YouVersion Logo
Search Icon

ಓಬದ್ಯ 1

1
1ಓಬದ್ಯನು ಕಂಡ ದೈವದರ್ಶನ: ಎದೋಮ್ ನಾಡಿನ ವಿಷಯವಾಗಿ ಸ್ವಾಮಿ ಸರ್ವೇಶ್ವರ ಇಂತೆನ್ನುತ್ತಾರೆ:
ಎದೋಮಿನ ನಾಶ
“ಹೊರಡಿರಿ, ಎದೋಮಿನ ಮೇಲೆ ಯುದ್ಧಮಾಡಲು ತೆರಳೋಣ” ಹೀಗೆಂದು ತಮ್ಮ ದೂತನ ಮುಖಾಂತರ ಸರ್ವೇಶ್ವರ ರಾಷ್ಟ್ರಗಳಿಗೆ ಹೇಳಿಕಳುಹಿಸಿದ್ದಾರೆ. ಅವರಿಂದ ಬಂದ ಈ ಸಮಾಚಾರವನ್ನು ನಾವು ಕೇಳಿದ್ದೇವೆ. 2“ಎದೋಮೇ, ಇಗೋ, ರಾಷ್ಟ್ರಗಳಲ್ಲಿ ನಿನ್ನನ್ನು ಅತ್ಯಲ್ಪಳನ್ನಾಗಿ ಮಾಡುತ್ತೇನೆ. ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ. 3ನಿನ್ನ ದುರಹಂಕಾರ ನಿನ್ನನ್ನು ವಂಚಿಸಿದೆ.” ‘ಉನ್ನತಸ್ಥಾನದಲ್ಲಿ ವಾಸವಾಗಿದ್ದೇನೆ; ಬಂಡೆಗಳ ಬಿರುಕುಗಳಲ್ಲಿ ಭದ್ರವಾಗಿದ್ದೇನೆ; ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು?’ ಎನ್ನುತ್ತಿರುವೆ. 4ಅದಕ್ಕೆ ಸರ್ವೇಶ್ವರ: “ನೀನು ಹದ್ದಿನ ಮಟ್ಟದಲ್ಲಿ ಹಾರಾಡುತ್ತಿದ್ದರೂ ನಕ್ಷತ್ರಮಂಡಲದಲ್ಲಿ ನೆಲೆಗೊಂಡಿದ್ದರೂ ಅಲ್ಲಿಂದಲೂ ನಿನ್ನನ್ನು ಇಳಿಸಿಬಿಡುತ್ತೇನೆ,” ಎನ್ನುತ್ತಾರೆ. 5ನಿನ್ನಲ್ಲಿಗೆ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? 6ಆದರೆ ಏಸಾವಿನ ಆಸ್ತಿಪಾಸ್ತಿ ಸಂಪೂರ್ಣವಾಗಿ ಸೂರೆಯಾಗಿದೆ. 7ನನ್ನ ಮಿತ್ರಮಂಡಲಿಯವರೇ ನಿನ್ನನ್ನು ಬೆನ್ನಟ್ಟಿಬಂದಿದ್ದಾರೆ. ನಿನ್ನನ್ನು ಗಡಿಯಾಚೆ ತಳ್ಳಿಬಿಟ್ಟಿದ್ದಾರೆ. ನಿನ್ನ ಆಪ್ತರೇ ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ. ನಿನ್ನ ಅನ್ನ ತಿಂದವರೇ ತಿಳಿಗೇಡಿಯಾದ ನಿನಗೆ ಉರುಲೊಡ್ಡಿದ್ದಾರೆ 8ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಲ್ಲಿ ಎದೋಮಿನ ಜ್ಞಾನಿಗಳನ್ನೂ ಏಸಾವಿನ ಪರ್ವತದ ಬುದ್ಧಿಜೀವಿಗಳನ್ನೂ ನಾನು ಅಳಿಸದೆ ಬಿಡುವೆನೋ? 9ತೇಮಾನ್ ನಾಡೇ, ನಿನ್ನ ಶೂರರು ದಿಗ್ಭ್ರಾಂತರಾಗುವರು; ಏಸಾವಿನ ಪ್ರಾಂತ್ಯದಲ್ಲಿ ಎಲ್ಲರೂ ಹತರಾಗುವರು.
ಎದೋಮಿನ ದ್ರೋಹ
10“ನಿನ್ನ ತಮ್ಮನಾದ ಯಕೋಬನ ವಿರುದ್ಧ ನಡೆಸಿದ ಹಿಂಸಾಕೃತ್ಯಗಳಿಗಾಗಿ ನೀನು ಅವಮಾನಕ್ಕೊಳಗಾಗುವೆ. ನಿತ್ಯನಾಶನಕ್ಕೆ ಈಡಾಗುವೆ. 11ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ ನೀನು ತಟಸ್ಥನಾಗಿ ನೋಡುತ್ತಾ ನಿಂತಿದ್ದೆ. ಪರಕೀಯರು ಆತನ ಪುರದ್ವಾರಗಳನ್ನು ಪ್ರವೇಶಿಸಿ ಜೆರುಸಲೇಮಿನ ಸೊತ್ತಿಗಾಗಿ ಚೀಟುಹಾಕಿದ ದಿನದಂದು ನೀನೂ ಅವರಂತೆ ಇದ್ದೆ. 12ನಿನ್ನ ತಮ್ಮನ ದುರ್ದಿನದಲ್ಲಿ, ಅವರ ಅಪಾಯಕಾಲದಲ್ಲಿ ನೀನು ಸುಮ್ಮನೆ ನೋಡುತ್ತಾ ನಿಂತಿರಬಾರದಿತ್ತು. ಯೆಹೂದ್ಯರ ವಿನಾಶದಿನದಲ್ಲಿ ಸಂತೋಷಪಡಬಾರದಿತ್ತು. ಅವರ ಸಂಕಟಕಾಲದಲ್ಲಿ ನೀನು ಹಿಗ್ಗಬಾರದಿತ್ತು. 13ನನ್ನ ಜನರ ಆಪತ್ಕಾಲದಲ್ಲಿ ನೀನು ಅವರ ಪುರದ್ವಾರದೊಳಗೆ ಪ್ರವೇಶಿಸಬಾರದಿತ್ತು. ಅವರ ಸೊತ್ತಿಗೆ ನೀನು ಕೈಹಾಕಬಾರದಿತ್ತು. 14ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅವರನ್ನು ಕೊಲ್ಲುವುದಕ್ಕಾಗಿ ಕೂಡುದಾರಿಗಳಲ್ಲಿ ನಿಲ್ಲಬಾರದಿತ್ತು. ತುರ್ತುಪರಿಸ್ಥಿತಿಯಲ್ಲಿ ತಪ್ಪಿಸಿಕೊಂಡವರನ್ನು ಶತ್ರುವಿನ ಕೈಗೆ ಒಪ್ಪಿಸಬಾರದಿತ್ತು.
ರಾಷ್ಟ್ರಗಳಿಗೆ ನ್ಯಾಯನಿರ್ಣಯ
15“ಸಮಸ್ತ ರಾಷ್ಟ್ರಗಳಿಗೂ ಸರ್ವೇಶ್ವರನ ದಿನ ಸಮೀಪಿಸಿದೆ. ನೀನು ಮಾಡಿದ್ದನ್ನೆ ನಿನಗೂ ಮಾಡಲಾಗುವುದು. ನಿನ್ನ ದುಷ್ಕೃತ್ಯವು ನಿನ್ನ ತಲೆಗೇ ಬರುವುದು. 16ಜನರೇ, ಪವಿತ್ರಪರ್ವತದ ಮೇಲೆ ನನ್ನ ದಂಡನೆಯ ಕಹಿಪಾನಮಾಡಿದಿರಿ. ಅಂತೆಯೇ ಸಕಲ ರಾಷ್ಟ್ರಗಳೂ ಕಹಿಪಾನ ಮಾಡುವುವು. ಹೌದು, ಪದೇಪದೇ ಪಾನಮಾಡಿ ತೂರಾಡುವುವು. ಅಂತ್ಯದಲ್ಲಿ ಇಲ್ಲದಂತಾಗುವುವು.
ಇಸ್ರಯೇಲಿನ ವಿಜಯ
17“ಆದರೆ ತಪ್ಪಿಸಿಕೊಂಡವರು ಸಿಯೋನ್ ಪರ್ವತದ ಮೇಲೆ ಇರುವರು. ಅದು ಪುಣ್ಯಕ್ಷೇತ್ರ ಎನಿಸಿಕೊಳ್ಳುವುದು; ಯಕೋಬನ ವಂಶಜರು ತಮ್ಮ ಸ್ವತ್ತನ್ನು ಮರಳಿ ಅನುಭವಿಸುವರು. 18ಯಕೋಬವಂಶ ಅಗ್ನಿಯಂತೆ; ಜೋಸೆಫನ ವಂಶ ಜ್ವಾಲೆಯಂತೆ. ಇವೆರಡೂ ಸೇರಿ ಕೂಳೆಯಂತೆ ಇರುವ ಏಸಾವಿನ ವಂಶವನ್ನು ಧಗಧಗನೆ ದಹಿಸಿ ಭಸ್ಮಮಾಡುವುವು. ಏಸಾವಿನ ವಶದಲ್ಲಿ ಯಾರೂ ಉಳಿಯುವುದಿಲ್ಲ.” ಇದು ಸರ್ವೇಶ್ವರಸ್ವಾಮಿಯ ನುಡಿ. 19ಆಗ ದಕ್ಷಿಣವಲಯದವರು ಏಸಾವಿನ ಪರ್ವತವನ್ನು ಸ್ವಾಧೀನಪಡಿಸಿಕೊಳ್ಳುವರು. ಪಶ್ಚಿಮದ‌ ಬಯಲು ಸೀಮೆಯವರು ಫಿಲಿಷ್ಟಿಯವನ್ನೂ ಎಫ್ರಯಿಮ್ ಮತ್ತು ಸಮಾರ್ಯದ ಭೂಮಿಯನ್ನೂ ವಶಪಡಿಸಿಕೊಳ್ಳುವರು. ಬೆನ್ಯಾಮಿನ ವಂಶಜರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು. 20ಸೆರೆಹೋಗಿರುವ ಇಸ್ರಯೇಲಿನ ಸೈನಿಕರು ಕಾನಾನ್ ನಾಡನ್ನು ಚಾರೆಪತಿನವರೆಗೆ ವಶಪಡಿಸಿಕೊಳ್ಳುವರು. ಸೆಪಾರದ ಎಂಬಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 21ಉದ್ಧಾರಕನು ಏಸಾವಿನ ಪರ್ವತವನ್ನು ಆಳಲು ಸಿಯೋನ್ ಪರ್ವತವನ್ನು ಏರುವನು. ಆಗ ರಾಜ್ಯಭಾರವು ಸರ್ವೇಶ್ವರಸ್ವಾಮಿಯದಾಗಿರುವುದು.”

Currently Selected:

ಓಬದ್ಯ 1: KANCLBSI

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy