YouVersion Logo
Search Icon

ಜ್ಞಾನೋಕ್ತಿಗಳು 1

1
ಈ ವಚನಗಳ ಪ್ರಯೋಜನ
1ಇಸ್ರಯೇಲರಿಗೆ ಅರಸನಾಗಿದ್ದ ದಾವೀದನ ಮಗ ಸೊಲೊಮೋನನ ಜ್ಞಾನೋಕ್ತಿಗಳು:
2ಜ್ಞಾನವನ್ನೂ ಶಿಸ್ತನ್ನೂ ಪಡೆಯುವುದಕ್ಕೆ ಒಳನೋಟದ ಮಾತುಗಳನ್ನು ಗ್ರಹಿಸುವುದಕ್ಕೆ, 3ವಿವೇಕ ಹಾಗೂ ನ್ಯಾಯನೀತಿಯ ಮಾರ್ಗದಲ್ಲಿ ಶಿಕ್ಷಿತರಾಗುವುದಕ್ಕೆ ಮತ್ತು 4ಮೂಢರಿಗೆ ಬುದ್ಧಿಯನ್ನೂ ಯುವಜನರಿಗೆ ತಿಳುವಳಿಕೆಯನ್ನೂ ಕಲಿಸುವುದಕ್ಕೆ ಒದಗುತ್ತವೆ ಈ ಜ್ಞಾನೋಕ್ತಿಗಳು. 5ಇವುಗಳನ್ನು ಕೇಳಿ ಜಾಣನು ಇನ್ನೂ ಜಾಣ ನಾಗುವನು, ವಿವೇಕಿಯು ಮತ್ತಷ್ಟು ಜ್ಞಾನಸಂಪನ್ನನಾಗುವನು. 6ಗಾದೆಗಳನ್ನೂ ಗೂಢಾರ್ಥಗಳನ್ನೂ ಜ್ಞಾನಿಯ ನುಡಿ ಹಾಗು ಒಗಟುಗಳನ್ನೂ ತಿಳಿದುಕೊಳ್ಳಲು ಸಹ ಇವು ಸಾಧನಗಳು.
ಯುವಜನರಿಗೆ ಹಿತನುಡಿ
7ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ; ಮೂರ್ಖರಿಗಾದರೋ ಜ್ಞಾನ, ಶಿಸ್ತು ಎಂದರೆ ತಾತ್ಸಾರ.
8ಮಗನೇ, ನಿನ್ನ ತಂದೆಯ ಬೋಧೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದಿರು. 9ಅವು ನಿನ್ನ ತಲೆಗೆ ಸುಂದರ ಕಿರೀಟ, ನಿನ್ನ ಕೊರಳಿಗೆ ಕಂಠಾಭರಣ.
10ಮಗನೇ, ಪಾಪಿಗಳ ಪ್ರೇರಣೆಗೆ ಒಪ್ಪಿಗೆ ಕೊಡಲೇಬೇಡ. 11ಅವರು ನಿನಗೆ “ನಮ್ಮೊಡನೆ ಬಾ, ಹೊಂಚುಹಾಕಿ ಹತ್ಯೆಮಾಡೋಣ; 12ಪಾತಾಳಕ್ಕಿಳಿಯುವವರನ್ನು ನರಕ ನುಂಗುವಂತೆ ಅವರನ್ನು ಜೀವಸಹಿತ ಪೂರ್ತಿಯಾಗಿ ಕಬಳಿಸಿಬಿಡೋಣ ಬಾ; 13ಅಮೂಲ್ಯವಾದ ಸೊತ್ತನ್ನೆಲ್ಲಾ ಕಂಡುಹಿಡಿಯೋಣ; ಕೊಳ್ಳೆಹೊಡೆದು ಮನೆ ತುಂಬಿಸಿಕೊಳ್ಳೋಣ, ಬಾ; 14ನಮ್ಮೊಡನೆ ಪಾಲುಗಾರನಾಗಲು ಬಾ; ನಮ್ಮೆಲ್ಲರ ನಿಧಿ ಒಂದೇ ಆಗಿರಲಿ” ಎಂದೆಲ್ಲಾ ಹೇಳುವರು.
15ಆದರೆ ಮಗನೇ, ಅವರೊಡನೆ ಸೇರಬೇಡ; ನೀನು ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ. 16ಅವರ ಕಾಲು ಕೇಡನ್ನು ಹಿಂಬಾಲಿಸಿ ಓಡುತ್ತವೆ ರಕ್ತಪಾತಕ್ಕಾಗಿ ಅವರು ತುಡಿಯುತ್ತಿರುತ್ತಾರೆ. 17ರೆಕ್ಕೆಯುಳ್ಳ ಹಕ್ಕಿಯ ಕಣ್ಣೆದುರಿಗೇ ಬಲೆಯನ್ನು ಹರಡುವುದು ವ್ಯರ್ಥವಲ್ಲವೆ? 18ಇಂಥವರು ಹೊಂಚುಹಾಕುವುದು ಸ್ವಹತ್ಯಕ್ಕೇ, ಬಲೆ ಒಡ್ಡುವುದು ಸ್ವಂತ ಪ್ರಾಣನಾಶಕ್ಕೆ. 19ಸೂರೆ ಮಾಡುವವರೆಲ್ಲರ ಪಾಡು ಇದುವೆ; ಕೊಳ್ಳೆಯು, ಕೊಳ್ಳೆಗಾರರ ಪ್ರಾಣವನ್ನೇ ಕೊಳ್ಳೆಮಾಡುತ್ತದೆ.
