YouVersion Logo
Search Icon

ಮತ್ತಾಯ 5

5
ಬೆಟ್ಟದ ಮೇಲೆ ಬೋಧೆ
1ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. 2ಆಗ ಯೇಸು ಇಂತೆಂದು ಪ್ರಬೋಧಿಸಿದರು.
ಅಷ್ಟ ಭಾಗ್ಯಗಳು
(ಲೂಕ. 6:20-23)
3“ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು;
ಸ್ವರ್ಗಸಾಮ್ರಾಜ್ಯ ಅವರದು.
4ದುಃಖಿಗಳು ಭಾಗ್ಯವಂತರು;
ದೇವರು ಅವರನ್ನು ಸಂತೈಸುವರು.
5ವಿನಯಶೀಲರು ಭಾಗ್ಯವಂತರು;
ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
6ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು;
ದೇವರು ಅವರಿಗೆ ತೃಪ್ತಿಯನ್ನೀಯುವರು.
7ದಯಾವಂತರು ಭಾಗ್ಯವಂತರು;
ದೇವರ ದಯೆ ಅವರಿಗೆ ದೊರಕುವುದು.
8ನಿರ್ಮಲ ಹೃದಯಿಗಳು ಭಾಗ್ಯವಂತರು;
ಅವರು ದೇವರನ್ನು ಕಾಣುವರು.
9ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು;
ಅವರು ದೇವರ ಮಕ್ಕಳೆನಿಸಿಕೊಳ್ಳುವರು.
10ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು;
ಸ್ವರ್ಗಸಾಮ್ರಾಜ್ಯ ಅವರದು.”
11“ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. 12ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು, ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು.”
ಧರೆಗೆ ಉಪ್ಪು - ಜಗಕ್ಕೆ ಬೆಳಕು
(ಮಾರ್ಕ. 9:50; ಲೂಕ. 14:34-35)
13“ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ.”
14“ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. 15ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. 16ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.”
ನಿಮ್ಮ ಸನಾತನಧರ್ಮ ರದ್ದಾಗದು
17“ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. 18ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 19ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು. 20ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.”
ಕೋಪ ಕೊಲೆಗೆ ಮೂಲ
21“ ‘ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ; ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ)#5:22 ಕೆಲವು ಪ್ರತಿಗಳಲ್ಲಿ ಈ ಪದವಿದೆ. ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. 23ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, 24ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ’ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು.”
25“ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಮಾಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೊಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! 26ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು.”
ಕಾಮುಕತನಕ್ಕೆ ಕೊಡಲಿಪೆಟ್ಟು
27“ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; 28ಆದರೆ ನಾನು ಹೇಳುತ್ತೇನೆ, ಕೇಳಿ; ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. 29ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. 30ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು.”
ವಿವಾಹ ವಿಚ್ಛೇದನದ ಬಗ್ಗೆ ಎಚ್ಚರಿಕೆ!
(ಮತ್ತಾ. 19:9; ಮಾರ್ಕ. 10:11-12; ಲೂಕ. 16:18)
31“ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. 32ಆದರೆ ನಾನೀಗ ನಿಮಗೆ ಹೇಳುತ್ತೇನೆ ಕೇಳಿ; ತನ್ನ ಹೆಂಡತಿಯ ದುರ್ನಡತೆಯ#5:32 ಅಥವಾ ವ್ಯಭಿಚಾರದ. ಕಾರಣದಿಂದಲ್ಲದೆ, ಅವಳನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ.”
ಆಣೆಯಿಡುವುದು ಬೇಡ
33“ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನಮಾಡಿದಂತೆ ನಡೆದುಕೊಳ್ಳಲೇಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. 34ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇ ಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; 35ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; 36ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. 37ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು.”
ಅಪಕಾರಕ್ಕೆ ಉಪಕಾರ
(ಲೂಕ. 6:29-30)
38“ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. 39ಆದರೆ ನನ್ನ ಬೋಧೆ ಇದು; ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. 40ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. 41ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು; 42ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ.”
ಶತ್ರು ಪ್ರೇಮ
(ಲೂಕ. 6:27-28,32-36)
43“ ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. 44ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. 45ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. 46ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿಮಾಡುವವರೂ#5:46 ಯೆಹೂದ್ಯರ ದೃಷ್ಟಿಯಲ್ಲಿ ಬಹಿಷ್ಕೃತರು. ಹಾಗೆ ಮಾಡುವುದಿಲ್ಲವೇ? 47ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? 48ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy