YouVersion Logo
Search Icon

1 ಸಮುವೇಲನು 1

1
ಸಮುವೇಲನ ತಂದೆ ತಾಯಿಗಳು
1ಎಫ್ರಯಿಮ್ ಬೆಟ್ಟದ ಪ್ರದೇಶದಲ್ಲಿ ರಾಮಾ ಒಂದು ಊರು.#1:1 ಅಥವಾ : ರಾಮಾತಾಯಿಮ್. ಆ ಊರಲ್ಲಿ ‘ಎಲ್ಕಾನ’ ಎಂಬ ಒಬ್ಬ ಮನುಷ್ಯನಿದ್ದ. ಇವನು ಯೆರೋಹಾಮನ ಮಗ, ಎಲೀಹುವಿನ ಮೊಮ್ಮಗ ಹಾಗು ತೋಹುವಿನ ಮರಿಮಗ. ಈ ತೋಹು ಎಂಬುವನು ಎಫ್ರಯಿಮ್ಯನಾದ ಚೂಫನ ಮಗ. 2ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ. ಇನ್ನೊಬ್ಬಳು ಪೆನಿನ್ನ. ಪೆನಿನ್ನಗೆ ಮಕ್ಕಳು ಇದ್ದರು; ಆದರೆ ಹನ್ನಳಿಗೆ ಇರಲಿಲ್ಲ. 3ಎಲ್ಕಾನನು ಪ್ರತಿ ವರ್ಷ ರಾಮಾದಿಂದ ಶಿಲೋವಿಗೆ ಹೋಗಿ ಸೇನಾಧೀಶ್ವರರಾದ#1:3 ಅಥವಾ : ಸರ್ವಶಕ್ತರಾದ. ಸರ್ವೇಶ್ವರಸ್ವಾಮಿಗೆ ಬಲಿದಾನವನ್ನು ಸಮರ್ಪಿಸಿ ಆರಾಧಿಸುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ, ಫೀನೆಹಾಸ ಎಂಬವರು ಸರ್ವೇಶ್ವರನ ಯಾಜಕರಾಗಿದ್ದರು. 4ಎಲ್ಕಾನನು ಬಲಿಯರ್ಪಿಸಿದಾಗಲೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲ ಗಂಡು-ಹೆಣ್ಣು ಮಕ್ಕಳಿಗೂ ಬಲಿಭೋಜನದ ಒಂದೊಂದು ಭಾಗವನ್ನು ಕೊಡುತ್ತಿದ್ದನು. 5ಅವನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದರೂ ಒಂದು ಭಾಗವನ್ನು ಮಾತ್ರ ಆಕೆಗೆ ಕೊಡುತ್ತಾ ಇದ್ದನು. ಏಕೆಂದರೆ ಸರ್ವೇಶ್ವರ ಆಕೆಗೆ ಮಕ್ಕಳನ್ನು ಕೊಟ್ಟಿರಲಿಲ್ಲ. 6ಇದಲ್ಲದೆ, “ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ,” ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು. 7ವರ್ಷ ವರ್ಷವೂ ಇದು ಹಾಗೆಯೆ ನಡೆಯುತ್ತಿತ್ತು; “ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು. 8ಆಗ ಆಕೆಯ ಗಂಡ ಎಲ್ಕಾನನು ಆಕೆಗೆ, “ಹನ್ನಾ, ಏಕೆ ಅಳುತ್ತಿರುವೆ? ಊಟಮಾಡದಿರುವುದಕ್ಕೆ ಕಾರಣ ಏನು? ವ್ಯಸನಪಡುವುದು ಏಕೆ? ಹತ್ತು ಮಕ್ಕಳಿಗಿಂತಲು ನಾನು ನಿನಗೆ ಹೆಚ್ಚಲ್ಲವೆ?” ಎಂದನು
ಹನ್ನಳ ಪ್ರಾರ್ಥನೆ