20ಜ್ಞಾನವೆಂಬಾಕೆ ಹಾದಿಗಳಲ್ಲಿ ಕೂಗುತ್ತಾ ಇದ್ದಾಳೆ; ಬೀದಿಚೌಕಗಳಲ್ಲಿ ದನಿಗೈಯುತ್ತಾ ಇದ್ದಾಳೆ; 21ಪೇಟೆಯ ಜನಜಂಗುಳಿಯ ನಡುವೆ, ಪುರ ದ್ವಾರಗಳಲ್ಲೆ, ಹೀಗೆಂದು ಪ್ರಚಾರ ಮಾಡುತ್ತಿದ್ದಾಳೆ:
22“ಮೂಢರೇ, ಎಂದಿನ ತನಕ ಮೂಢರಾಗಿರಲಾಶಿಸುವಿರಿ? ಕುಚೋದ್ಯಗಾರರೇ, ಎಷ್ಟುಕಾಲ ಕುಚೋದ್ಯಗಾರರಾಗಿರಲಿಚ್ಚಿಸುವಿರಿ? ಮೂರ್ಖರೇ, ಎಷ್ಟರವರೆಗೆ ತಿಳುವಳಿಕೆಯನ್ನು ಹಗೆಮಾಡುವಿರಿ? 23ನನ್ನ ಎಚ್ಚರಿಕೆಯ ಮಾತಿನತ್ತ ಗಮನಕೊಡಿ; ನನ್ನ ಚೈತನ್ಯವನ್ನು ನಿಮ್ಮ ಮೇಲೆ ಸುರಿಸಿ, ನನ್ನ ನುಡಿಯನ್ನು ನಿಮಗೆ ತಿಳಿಯಪಡಿಸುವೆನು. 24ನಾನು ನಿಮ್ಮನ್ನು ಕರೆದಾಗ ತಿರಸ್ಕರಿಸಿದಿರಿ. ನಾನು ನಿಮಗೆ ಕೈ ನೀಡಿದಾಗ ಗಮನಿಸದೆ ಹೋದಿರಿ. 25ನನ್ನ ಬುದ್ಧಿವಾದವನ್ನು ಅಲಕ್ಷ್ಯಮಾಡಿದಿರಿ, ನನ್ನ ತಿದ್ದುಪಾಟನ್ನು ತಳ್ಳಿಬಿಟ್ಟಿರಿ. 26ಆದುದರಿಂದ ಬಿರುಗಾಳಿಯಂತೆ ನಿಮಗೆ ಅಪಾಯಬಂದಾಗ, ತುಫಾನಿನಂತೆ ನಿಮಗೆ ಆಪತ್ತು ಬಂದೊದಗಿದಾಗ, 27ಕಷ್ಟಸಂಕಟಗಳು ನಿಮಗೆ ಸಂಭವಿಸಿದಾಗ ನಿಮ್ಮನ್ನು ಕುರಿತು ನಾನೆ ನಕ್ಕು ಪರಿಹಾಸ್ಯ ಮಾಡುವೆನು. 28ಆಗ ನನಗೆ ಮೊರೆಯಿಟ್ಟರೂ ಉತ್ತರಿಸೆನು; ಆತುರದಿಂದ ಹುಡುಕಿದರೂ ನಾನು ಕಾಣಸಿಗೆನು. 29ಏಕೆಂದರೆ ಸುಜ್ಞಾನವನ್ನೇ ಅವರು ದ್ವೇಷಿಸಿದರು, ಸರ್ವೇಶ್ವರನಲ್ಲಿ ಭಯಭಕ್ತಿಯಿರಿಸದೆ ಹೋದರು. 30ನನ್ನ ಆಲೋಚನೆಯನ್ನು ಅವರು ಕೇಳಲಿಲ್ಲ, ನನ್ನ ಪ್ರತಿಯೊಂದು ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. 31ಈ ಕಾರಣ, ತಮ್ಮ ನಡತೆಗೆ ತಕ್ಕ ಫಲವನ್ನು ಅನುಭವಿಸುವರು, ತಮ್ಮ ಕುಯುಕ್ತಿಗಳ ಪರಿಣಾಮದಿಂದ ಹೊಟ್ಟೆ ತುಂಬಿಸಿಕೊಳ್ಳುವರು. 32ಮೂಢರು ತಮ್ಮ ಉದಾಸೀನತೆಯಿಂದಲೆ ಹತರಾಗುವರು. ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೆ ನಾಶವಾಗುವರು. 33ನನ್ನ ಮಾತಿಗೆ ಕಿವಿಗೊಡುವವರಾದರೋ ಸುರಕ್ಷಿತವಾಗಿರುವರು, ಕೇಡಿಗೆ ಭಯಪಡದೆ ನೆಮ್ಮದಿಯಾಗಿ ಬಾಳುವರು.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy