ಮಕ್ಕಳಿಗಾಗಿ ಬೈಬಲ್ಮಾದರಿ

ಅನೇಕ ವರ್ಷಗಳ ಹಿಂದೆ ದೇವರು ತನ್ನ ದೂತನಾದ ಗಬ್ರಿಯೇಲನನ್ನು ಮರಿಯಳು ಎಂಬ ಯೆಹೂದ್ಯಳಾದ ಕನ್ಯೆಯ ಬಳಿಗೆ ಕಳುಹಿಸಿದನು. ಆ ದೂತನು ಹೀಗೆ ಹೇಳಿದನು: “ನಿನಗೊಬ್ಬ ಮಗನು ಹುಟ್ಟುವನು, ಆತನಿಗೆ ಯೇಸು ಎಂದು ಹೆಸರಿಡಬೇಕು. ಆತನು ದೇವರ ಮಗನು ಎಂದು ಅನಿಸಿಕೊಳ್ಳುವನು, ಆತನು ಸದಾಕಾಲಕ್ಕೂ ಆಳುವನು”.
ಆ ಯೌವನಸ್ಥ ಹುಡುಗಿಯು, “ಇದು ಹೇಗೆ ಸಾಧ್ಯ? ನನಗಿನ್ನು ಮದುವೆ ಆಗಿಲ್ಲವಲ್ಲ” ಎಂದು ದೂತನಿಗೆ ಕೇಳಿದಳು. ಆ ದೂತನು ಆಕೆಗೆ ಆ ಮಗುವು ದೇವರಿಂದ ಕೊಡಲ್ಪಡುವದರಿಂದ ಮನುಷ್ಯನೊಬ್ಬನು ಅದಕ್ಕೆ ತಂದೆಯಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದನು.
ದೇವದೂತನು ಮರಿಯಳಿಗೆ ಆಕೆಯ ಬಂಧುವಾದ ಎಲೀಸಬೇತಳ ಕುರಿತು ತಿಳಿಸಿದನು. ಎಲೀಸಬೇತಳು ಮುದುಕಿಯಾಗುತ್ತಿದ್ದರೂ ಆಕೆಗೆ ಮಗು ಹುಟ್ಟಲಿಕ್ಕಿತ್ತು. ಅದೊಂದು ಮಹತ್ಕಾರ್ಯವಾಗಿದ್ದಂತೆ ಮರಿಯಳದ್ದು ಮಹತ್ಕಾರ್ಯವೇ ಆಗಿರುತ್ತದೆಂದು ಹೇಳಿದನು. ಮರಿಯಳು ತಕ್ಷಣವೇ ಎಲೀಸಬೇತಳ ಮನೆಗೆ ಹೋದಳು. ಅವರಿಬ್ಬರೂ ದೇವರನ್ನು ಸ್ತುತಿಸಿದರು.
ಮರಿಯಳು ಯೋಸೇಫನೆಂಬ ಮನುಷ್ಯನೊಂದಿಗೆ ಮದುವೆಯಾಗಲಿಕ್ಕಿದ್ದಳು. ಮರಿಯಳು ಒಂದು ಮಗುವಿಗೆ ತಾಯಿಯಾಗಲಿರುವ ವಿಷಯವನ್ನು ಕೇಳಿ ಅವನು ದುಃಖ ಪಟ್ಟನು. ಆ ಮಗುವಿನ ತಂದೆ ಇನ್ನೊಬ್ಬ ಮನುಷ್ಯನಾಗಿರ ಬಹುದೆಂದು ಅಂದುಕೊಂಡನು.
ದೇವರ ದೂತನು ಯೋಸೇಫನಿಗೆ ಕನಸ್ಸಿನಲ್ಲಿ ಕಾಣಿಸಿಕೊಂಡು ಮರಿಯಳಿಗೆ ಹುಟ್ಟಲಿರುವ ಮಗುವು ದೇವರ ಮಗನೆಂದು ಮತ್ತು ಆ ಮಗುವನ್ನು ನೋಡಿಕೊಳ್ಳುವದಕ್ಕೆ ಯೋಸೇಫನು ಮರಿಯಳಿಗೆ ಸಹಾಯ ಮಾಡಬೇಕೆಂದು ಹೇಳಿದನು.
ಯೋಸೇಫನು ದೇವರ ಮಾತನನ್ನು ನಂಬಿದನು ಮತ್ತು ಆತನಿಗೆ ವಿಧೇಯನಾದನು. ಅವನು ದೇಶದ ಅಧಿಕಾರಿಯ ಅಪ್ಪಣೆಗೆ ವಿಧೇಯನಾದನು. ಹೊಸ ಅಪ್ಪಣೆಯ ಪ್ರಕಾರ ಅವನು ಮರಿಯಳೊಂದಿಗೆ ಅವನ ಸ್ವಂತ ಊರಾದ ಬೆತ್ಲೆಹೇಮಿಗೆ ಹೋಗಿ ಅಲ್ಲಿ ತೆರಿಗೆಯನ್ನು ಕೊಡಬೇಕಿತ್ತು.
ಮರಿಯಳು ಮಗುವಿಗೆ ಜನ್ಮ ನೀಡುವ ಸಮಯವು ಬಂದಿತ್ತು. ಆದರೆ ಅವರಿಗೆ ಇಳುಕೊಳ್ಳುವದಕ್ಕೆ ಸ್ಥಳ ಸಿಕ್ಕಲಿಲ್ಲ, ಎಲ್ಲಾ ಛತ್ರಗಳು ತುಂಬಿಹೋಗಿದ್ದವು. ಯೋಸೇಫನು ಸ್ಥಳಕ್ಕಾಗಿ ತುಂಬಾ ಹುಡುಕಿದನು.
ಕಡೆಗೆ ಯೋಸೇಫನು ದನದ ಕೊಟ್ಟಿಗೆಯಲ್ಲಿ ಸ್ವಲ್ಪ ಸ್ಥಳವನ್ನು ಕಂಡುಕೊಂಡನು. ಅವರು ಅಲ್ಲಿ ಇಳುಕೊಂಡರು. ಆ ರಾತ್ರಿ ಮಗುವಾದ ಯೇಸು ಹುಟ್ಟಿದನು. ಮರಿಯಳು ಮಗುವನ್ನು ಗೋದಲಿಯಲ್ಲಿ ಮಲಗಿಸಿದಳು. ಗೋದಲಿಯಲ್ಲಿ ದನಗಳಿಗಾಗಿ ಮೇವು ಹಾಕಲಾಗುತ್ತದೆ.
ಅಲ್ಲಿಂದ ಸ್ವಲ್ಪ ದೂರದಲ್ಲಿ ಕುರುಬರು ಹೊಲದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು. ದೇವದೂತನು ಅವರಿಗೆ ಕಾಣಿಸಿಕೊಂಡು ಮಗುವು ಹುಟ್ಟಿದ ಸಂತೋಷದ ಸುದ್ದಿಯನ್ನು ತಿಳಿಸಿದನು.
“ಈ ಹೊತ್ತು ನಿಮಗೋಸ್ಕರ ದಾವೀದನ ಊರಿನಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ ಆತನು ಕರ್ತನಾಗಿರುವ ಕ್ರಿಸ್ತನೇ. ಆ ಮಗುವು ಗೋದಲಿಯಲ್ಲಿ ಮಲಗಿರುವದನ್ನು ಕಾಣುವಿರಿ.”
ಪಕ್ಕನೆ ದೇವದೂತರ ದೊಡ್ಡ ಗುಂಪು ಅವರಿಗೆ ಕಾಣಿಸಿತು. “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ, ಮನುಷ್ಯರೊಳಗೆ ಸಮಾಧಾನ” ಎಂದು ಅವರು ದೇವರನ್ನು ಕೊಂಡಾಡುತ್ತಾ ಹೇಳಿದರು.
ಕುರುಬರು ಬೇಗನೇ ಗೋದಲಿಯ ಬಳಿಗೆ ಹೋದರು. ಆ ಮಗುವನ್ನು ನೋಡಿದ ಮೇಲೆ ದೇವದೂತರು ಅವರಿಗೆ ತಿಳಿಸಿದ ಸಂಗತಿಯನ್ನು ಅಲ್ಲಿದ್ದ ಜನರಿಗೆಲ್ಲಾ ಹೇಳಿದರು.
ನಾಲ್ವತ್ತು ದಿನಗಳಾದ ಮೇಲೆ ಯೋಸೇಫನು ಮತ್ತು ಮರಿಯಳು ಮಗುವನ್ನು ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಅವನು ಆ ಮಗುವಿಗಾಗಿ ದೇವರನ್ನು ಸ್ತುತಿಸಿದನು. ಅದೇ ಸಮಯದಲ್ಲಿ ಅಲ್ಲಿಗೆ ಅನ್ನಳು ಎಂದ ಹೆಣ್ಣು ಮಗಳು ಬಂದು ಆಕೆ ಕೂಡ ದೇವರನ್ನು ಸ್ತುತಿಸಿದಳು.
ಅವರಿಬ್ಬರೂ ಯೇಸು ದೇವರ ಮಗನೆಂದು ಮತ್ತು ವಾಗ್ದಾನದ ರಕ್ಷಕನು ಆಗಿದ್ದಾನೆಂದು ತಿಳಿದಿದ್ದರು. ಯೋಸೇಫನು ಎರಡು ಪಕ್ಷಿಗಳನ್ನು ಯಜ್ಞವಾಗಿ ಅರ್ಪಿಸಿದನು. ದೇವ ಜನರು ಹೊಸದಾಗಿ ಹುಟ್ಟಿದ ತಮ್ಮ ಮೊದಲನೆಯ ಮಗನನ್ನು ದೇವರಿಗೆ ಒಪ್ಪಿಸಬೇಕಿತ್ತು. ಬಡವರಾದವರು ಆ ಸಮಯದಲ್ಲಿ ಎರಡು ಪಕ್ಷಿಗಳನ್ನು ಅರ್ಪಿಸಬೇಕಿತ್ತು.
ಸ್ವಲ್ಪ ಸಮಯದ ನಂತರ ಕಾಣಿಸಿಕೊಂಡ ವಿಶೇಷವಾದ ನಕ್ಷತ್ರವೊಂದು ಮೂಡಣ ದೇಶದ ಪಂಡಿತರನ್ನು ಯೆರೂಸಲೇಮಿಗೆ ನಡೆಸಿತು. ಅವರು ಅರಸನಾದ ಹೆರೋದನ ಅರಮನೆಗೆ ಬಂದು, “ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿ? ನಾವು ಆತನನ್ನು ಆರಾಧಿಸಲು ಬಂದಿರುವೆವು” ಎಂದು ಹೇಳಿದರು.
ಪಂಡಿತರು ಹೇಳಿದ್ದನ್ನು ಅರಸನಾದ ಹೆರೋದನು ಕೇಳಿ ಗಲಿಬಿŮÉೂಂಡನು. ಅವನು ಅವರನ್ನು ಕರೆದು, “ನೀವು ಆತನನ್ನು ಕಂಡುಕೊಂಡ ಮೇಲೆ, ಆತನ ಎಲ್ಲಿದ್ದಾನೆಂದು ಬಂದು ನನಗೆ ತಿಳಿಸಿರಿ. ನಾನೂ ಆತನನ್ನು ಆರಾಧಿಸುವೆನು” ಎಂದು ಹೇಳಿದನು. ಆದರೆ ಹೆರೋದನು ಸುಳ್ಳು ಹೇಳಿದನು. ಅವನು ಯೇಸುವನ್ನು ಕೊಂದು ಬಿಡಲು ಆಲೋಚಿಸಿದನು.
ಆ ನಕ್ಷತ್ರವು ಪಂಡಿತರನ್ನು ಮರಿಯಳು ಮತ್ತು ಯೋಸೇಫರು ಮಗುವಿನೊಂದಿಗೆ ವಾಸಮಾಡುತ್ತಿದ್ದ ಮನೆಗೆ ನಡೆಸಿತು. ಪಂಡಿತರು ಆ ಮಗುವಿನ ಮುಂದೆ ಅಡ್ಡ ಬಿದ್ದು ಆರಾಧಿಸಿದರು. ಮತ್ತು ತಮ್ಮ ಗಂಟುಗಳನ್ನು ಬಿಚ್ಚಿ ಆ ಮಗುವಿಗೆ ಬೆಲೆಯುಳ್ಳ ಬಂಗಾರವನ್ನು ಮತ್ತು ಸುಗಂಧ ದ್ರವ್ಯಗಳನ್ನು ಕಾಣಿಕೆಯಾಗಿ ಕೊಟ್ಟರು.
ಪಂಡಿತರು ಬೇರೆ ದಾರಿ ಹಿಡಿದು ತಮ್ಮ ಮನೆಗೆ ಹೋಗಬೇಕೆಂದು ದೇವರು ಅವರಿಗೆ ಕನಸ್ಸಿನಲ್ಲಿ ಕಾಣಿಸಿಕೊಂಡು ತಿಳಿಸಿದನು. ಅವರು ಹಾಗೆಯೇ ಮಾಡಿದರು. ಹೆರೋದನು ಕೋಪಗೊಂಡನು. ಯೇಸುವನ್ನು ನಾಶಮಾಡಲು ಆಲೋಚಿಸಿದ ಆ ಕೆಟ್ಟ ಅರಸನು ಬೆತ್ಲೆಹೇಮ್ ಮತ್ತು ಅದರ ಸುತ್ತಣ ಊರುಗಳಲ್ಲಿದ್ದ ಅನೇಕ ಮಕ್ಕಳನ್ನು ಕೊಲ್ಲಿಸಿದನು.
ಆದರೆ ಹೆರೋದನಿಗೆ ದೇವರ ಮಗನಿಗೆ ಹಾನಿಮಾಡಲು ಸಾಧ್ಯವಾಗಲಿಲ್ಲ! ದೇವರು ಯೋಸೇಫನಿಗೆ ಕನಸ್ಸಿನಲ್ಲಿ ಹೆರೋದನ ಕುಯುಕ್ತಿಯನ್ನು ತಿಳಿಸಿ ಮಗುವನ್ನು, ಮರಿಯಳನ್ನು ಐಗುಪ್ತ ದೇಶಕ್ಕೆ ಕರಕೊಂಡು ಹೋಗಲು ಹೇಳಿದನು.
ಹೆರೋದನು ಸತ್ತ ಮೇಲೆ ಯೋಸೇಫನು ಯೇಸುವನ್ನು, ಮರಿಯಳನ್ನು ಐಗುಪ್ತದಿಂದ ಹಿಂದಕ್ಕೆ ಕರೆದುಕೊಂಡು ಬಂದನು. ಅವರು ಗಲಿಲಾಯ ಸಮುದ್ರದ ಬಳಿಯಲ್ಲಿ ಇದ್ದ ನಜರೇತ್ ಎಂಬ ಸಣ್ಣ ಊರಿನಲ್ಲಿ ವಾಸವಾಗಿದ್ದರು.
ಮುಕ್ತಾಯ
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಫಾರ್ ಚಿಲ್ಡ್ರನ್, Inc. ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleforchildren.org/languages/kannada/stories.php