9ಶಿಲೋವಿನಲ್ಲಿ ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ ಹನ್ನಳು ಎದ್ದು ಸರ್ವೇಶ್ವರನ ಮಂದಿರಕ್ಕೆ ಬಂದಳು. ಯಾಜಕ ಏಲಿಯನು ಆ ಮಂದಿರದ ದ್ವಾರದ ನಿಲುವು ಪಟ್ಟಿಗಳ ಬಳಿ ಒಂದು ಪೀಠದ ಮೇಲೆ ಕುಳಿತಿದ್ದನು. 10ಹನ್ನಳು ಬಹು ದುಃಖದಿಂದ ಕಣ್ಣೀರಿಡುತ್ತಾ ಸರ್ವೇಶ್ವರನಲ್ಲಿ ಹೀಗೆಂದು ಪ್ರಾರ್ಥಿಸಿದಳು: 11“ಸರ್ವಶಕ್ತರಾದ ಸರ್ವೇಶ್ವರಾ, ನಿಮ್ಮ ದಾಸಿ ಆದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿ. ಅವನನ್ನು ಅಮರಣಾಂತರ ನಿಮಗೇ ಸಮರ್ಪಿಸುವೆನು; ಅವನ ತಲೆಯ ಮೇಲೆ ಕ್ಷೌರಕತ್ತಿಯನ್ನು ಬರಗೊಡಿಸುವುದಿಲ್ಲ#1:11 ಮುಡಿಕತ್ತರಿಸದೆ ಬಿಡುವವನು ದೇವರಿಗೆ ಸಮರ್ಪಿತನು ಎಂಬುದರ ಸಂಕೇತ; ನ್ಯಾಯಸ್ಥಾಪಕರು 13:5ನ್ನು ನೋಡಿ ಎಂದು ಹರಕೆ ಮಾಡುತ್ತೇನೆ.”
12ಹನ್ನಳು ಬಹಳ ಹೊತ್ತಿನವರೆಗೆ ಸರ್ವೇಶ್ವರನ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾ ಇದ್ದಳು. ಏಲಿ ಆಕೆಯ ಬಾಯನ್ನು ಗಮನಿಸಿದನು. 13ಆಕೆ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾ ಇದ್ದಳು; ತುಟಿಗಳು ಅಲುಗಾಡುತ್ತಿದ್ದವು, ಶಬ್ದ ಮಾತ್ರ ಕೇಳಿಸುತ್ತಿರಲಿಲ್ಲ. ಆದುದರಿಂದ ಇವಳು ಕುಡಿದಿರಬೇಕೆಂದು ತಿಳಿದು, 14“ನಿನ್ನ ಕುಡಿತದ ಅಮಲು ಇನ್ನೂ ಇಳಿಯಲಿಲ್ಲವೆ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟುಹೋಗಲಿ,” ಎಂದನು.
15ಆಕೆ, “ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. 16ನಿಮ್ಮ ದಾಸಿಯಾದ ನನ್ನನ್ನು ಅಯೋಗ್ಯಳೆಂದು ನೆನಸಬೇಡಿ. ಈವರೆಗೂ ನನ್ನ ಅತಿಯಾದ ಚಿಂತೆಯನ್ನೂ ವ್ಯಥೆಯನ್ನೂ ಅರಿಕೆಮಾಡಿಕೊಳ್ಳುತ್ತಿದ್ದೆ,” ಎಂದು ಹೇಳಿದಳು.
17ಆಗ ಏಲಿ ಆಕೆಗೆ, “ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ,” ಎಂದನು. 18“ನಿಮ್ಮ ದಾಸಿಯಾದ ನನ್ನ ಮೇಲೆ ಕರುಣೆಯಿರಲಿ,” ಎಂದು ಹೇಳಿ ಆಕೆ ಅಲ್ಲಿಂದ ಹೊರಟುಹೋಗಿ ಊಟಮಾಡಿದಳು. ಬಳಿಕ ಅವಳ ದುಃಖ ದೂರವಾಯಿತು.
