ಯೆಶಾಯ 1
1
1ಜುದೇಯ ನಾಡಿನ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಜುದೇಯ ಮತ್ತು ಜೆರುಸಲೇಮ್ ನಗರವನ್ನು ಕುರಿತು ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ ಇದು :
ದೈವದ್ರೋಹಿಯಾದ ಇಸ್ರಯೇಲ್ ಜನಾಂಗ
2ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ. 3ಎತ್ತು ಯಜಮಾನನನ್ನು, ಕತ್ತೆ ಒಡೆಯನ ಕೊಟ್ಟಿಗೆಯನ್ನು ಬಲ್ಲವು. ಆದರೆ ನನ್ನ ಪ್ರಜೆಗಳಾದ ಇಸ್ರಯೇಲರಿಗೆ ಅಷ್ಟೂ ತಿಳಿದಿಲ್ಲ. ಅವರಿಗೆ ಏನೂ ತಿಳಿಯುವುದಿಲ್ಲ.
4ಎಲೈ ಪಾಪಿಷ್ಠ ಜನವೇ, ದೋಷಭರಿತ ಪ್ರಜೆಯೇ, ದುಷ್ಟಪೀಳಿಗೆಯೇ, ಭ್ರಷ್ಟಸಂತಾನವೇ, ನಿಮ್ಮ ಗತಿಯನ್ನು ಏನೆಂದು ಹೇಳಲಿ. ನೀವು ಸರ್ವೇಶ್ವರನನ್ನು ತೊರೆದಿದ್ದೀರಿ. ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಧಿಕ್ಕರಿಸಿದ್ದೀರಿ. ಅವರಿಗೆ ಬೆನ್ನುಮಾಡಿ ಬೇರೆಯಾಗಿದ್ದೀರಿ. 5ಏಕೆ ಹೆಚ್ಚು ಹೆಚ್ಚಾಗಿ ದ್ರೋಹಗೈದು ದಂಡನೆಗೆ ಗುರಿ ಆಗುತ್ತೀರಿ? ನಿಮ್ಮ ತಲೆತುಂಬ ಗಾಯ, ನಿಮ್ಮ ಹೃದಯವೆಲ್ಲ ದುರ್ಬಲ. 6ಅಂಗಾಲಿನಿಂದ ನಡುನೆತ್ತಿಯವರೆಗೆ ಪೆಟ್ಟು ಬಾಸುಂಡೆ, ಮಾಗದ ಗಾಯಗಳೇ ಹೊರತು ಮತ್ತೇನೂ ಅಲ್ಲ. ಅವನ್ನು ತೊಳೆದು ಕಟ್ಟಿಲ್ಲ. ಎಣ್ಣೆ ಸವರಿ ಮೃದುವಾಗಿಸಿಲ್ಲ.
7ನಿಮ್ಮ ನಾಡು ಹಾಳುಬಿದ್ದಿದೆ: ನಿಮ್ಮ ಪಟ್ಟಣಗಳು ಸುಟ್ಟು ಭಸ್ಮವಾಗಿವೆ. ನಿಮ್ಮ ಕಣ್ಮುಂದೆಯೆ ನಿಮ್ಮ ಭೂಮಿಯನ್ನು ಅನ್ಯಜನರು ಕಬಳಿಸುತ್ತಿದ್ದಾರೆ. ಅನ್ಯದೇಶಗಳು ನಾಶವಾದಂತೆಯೇ ನಿಮ್ಮ ನಾಡು ಹಾಳಾಗಿದೆ. 8ಸಿಯೋನ್ ನಗರವೊಂದೇ ಮುತ್ತಿಗೆಗೆ ತುತ್ತಾದ ಪಟ್ಟಣದಂತೆ, ದ್ರಾಕ್ಷಾತೋಟದ ಅಟ್ಟಣಿಯಂತೆ, ಸೌತೆ ಹೊಲದ ಗುಡಿಸಿಲಿನಂತೆ ಸುರಕ್ಷತೆಯ ಅವಕಾಶವಿಲ್ಲದೆ ಇದೆ. 9ಸೇನಾಧೀಶ್ವರ ಸರ್ವೇಶ್ವರ ಕೆಲವು ಜನರನ್ನಾದರೂ ಉಳಿಸದೆಹೋಗಿದ್ದರೆ, ಸೊದೋಮಿನ ಗತಿಯೇ, ಗೊಮೋರದ ದುರ್ದೆಶೆಯೇ ನಮಗೆ ಸಂಭವಿಸುತ್ತಿತ್ತು.
10ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. 11ಸ್ವಾಮಿ ಇಂತೆನ್ನುತ್ತಾರೆ : “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ. 12ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು? 13ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ. 14ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ.
15ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ. 16ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕೃತ್ಯಗಳು ನೀಗಿಹೋಗಲಿ. 17ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
18ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ರಕ್ತಗೆಂಪಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವುವು. 19ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. 20ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
ಪಾಪಭರಿತ ನಗರ
21ಅಯ್ಯೋ, ಸುವ್ರತೆಯಂತಿದ್ದ ನಗರಿ ಈಗ ಸೂಳೆಯಂತಿದ್ದಾಳಲ್ಲ! ನ್ಯಾಯನೀತಿವಂತರಿಗೆ ನೆಲೆಯಾಗಿದ್ದವಳು ಈಗ ಕೊಲೆಪಾತಕರಿಗೆ ಬೀಡಾಗಿದ್ದಾಳಲ್ಲಾ! 22ಎಲೌ ನಗರಿಯೇ, ನಿನ್ನ ಬೆಳ್ಳಿ ಕಪ್ಪಾಗಿದೆ. ನಿನ್ನ ದ್ರಾಕ್ಷಾರಸ ನೀರಾಗಿದೆ. 23ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.
24ಇಂತಿರಲು ಒಡೆಯರು, ಸೇನಾಧೀಶ್ವರರು, ಇಸ್ರಯೇಲರ ಪರಾಕ್ರಮಿಯು ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ನನ್ನ ಶತ್ರುಗಳಾದ ನಿಮ್ಮ ಮೇಲೆ ಸೇಡು ತೀರಿಸುವೆನು. ನನ್ನ ವಿರೋಧಿಗಳಾದ ನಿಮ್ಮನ್ನು ಸದೆಬಡಿದು ಶಾಂತನಾಗಿರುವೆನು. 25ನಿಮ್ಮ ಮೇಲೆ ಕೈಮಾಡುವೆನು. ನಿಮ್ಮ ಲೋಹವನ್ನು ಪುಟಹಾಕಿ ನಿಮ್ಮ ಕಲ್ಮಷವನ್ನು ಪೂರ್ತಿಯಾಗಿ ಕರಗಿಸಿಬಿಡುವೆನು. ಕಂದುಕೆಸರನ್ನೆಲ್ಲ ತೊಡೆದುಹಾಕುವೆನು. 26ಪೂರ್ವದಲ್ಲಿದ್ದಂತೆ ನಿಮಗೆ ನ್ಯಾಯಾಧಿಪತಿಗಳನ್ನೂ ಮಂತ್ರಿಗಳನ್ನೂ ಮತ್ತೆ ನೇಮಿಸುವೆನು. ಆಗ ಜೆರುಸಲೇಮ್ ‘ಧರ್ಮಪುರಿ’, ‘ಸುವ್ರತನಗರಿ’ ಎನಿಸಿಕೊಳ್ಳುವುದು.
27ಸಿಯೋನಿನ ಉದ್ಧಾರ ನ್ಯಾಯನೀತಿಯಿಂದ; ಅದಕ್ಕೆ ಹಿಂದಿರುಗುವವರ ಉದ್ಧಾರ ಸತ್ಸಂಬಂಧದಿಂದ; 28ನಾಶವಾಗುವರು ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ; ನಿರ್ಮೂಲವಾಗುವರು ಸ್ವಾಮಿಯನ್ನು ತೊರೆದವರು ನಿಶ್ಚಯವಾಗಿ.
29ನೀವು ಬಯಸಿದ ಎಲ್ಲಾ ಮರಗಳನ್ನು ಪೂಜಿಸಿದ್ದಕ್ಕಾಗಿ ಹೇಸುವಿರಿ: ಪವಿತ್ರ ವನಗಳನ್ನು ನಿರ್ಮಿಸಿದ್ದಕ್ಕಾಗಿ ನಾಚಿಕೆಪಡುವಿರಿ. 30ಎಲೆ ಒಣಗಿದ ಮರಗಳಂತೆ ಆಗುವಿರಿ. ಜಲವಿಲ್ಲದ ವನದಂತಾಗುವಿರಿ. 31ಒಣಹುಲ್ಲಿನ ಮೆದೆಗೆ ಬೆಂಕಿಯ ಕಿಡಿಬಿದ್ದು ಸುಟ್ಟುಹೋಗುವಂತೆ ನಿಮ್ಮಲ್ಲಿನ ಬಲಿಷ್ಠರು ತಮ್ಮ ದುಷ್ಕೃತ್ಯಗಳಿಂದಲೇ ನಾಶವಾಗುವರು. ಈ ವಿನಾಶವನ್ನೂ ಯಾರಿಂದಲೂ ತಡೆಗಟ್ಟಲಾಗದು.
Currently Selected:
ಯೆಶಾಯ 1: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.