ಶುಭವಾರ್ತೆ ಎಲ್ಲಿ? ನಮ್ಮೊಡೆಯನೂ, ಅರಸನೂ ಆದ ದಾವೀದನು ಸೊಲೊಮೋನನನ್ನು ಅರಸನನ್ನಾಗಿ ಮಾಡಿದ್ದಾನೆ. 44ಅರಸನು ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ್ ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ, ಕೆರೇತ್ಯ ಮತ್ತು ಪೆಲೇತ್ಯರನ್ನೂ ಅವನ ಜೊತೆಯಲ್ಲಿ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿದ್ದಾರೆ. 45ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜ್ಯಾಭಿಷೇಕ ಮಾಡಿದರು. ಅಲ್ಲಿಂದ ಅವರು ಮಹಾ ಸಂತೋಷದಿಂದ ಜಯಘೋಷ ಮಾಡುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ. ನೀವು ಕೇಳಿದ ಶಬ್ದವು ಇದೇ. 46ಇದಲ್ಲದೆ ಸೊಲೊಮೋನನು ರಾಜಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ. 47ಅರಸನಾದ ದಾವೀದನ ಸೇವಕರು ನಮ್ಮ ಒಡೆಯನೂ, ಅರಸನೂ ಆದ ದಾವೀದನ ಮುಂದೆ ಬಂದು, ‘ನಿನ್ನ ದೇವರು ನಿನ್ನ ಹೆಸರಿಗಿಂತಲೂ ಸೊಲೊಮೋನನ ಹೆಸರನ್ನು ಪ್ರಸಿದ್ಧಿಗೆ ತರಲಿ. ರಾಜ್ಯವನ್ನು ನಿನ್ನ ಕಾಲದಲ್ಲಿ ಇದ್ದದ್ದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಬಲಪಡಿಸಲಿ’ ಎಂದು ಅವನನ್ನು ಹರಿಸಿದ್ದಾರೆ. 48ಅರಸನು ತನ್ನ ಹಾಸಿಗೆಯ ಮೇಲೆ ಬಾಗಿಕೊಂಡು, ‘ನಾನು ಕಣ್ಣಾರೆ ಕಾಣುವಂತೆ ಇಂದು ನನ್ನ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸಿದ ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಅಂದರು. 49ಆಗ ಅದೋನೀಯನಿಂದ ಔತಣಕ್ಕೆ ಕರೆಯಲ್ಪಟ್ಟವರೆಲ್ಲರೂ ಭಯಪಟ್ಟು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು.
50ಅದೋನೀಯನು ಸೊಲೊಮೋನನಿಗೆ ಹೆದರಿ ಹೊರಟುಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು#1:50 ಯಜ್ಞವೇದಿಯ ಕೊಂಬುಗಳನ್ನು ಹಿಡಿದನು ಈ ಸನ್ನಿವೇಶದಲ್ಲಿ ಅದೋನೀಯನು ತಕ್ಷಣವೇ ದೇವದರ್ಶನ ಗುಡಾರಕ್ಕೆ ಹೋದನೆಂಬುದು ಸ್ಪಷ್ಟವಾಗಿ ತೋರಿಬರುತ್ತದೆ. ಆದ್ದರಿಂದ, “ಅವನು ದೇವದರ್ಶನದ ಗುಡಾರಕ್ಕೆ ಓಡಿಹೋದನು” ಎಂದು 1 ಅರಸು. 1.50 ನೇ ವಚನವು ಹೇಳುತ್ತದೆ. ಯಜ್ಞವೇದಿಯ ಕೊಂಬುಗಳನ್ನು ಹಿಡಿದುಕೊಂಡನು: ಯಜ್ಞವೇದಿಯ ಕೊಂಬುಗಳು ಯಜ್ಞವೇದಿಯ ನಾಲ್ಕು ಮೂಲೆಗಳಲ್ಲಿದ್ದ ಚಿಕ್ಕ ಆಕಾರಗಳಾಗಿದ್ದವು, ಅವುಗಳು ಕೊಂಬುಗಳಂತೆ ಕಾಣುತ್ತಿದ್ದವು. ಅವುಗಳನ್ನು ಹಿಡಿದುಕೊಂಡವನು ಯಾರೇ ಆಗಲಿ ಕೊಲ್ಲಲ್ಪಡದಂತೆ ಸುರಕ್ಷಿತನಾಗಿರುತ್ತಿದ್ದನು (ವಿಮೋ 21:13-14 ನೋಡಿರಿ).. 51ದೂತರು ಬಂದು ಸೊಲೊಮೋನನಿಗೆ, “ಅದೋನೀಯನು ನಿನಗೆ ಹೆದರಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ನನ್ನನ್ನು ಕತ್ತಿಯಿಂದ ಸಂಹರಿಸುವುದಿಲ್ಲವೆಂಬುದಾಗಿ ಈ ಹೊತ್ತು ನನಗೆ ಪ್ರಮಾಣಮಾಡಬೇಕೆಂದು ಬೇಡಿಕೊಳ್ಳುತ್ತೇನೆ’” ಎಂಬುದಾಗಿ ತಿಳಿಸಿದನು. 52ಅವನು, “ಅದೋನೀಯನು ಯೋಗ್ಯತೆಯುಳ್ಳವನಾಗಿ ನಡೆಯುವುದಾದರೆ ಅವನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡಿಸುವುದಿಲ್ಲ. ಆದರೆ ಅವನಲ್ಲಿ ಕೆಟ್ಟತನವು ಕಂಡುಬರುವುದಾದರೆ ಅವನು ಸಾಯುವನು” ಎಂದು ಹೇಳಿ ಆಳುಗಳನ್ನು ಕಳುಹಿಸಿ ಅವನನ್ನು ಯಜ್ಞವೇದಿಯ ಬಳಿಯಿಂದ ಕರೆಯಿಸಿದನು. 53ಅವನು ಬಂದಾಗ ಅರಸನಾದ ಸೊಲೊಮೋನನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ ಅವನ ಮನೆಗೆ ಹೋಗಲು ಅಪ್ಪಣೆಕೊಟ್ಟನು.
Currently Selected:
1 ಅರಸು 1: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.