ಸಮುವೇಲನ ಜನನ ಮತ್ತು ಸಮರ್ಪಣೆ
19ಮಾರನೆಯ ದಿನ ಬೆಳಿಗ್ಗೆ ಅವರೆಲ್ಲರು ಎದ್ದು ಸರ್ವೇಶ್ವರನನ್ನು ಆರಾಧಿಸಿ ರಾಮಾದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಲು ಆಕೆ ಸರ್ವೇಶ್ವರನ ಅನುಗ್ರಹದಿಂದ ಗರ್ಭಿಣಿ ಆದಳು. 20ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. “ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ,” ಎಂದು ಹೇಳಿ ಆ ಮಗುವಿಗೆ ‘ಸಮುವೇಲ’ ಎಂದು ಹೆಸರಿಟ್ಟಳು.
21ವಾಡಿಕೆಯ ಪ್ರಕಾರ ಎಲ್ಕಾನನು ಕುಟುಂಬ ಸಹಿತವಾಗಿ ಸರ್ವೇಶ್ವರನಿಗೆ ವಾರ್ಷಿಕ ಬಲಿಯನ್ನು ಅರ್ಪಿಸಲು ಹಾಗು ಹರಕೆಯನ್ನು ತೀರಿಸಲು ಶಿಲೋವಿಗೆ ಹೋಗಲು ಸಿದ್ಧನಾದ. 22ಹನ್ನಳು, “ಮಗನು ಮೊಲೆಬಿಡುವವರೆಗೂ ನಾನು ಬರುವುದಿಲ್ಲ; ಅವನು ಸರ್ವೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಬಾಳಿನುದ್ದಕ್ಕೂ ಅಲ್ಲಿಯೇ ಇರುವ ಹಾಗೆ ಆಮೇಲೆ ತೆಗೆದುಕೊಂಡು ಬರುತ್ತೇನೆ,” ಎಂದು ಹೇಳಿದಳು. 23ಗಂಡನಾದ ಎಲ್ಕಾನನು, “ಹಾಗೆಯೇ ಆಗಲಿ; ನಿನಗೆ ಸರಿತೋರಿದಂತೆ ಮಾಡು. ಮಗು ಮೊಲೆಬಿಡುವವರೆಗೆ ಮನೆಯಲ್ಲೇ ಇರು. ಸರ್ವೇಶ್ವರ ನಿನ್ನ#1:23 ಅಥವಾ : ತಮ್ಮ. ಮಾತನ್ನು ದೃಢವಾಗಿಸಲಿ,” ಎಂದನು. ಮಗು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಆರೈಕೆ ಮಾಡಿದಳು. 24ಅನಂತರ ಆಕೆ ಮಗನನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗೂ ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು. 25ಆ ಹೋರಿಯನ್ನು ಬಲಿದಾನ ಮಾಡಿದ ಮೇಲೆ ಮಗುವನ್ನು ಏಲಿಯ ಬಳಿಗೆ ತರಲಾಯಿತು. 26ಹನ್ನಳು ಏಲಿಗೆ, “ಸ್ವಾಮೀ, ನಿಮ್ಮ ಜೀವದಾಣೆ, ಹಿಂದೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿಮ್ಮ ಹತ್ತಿರ ನಿಂತಿದ್ದ ಮಹಿಳೆ ನಾನೇ. 27ಸರ್ವೇಶ್ವರ ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. 28ಇವನನ್ನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟಿದ್ದೇನೆ. ಬದುಕಿರುವ ತನಕ ಇವನು ಅವರಿಗೇ ಪ್ರತಿಷ್ಠಿತನು,” ಎಂದು ಹೇಳಿದಳು. ಬಳಿಕ ಅವರು ಸರ್ವೇಶ್ವರಸ್ವಾಮಿಯನ್ನು ಆರಾಧಿಸಿದರು.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy