YouVersion Logo
Search Icon

2 ಕೊರಿಂಥಿಯರಿಗೆ 1

1
ಪೀಠಿಕೆ
1ಕೊರಿಂಥದಲ್ಲಿರುವ ದೇವರ ಸಭೆಗೂ ಅಖಾಯ ಸೀಮೆಯಲ್ಲಿರುವ ಎಲ್ಲಾ ದೇವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಸಹೋದರ ತಿಮೊಥೇಯನೊಡನೆ ಸೇರಿ ಬರೆಯುವ ಪತ್ರ.
2ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಆಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
ಕಷ್ಟಸಂಕಟಗಳಲ್ಲಿ ಸಾಂತ್ವನ
3ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣಾಭರಿತ ತಂದೆ; ಸಕಲ ಸಾಂತ್ವನವನ್ನೀಯುವ ದೇವರು. 4ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ಅವರು ನಮ್ಮನ್ನು ಸಂತೈಸುತ್ತಾರೆ. ಹೀಗೆ ದೇವರಿಂದ ದೊರೆತ ಆದರಣೆಯಿಂದ ವಿವಿಧ ಸಂಕಷ್ಟಗಳಲ್ಲಿ ನರಳುತ್ತಿರುವವರನ್ನು ಸಂತೈಸುವುದಕ್ಕೆ ನಾವು ಶಕ್ತರಾಗುತ್ತೇವೆ. 5ಕ್ರಿಸ್ತಯೇಸುವಿನ ಯಾತನೆಯು ನಮ್ಮ ಬಾಳಿನಲ್ಲಿ ತುಂಬಿರುವಂತೆ ಅವರ ಮುಖಾಂತರ ಲಭಿಸುವ ಸಾಂತ್ವನವೂ ನಮ್ಮಲ್ಲಿ ತುಂಬಿರುತ್ತದೆ. 6ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ. ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದೂ ನಿಮ್ಮ ಆದರಣೆಗಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ. 7ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಂಬುದು ನಮಗೆ ಗೊತ್ತಿದೆ.
8ಸಹೋದರರೇ, ಏಷ್ಯಾ ಪ್ರಾಂತ್ಯದಲ್ಲಿ ನಮಗೊದಗಿದ ಹಿಂಸೆಬಾಧೆಗಳು ನಿಮಗೆ ತಿಳಿದಿವೆಯಷ್ಟೆ. ಅಲ್ಲಿ ಸಹಿಸಲಸಾಧ್ಯವಾದಷ್ಟು ಸಂಕಟವನ್ನು ಅನುಭವಿಸಬೇಕಾಯಿತು. ನಾವು ಬದುಕುವ ಆಶೆಯನ್ನೇ ಬಿಡಬೇಕಾಯಿತು. 9ನಿಜವಾಗಿಯೂ ನಮಗೆ ಮರಣದಂಡನೆ ವಿಧಿಸಲಾಗಿದೆಯೆಂದು ಭಾವಿಸಿದೆವು. ಇದರಿಂದ ನಾವು ನಮ್ಮ ಸ್ವಂತ ಶಕ್ತಿಯನ್ನೇ ನಂಬಿಕೊಳ್ಳದೆ, ಸತ್ತವರನ್ನು ಪುನರುತ್ಥಾನಗೊಳಿಸುವ ದೇವರಲ್ಲಿ ಭರವಸೆಯಿಡುವಂತೆ ಹೀಗಾಯಿತು. 10-11ದೇವರೇ ನಮ್ಮನ್ನು ಈ ಭಯಂಕರ ಮರಣದಿಂದ ಪಾರುಮಾಡಿದರು. ಇನ್ನು ಮುಂದಕ್ಕೂ ಪಾರುಮಾಡುವರು. ಹೌದು, ನೀವು ಸಹ ನಮಗಾಗಿ ಪ್ರಾರ್ಥಿಸುತ್ತಾ ನಮ್ಮೊಡನೆ ಸಹಕರಿಸಿದರೆ, ಇನ್ನು ಮುಂದಕ್ಕೂ ನಮ್ಮನ್ನು ಪಾರುಮಾಡುವರು ಎಂಬ ಭರವಸೆಯಿಂದ ಇದ್ದೇವೆ. ಇದರ ಫಲವಾಗಿ ನಮಗೆ ದೊರೆಯುವ ವರದಾನಗಳಿಗಾಗಿ ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸುವರು.
ಯೇಸು, ದೇವರ ತಥಾಸ್ತು
12ಲೋಕದ ಜನರೊಡನೆ, ವಿಶೇಷವಾಗಿ ನಿಮ್ಮೊಡನೆ ವ್ಯವಹರಿಸುವಾಗ ನಾವು ಕೇವಲ ಮಾನವ ಜ್ಞಾನವನ್ನಾಶ್ರಯಿಸದೆ ದೇವರ ಅನುಗ್ರಹವನ್ನೇ ಆಶ್ರಯಿಸಿ ನಡೆದುಕೊಂಡೆವು. ದೇವದತ್ತವಾದ ನಿಷ್ಕಪಟ ಮನಸ್ಸಿನಿಂದಲೂ ಪರಿಶುದ್ಧತೆಯಿಂದಲೂ ವರ್ತಿಸಿದೆವು. ಇದಕ್ಕೆ ನಮ್ಮ ಮನಸ್ಸೇ ಸಾಕ್ಷಿ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. 13-14ನೀವು ಓದಿ ಗ್ರಹಿಸಿಕೊಳ್ಳಬಲ್ಲ ವಿಷಯಗಳನ್ನು ಮಾತ್ರವೇ ನಾವು ನಿಮಗೆ ಬರೆದಿದ್ದೇವೆ. ನಮ್ಮನ್ನು ನೀವಿನ್ನೂ ಭಾಗಶಃ ಅರಿತುಕೊಂಡಿದ್ದೀರಿ. ಮುಂದಕ್ಕಾದರೂ ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರೆಂಬ ಭರವಸೆ ನನಗಿದೆ. ಹಾಗೆಯೇ ‘ಪ್ರಭುವಿನ ದಿನದಂದು ನಾವು ನಿಮ್ಮನ್ನು ಕುರಿತು ಹೆಮ್ಮೆಪಡುವಂತೆ ನೀವೂ ನಮ್ಮನ್ನು ಕುರಿತು ಹೆಮ್ಮೆಪಡುವಿರಿ.
15ಈ ನಂಬಿಕೆಯಿಂದಲೇ ನಿಮಗೆ ಇಮ್ಮಡಿ ಸಂತೋಷ ಲಭಿಸಬೇಕೆಂದು ನಾನು ನಿಮ್ಮ ಬಳಿಗೆ ಈ ಮುಂಚಿತವಾಗಿಯೇ ಬರಬೇಕೆಂದಿದ್ದೆ. 16ನಾನು ಮಕೆದೋನಿಯಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ನಿಮ್ಮನ್ನು ಭೇಟಿಮಾಡಬೇಕು ಎಂದಿದ್ದೆ; ಮಕೆದೋನಿಯದಿಂದ ಹಿಂದಿರುಗುವಾಗ ಇನ್ನೊಮ್ಮೆ ಭೇಟಿಯಿತ್ತು ನಿಮ್ಮ ನೆರವಿನಿಂದ ಜುದೇಯ ಪ್ರವಾಸವನ್ನು ಕೈಗೊಳ್ಳಬೇಕೆಂದು ಆಲೋಚಿಸಿದೆ. 17ಹೀಗೆ ಆಲೋಚಿಸುತ್ತಿದ್ದಾಗ ನಾನು ಚಂಚಲಚಿತ್ತನಾಗಿದ್ದೆನೋ? ಕೇವಲ ಪ್ರಾಪಂಚಿಕನಂತೆ ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವನಂತಿದ್ದೆನೋ? 18ಎಂದಿಗೂ ಇಲ್ಲ, ನಾನು ನಿಮಗೆ ಕೊಟ್ಟ ಮಾತು ದ್ವಂದ್ವಾರ್ಥವುಳ್ಳದ್ದಾಗಿರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ. 19ನಾವು, ಅಂದರೆ ಸಿಲ್ವಾನ, ತಿಮೊಥೆಯ ಮತ್ತು ನಾನು, ಪ್ರಚಾರಮಾಡಿದ ದೇವರ ಪುತ್ರರಾದ ಯೇಸುಕ್ರಿಸ್ತರು, ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವರಲ್ಲ, ಅವರು ದೇವರ ತಥಾಸ್ತು ಆಗಿದ್ದಾರೆ. 20ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ ‘ಹೌದು’ ಎಂಬ ಉತ್ತರ ಸಾಕ್ಷಾತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ ‘ಆಮೆನ್’ ಎನ್ನುತ್ತೇವೆ. 21ನಿಮ್ಮನ್ನೂ ನಮ್ಮನ್ನೂ ಕ್ರಿಸ್ತಯೇಸುವಿನಲ್ಲಿ ಒಂದಾಗಿಸಿ ಸ್ಥಿರಪಡಿಸಿದವರು ದೇವರೇ. ನಮ್ಮನ್ನು ಅಭಿಷೇಕಿಸಿದವರೂ ಮೀಸಲಾಗಿಟ್ಟವರೂ ದೇವರೇ. 22ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.
23ನಿಮಗೆ ತೊಂದರೆ ಆಗಬಾರದೆಂದು ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತಿದ್ದೇವೆಂದು ತಿಳಿಯಬೇಡಿ; ವಿಶ್ವಾಸದಲ್ಲಿ ನೀವು ದೃಢರಾಗಿಯೇ ಇದ್ದೀರಿ. ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮೊಡನೆ ಸಹಕರಿಸುತ್ತೇವೆ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy