YouVersion Logo
Search Icon

ಯೆರೆಮೀಯ 1

1
ಪ್ರವಾದಿ ಯೆರೆಮೀಯನ ಗ್ರಂಥ ಪರಿಚಯ
1ಇವು ಯೆರೆಮೀಯನ ಪ್ರವಚನಗಳು. ಈತ ಬೆನ್ಯಮೀನ್ ಪ್ರಾಂತ್ಯಕ್ಕೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನು. ಇವನ ತಂದೆ ಹಿಲ್ಕೀಯನು. 2ಜುದೇಯದ ಅರಸನೂ ಅಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರುಷದಲ್ಲಿ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬಂತು. 3ಅಲ್ಲದೆ, ಜುದೇಯದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಜುದೇಯದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರುಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ಜನರು ಸೆರೆಹೋಗುವ ತನಕ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬರುತ್ತಿತ್ತು.
ಯೆರೆಮೀಯನಿಗೆ ಪ್ರವಾದಿ ಪಟ್ಟ
4ಸರ್ವೇಶ್ವರ ಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು : 5“ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೇ; ನೀನು ಉದರದಿಂದ ಹೊರಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೇ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.”
6ಅದಕ್ಕೆ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನಾನು ಮಾತುಬಲ್ಲವನಲ್ಲ, ಇನ್ನೂ ತರುಣ,” ಎಂದು ಬಿನ್ನವಿಸಿದೆ.
7ಆಗ ಸರ್ವೇಶ್ವರ ನನಗೆ, “ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು. 8ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು,” ಎಂದು ಹೇಳಿದರು.
9ಬಳಿಕ ಸ್ವಾಮಿ ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ; 10ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” ಎಂದರು
ಎರಡು ದರ್ಶನಗಳು
11ಇದಲ್ಲದೆ ಸರ್ವೇಶ್ವರ ಸ್ವಾಮಿ, “ಎಲೈ ಯೆರೆಮೀಯನೇ, ಏನು ನೋಡುತ್ತಿರುವೆ?” ಎಂದು ಕೇಳಿದರು.
ಅದಕ್ಕೆ ನಾನು, ಚಚ್ಚರ#1:11 ಅಥವಾ : ಬಾದಾಮಿಮರ; ಹೂಬಿಡಲು ಆ ಮರ ವಸಂತಕಾಲಕ್ಕಾಗಿ ಕಾದಿರುವಂತೆ ದೇವರು ತಮ್ಮ ಮಾತನ್ನು ಈಡೇರಿಸಲು ಕಾತರರಾಗಿದ್ದಾರೆ. ಮರದ ರೆಂಬೆಯನ್ನು ನೋಡುತ್ತಿದ್ದೇನೆ,” ಎಂದೆ.
12ಆಗ ಸ್ವಾಮಿ ನನಗೆ, “ಸರಿಯಾಗಿ ನೋಡಿದೆ; ನನ್ನ ಮಾತನ್ನು ನೆರವೇರಿಸುವುದಕ್ಕೆ ಎಚ್ಚರಗೊಂಡಿದ್ದೇನೆಂದು ತಿಳಿದುಕೊ” ಎಂಬುದಾಗಿ ಹೇಳಿದರು.
13ಮತ್ತೆ ಸರ್ವೇಶ್ವರ ನನಗೆ, “ಇನ್ನೂ ಏನು ನೋಡುತ್ತಿರುವೆ?” ಎಂದರು.
ಅದಕ್ಕೆ ನಾನು, “ಉರಿಯುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯೊಂದನ್ನು ನೋಡುತ್ತಿದ್ದೇನೆ. ಅದರ ಬಾಯಿ ಉತ್ತರದಿಂದ ಇತ್ತ ಬಾಗಿಕೊಂಡಿದೆ,” ಎಂದೆ.
14ಅದಕ್ಕೆ ಸ್ವಾಮಿ ನನಗೆ ಹೀಗೆಂದರು : “ಈ ನಾಡಿನ ನಿವಾಸಿಗಳೆಲ್ಲರ ಮೇಲೆ ಉತ್ತರದಿಂದ ಕೇಡು ಉಕ್ಕಿಬರುವುದು. 15ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು. 16ನನ್ನ ಸ್ವಜನರು ನನ್ನನ್ನೆ ತೊರೆದುಬಿಟ್ಟು, ಅನ್ಯದೇವತೆಗಳಿಗೆ ಬಲಿಯರ್ಪಿಸಿ, ತಮ್ಮ ಕೈಯಿಂದ ನಿರ್ಮಿಸಿದ ಮೂರ್ತಿಗಳಿಗೆ ಆರಾಧನೆ ಮಾಡುತ್ತಿದ್ದಾರೆ;#1:16 ಅಥವಾ: ಧೂಪಹಾಕುತ್ತಿದ್ದಾರೆ ಇಂಥ ಅಧರ್ಮಕ್ಕೆಲ್ಲ ನಾನು ಅವರಿಗೆ ವಿಧಿಸುವ ದಂಡನೆಗಳನ್ನು ತಿಳಿಸುವೆನು, ಕೇಳು : 17ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು. 18ನಾನು ಹೇಳುವುದನ್ನು ಗಮನದಿಂದ ಕೇಳು - ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ. 19ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ".

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy