ಯೋಹಾನ 21
KANJV-BSI
21
ಯೇಸು ಗಲಿಲಾಯದ ಸಮುದ್ರದ ಬಳಿಯಲ್ಲಿ ತನ್ನ ಶಿಷ್ಯರಿಗೆ ತಿರಿಗಿ ದರ್ಶನಕೊಟ್ಟದ್ದು. ಸಮಾಪ್ತಿಯ ವಚನಗಳು
1ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತಿರಿಗಿ ತನ್ನನ್ನು ತೋರಿಸಿಕೊಂಡನು. 2ತನ್ನನ್ನು ತೋರಿಸಿಕೊಂಡ ರೀತಿ ಯಾವದಂದರೆ - ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಕುಮಾರರೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿದ್ದರು. 3ಅವರಿಗೆ ಸೀಮೋನ ಪೇತ್ರನು - ನಾನು ಮೀನು ಹಿಡಿಯುವದಕ್ಕೆ ಹೋಗುತ್ತೇನೆಂದು ಹೇಳಲು ಅವರು - ನಾವೂ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಒಂದು ಮೀನೂ ಸಿಕ್ಕಲಿಲ್ಲ. 4ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು; ಆದಾಗ್ಯೂ ಶಿಷ್ಯರು ಆತನನ್ನು ಯೇಸುವೆಂದು ತಿಳಿಯಲಿಲ್ಲ. 5ಆಗ ಯೇಸು ಅವರನ್ನು - ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ ಎಂದು ಕೇಳಲು ಅವರು ಇಲ್ಲವೆಂದು ಉತ್ತರಕೊಟ್ಟರು. 6ಆತನು ಅವರಿಗೆ - ನೀವು ದೋಣಿಯ ಬಲಗಡೆಯಲ್ಲಿ ಬಲೆ ಬೀಸಿದರೆ ಸಿಕ್ಕುವದು ಎಂದು ಹೇಳಿದನು. ಅವರು ಹಾಗೆ ಬೀಸಿದಾಗ ಮೀನುಗಳು ಬಹಳ ಹೆಚ್ಚಾಗಿ ಸಿಕ್ಕಿದ್ದರಿಂದ ಬಲೆಯನ್ನು ಎಳೆಯುವದಕ್ಕೆ ಆಗದೆ ಹೋಯಿತು. 7ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ - ಅವರು ಸ್ವಾಮಿಯವರು ಎಂದು ಹೇಳಿದನು. ಸ್ವಾಮಿಯವರೆಂದು ಸೀಮೋನ ಪೇತ್ರನು ಕೇಳಿ ಮೈ ಮೇಲೆ ಬಟ್ಟೆಯಿಲ್ಲದವನಾಗಿದ್ದರಿಂದ ಒಲ್ಲಿಯನ್ನು ಸುತ್ತಿಕೊಂಡು ಸಮುದ್ರದಲ್ಲಿ ದುಮುಕಿದನು. 8ದಡವು ದೂರವಾಗಿರದೆ ಹೆಚ್ಚುಕಡಿಮೆ ಇನ್ನೂರು ಮೊಳದಲ್ಲಿದ್ದರಿಂದ ಉಳಿದ ಶಿಷ್ಯರು ಮೀನು ತುಂಬಿದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. 9ಅವರು ಭೂಮಿಗೆ ಇಳಿದಾಗ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿ ಸಹಿತವಾಗಿ ಕಂಡರು. 10ಯೇಸು ಅವರಿಗೆ - ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ ಎಂದು ಹೇಳಲು 11ಸೀಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ಭೂಮಿಗೆ ಎಳಕೊಂಡು ಬಂದನು. ಅದು ನೂರೈವತ್ತು ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆ ಹರಿಯಲಿಲ್ಲ. 12ಯೇಸು ಅವರಿಗೆ - ಬಂದು ಊಟಮಾಡಿರಿ ಎಂದು ಹೇಳಿದನು. ಶಿಷ್ಯರು ಆತನನ್ನು ಸ್ವಾಮಿಯವರೆಂದು ತಿಳಿದಿದ್ದರಿಂದ ನೀನಾರೆಂದು ವಿಚಾರಿಸುವದಕ್ಕೆ ಅವರಲ್ಲಿ ಒಬ್ಬರೂ ಧೈರ್ಯಪಡಲಿಲ್ಲ. 13ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು; ಹಾಗೆಯೇ ಮೀನನ್ನೂ ಕೊಟ್ಟನು. 14ಯೇಸು ಸತ್ತು ಜೀವದಿಂದೆದ್ದ ಮೇಲೆ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
15ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನನ್ನು - ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ ಎಂದು ಕೇಳಲು ಅವನು - ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ ಅಂದನು. ಆತನು ಅವನಿಗೆ - ನನ್ನ ಕುರಿಮರಿಗಳನ್ನು ಮೇಯಿಸು ಎಂದು ಹೇಳಿದನು. 16ಆತನು ತಿರಿಗಿ ಎರಡನೆಯ ಸಾರಿ ಅವನನ್ನು - ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ ಎಂದು ಕೇಳಲು ಅವನು - ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ ಅಂದನು. ಆತನು ಅವನಿಗೆ - ನನ್ನ ಕುರಿಗಳನ್ನು ಕಾಯಿ ಎಂದು ಹೇಳಿದನು. 17ಆತನು ಮೂರನೆಯ ಸಾರಿ - ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಮಮತೆ ಇಟ್ಟಿದ್ದೀಯೋ ಎಂದು ಕೇಳಿದನು. ಮೂರನೆಯ ಸಾರಿ ಆತನು - ನನ್ನ ಮೇಲೆ ಮಮತೆ ಇಟ್ಟಿದ್ದೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು - ಸ್ವಾಮೀ, ನೀನು ಎಲ್ಲಾ ಬಲ್ಲೆ; ನಿನ್ನ ಮೇಲೆ ನಾನು ಮಮತೆ ಇಟ್ಟಿದ್ದೇನೆಂಬದು ನಿನಗೆ ತಿಳಿದದೆ ಅಂದನು. ಅವನಿಗೆ ಯೇಸು - ನನ್ನ ಕುರಿಗಳನ್ನು ಮೇಯಿಸು. 18ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯೌವನಸ್ಥನಾಗಿದ್ದಾಗ ನೀನೇ ನಡುವನ್ನು ಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿಕೊಂಡು ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂಡು ಹೋಗುವನು ಎಂದು ಹೇಳಿದನು. 19ಅವನು ಎಂಥಾ ಸಾವಿನಿಂದ ದೇವರನ್ನು ಮಹಿಮೆಪಡಿಸುವನು ಎಂಬದನ್ನು ಆತನು ಈ ಮಾತಿನಿಂದ ಸೂಚಿಸಿದನು. ಇದನ್ನು ಹೇಳಿ ಆತನು ಅವನಿಗೆ - ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
20ಪೇತ್ರನು ತಿರುಗಿಕೊಂಡು ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವದನ್ನು ಕಂಡನು. ಆ ಶಿಷ್ಯನು ಊಟದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ - ಸ್ವಾಮೀ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದವನೇ. 21ಇವನನ್ನು ಪೇತ್ರನು ಕಂಡು ಯೇಸುವನ್ನು - ಸ್ವಾಮೀ, ಇವನ ವಿಷಯವೇನು ಎಂದು ಕೇಳಲು 22ಯೇಸು ಅವನಿಗೆ - ನಾನು ಬರುವ ತನಕ ಇವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. 23ಇದರ ದೆಸೆಯಿಂದ ಆ ಶಿಷ್ಯನು ಸಾಯುವದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಆತನು ಹೇಳಿದನು.
24ಈ ಸಂಗತಿಗಳನ್ನು ಬರೆದು ಇವುಗಳ ವಿಷಯವಾಗಿ ಸಾಕ್ಷಿ ಹೇಳುವ ಶಿಷ್ಯನು ಇವನೇ. ಇವನ ಸಾಕ್ಷಿ ಸತ್ಯವೆಂದು ನಾವು ಬಲ್ಲೆವು.
25ಇದಲ್ಲದೆ ಯೇಸು ಮಾಡಿದ್ದು ಇನ್ನೂ ಬಹಳವಿದೆ; ಅದನ್ನೆಲ್ಲಾ ಒಂದೊಂದಾಗಿ ಬರೆಯುವದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು ನಾನು ನೆನಸುತ್ತೇನೆ.

Kannada J.V. Bible -  ಕನ್ನಡ ಸತ್ಯವೇದವು J.V.

Copyright © 2016 by The Bible Society of India

Used by permission. All rights reserved worldwide.

Learn More About ಕನ್ನಡ ಸತ್ಯವೇದವು J.V. (BSI)